ಎತ್ತಿನಹೊಳೆ ಯೋಜನೆ ಮೊದಲ ಹಂತದ ಕಾಮಗಾರಿ ಪೂರ್ಣಗೊಂಡಿದ್ದು, ಸೆ.6 ರಂದು ವಿದ್ಯುಕ್ತವಾಗಿ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಹಕಾರ ಸಚಿವರಾದ ಕೆ.ಎನ್.ರಾಜಣ್ಣ ತಿಳಿಸಿದ್ದಾರೆ.
ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಹೆಬ್ಬನಹಳ್ಳಿ (ವಿತರಣಾ ತೊಟ್ಟಿ-4)ಎತ್ತಿನಹೊಳೆ ಸಮಗ್ರ ಕುಡಿಯುವ ನೀರು ಪೂರೈಕೆ ಯೋಜನೆಯ ಮೊದಲನೇ ಹಂತದ ಲೋಕಾರ್ಪಣೆ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆಸಿ ಸ್ಥಳ ಪರಿಶೀಲನೆ ನಡೆಸಿದರು.
ಬಳಿಕ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಸೆ.6 ರಂದು ಗೌರಿ ಹಬ್ಬದ ದಿನ ಎತ್ತಿನಹೊಳೆಗೆ ಶುಭ ಚಾಲನೆ ಸಿಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರಾದ ಡಿ.ಕೆ ಶಿವಕುಮಾರ್ ಹಾಗೂ ಹಲವು ಸಚಿವರು ಭಾಗಿಯಾಗಲಿದ್ದಾರೆ ಎಂದರು.
ಪಶ್ಚಿಮ ಮುಖವಾಗಿ ಹರಿಯುವ ನದಿ ನೀರನ್ನು ಪೂರ್ವಾಭಿಮುಖವಾಗಿ ತಿರುಗಿಸುವ ವಿನೂತನ ಯೋಜನೆ ಇದಾಗಿದೆ. ಒಟ್ಟು 7 ಪೈಪ್‌ಲೈನ್ ಮೂಲಕ ನೀರು ಮೇಲೆತ್ತಲಾಗುತ್ತಿದೆ. ಇದಕ್ಕಾಗಿ ನೀರನ್ನು ಸಂಗ್ರಹ ಮಾಡಲಾಗಿದೆ. ಮುಂದಿನ ವರ್ಷದ ವೇಳೆಗೆ ಅರಸೀಕೆರೆ ಹಾಗೂ ಜಿಲ್ಲೆಯ ಬೇರೆ ಭಾಗಕ್ಕೆ ನೀರು ಹರಿಯಲಿದೆ ಎಂದು ಹೇಳಿದರು.
ಪ್ರಸ್ತುತ ನಾಲ್ಕನೇ ವಿತರಣಾ ತೊಟ್ಟಿಯಿಂದ ವಾಣಿವಿಲಾಸ ಸಾಗರದತ್ತ ಲಿಫ್ಟ್ ಮಾಡಿದ ನೀರು ಹರಿಯುತ್ತಿದೆ. ಎಲ್ಲ ಅಡೆತಡೆ ನಿವಾರಣೆ ಮಾಡಿ ಯೋಜನೆ ಜಾರಿ ಮಾಡಲಾಗುತ್ತಿದೆ. ಉಪಮುಖ್ಯಮಂತ್ರಿ ಅವರು ವೈಯಕ್ತಿಕ ಮುತುವರ್ಜಿಯಿಂದ ಯೋಜನೆ ಕಾರ್ಯಗತಗೊಳಿಸಲು ಶ್ರಮಿಸಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಫಲಾನುಭವಿ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗಿದೆ. ಇದೊಂದು ಕುಡಿಯುವ ನೀರಿನ ಯೋಜನೆ. ಗುತ್ತಿಗೆದಾರರು ಸಾಕಷ್ಟು ಕಷ್ಟದ ಸನ್ನಿವೇಶ ಎದುರಿಸಿ ಯೋಜನೆ ಕಾರ್ಯಗತ ಮಾಡಿದ್ದಾರೆ. ಯೋಜನೆಗೆ ಸಹಕಾರ ನೀಡಿದ ಕೆಲ ಅಧಿಕಾರಿಗಳನ್ನೂ, ಜನರನ್ನು ಅಂದು ಸನ್ಮಾನ ಮಾಡಲಾಗುವುದು ಎಂದು ಸಚಿವ ರಾಜಣ್ಣ ತಿಳಿಸಿದರು.
ಕೆಲವೆಡೆ ಅರಣ್ಯ ಇಲಾಖೆಯ ಆಕ್ಷೇಪಗಳಿರುವುದರಿಂದ ಅಡಚಣೆ ಆಗಿದೆ. ಆದ್ದರಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಲಾಗುವುದು. ಅರಣ್ಯ ಇಲಾಖೆಯ ಆಕ್ಷೇಪಗಳಿರುವುದರಿಂದ ಪರ್ಯಾಯ ಭೂಮಿ ನೀಡಿ, ಮುಂದಿನ ವರ್ಷ ಅರಸೀಕೆರೆ ಸೇರಿದಂತೆ ಏಳು ಜಿಲ್ಲೆಗಳಿಗೂ ನೀರು ಪೂರೈಕೆ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
ಈ ಯೋಜನೆಯಿಂದ ನೀರಿನ ಅಗತ್ಯತೆ ಇರುವ ಬಯಲು ಸೀಮೆಯ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಉಳಿದ ಕಾಮಗಾರಿಗಳನ್ನು ಅತಿ ತುರ್ತಾಗಿ ಮಾಡಿ ಮುಂದಿನ ವರ್ಷ ಏಳು ಜಿಲ್ಲೆಯ ಕೆರೆಗಳಿಗೆ ನೀರು ಹರಿಸುತ್ತೇವೆ ಸಚಿವ ರಾಜಣ್ಣ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ತುಮಕೂರು | ಗೃಹ ಸಚಿವರ ಜಿಲ್ಲೆಯಲ್ಲಿ ಜೀತಪದ್ದತಿ ಇನ್ನೂ ಜೀವಂತ: 36 ಕೂಲಿ ಕಾರ್ಮಿಕರ ರಕ್ಷಣೆ
ಈ ಸಂದರ್ಭದಲ್ಲಿ ಸಂಸದರಾದ ಶ್ರೇಯಸ್ ಪಟೇಲ್, ರಾಜ್ಯ ಗೃಹ ಮಂಡಳಿ ಅಧ್ಯಕ್ಷರು ಹಾಗೂ ಶಾಸಕರಾದ ಕೆ.ಎಂ.ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಸಿ.ಸತ್ಯಭಾಮ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಆರ್.ಪೂರ್ಣಿಮಾ, ವಿಶ್ವೇಶ್ವರಯ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಸಣ್ಣಚಿತ್ತಯ್ಯ, ಉಪವಿಭಾಗಾಧಿಕಾರಿಗಳಾದ ಡಾ.ಎಂ.ಎನ್.ಶೃತಿ, ಮಾರುತಿ ಹಾಗೂ ಮತ್ತಿತರರು ಹಾಜರಿದ್ದರು.
