ಜಲ್ಲಿ ತುಂಬಿದ್ದ ಟಿಪ್ಪರ್ ಒಂದು ಹೋಟೆಲ್ ಒಳಗೆ ನುಗ್ಗಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಚಿಂತಾಮಣಿ ನಗರದಲ್ಲಿ ಗುರುವಾರ ಬೆಳಗ್ಗೆ 9 ಗಂಟೆಗೆ ನಡೆದಿದೆ.
ಚಿಂತಾಮಣಿ ತಾಲೂಕಿನ ಮಾಡಿಕೆರೆ ಗ್ರಾಮದ ಶಿವಾನಂದ(60), ಕುಮಾರ್(50) ಮೃತ ದುರ್ದೈವಿಗಳು. ಶಿವಾನಂದ್ ಅವರು ಶ್ರೀ ದರ್ಶಿನಿ ಹೋಟೆಲ್ ನ ಮಾಲೀಕರಾಗಿದ್ದು, ಕುಮಾರ್ ಅಡುಗೆ ಭಟ್ಟರಾಗಿದ್ದರು.
ಚಿಂತಾಮಣಿಯಿಂದ ಕೋಲಾರದ ಕಡೆಗೆ ಚಲಿಸುತ್ತಿದ್ದ ಟಿಪ್ಪರ್ ಒಂದು ಚಿಂತಾಮಣಿ ನಗರದ ಕೋಲಾರ ವೃತ್ತದಲ್ಲಿರುವ ಶ್ರೀ ದರ್ಶಿನಿ ಹೋಟೆಲ್ ಒಳಗೆ ವೇಗವಾಗಿ ನುಗ್ಗಿ ಡಿಕ್ಕಿ ಹೊಡೆದಿದೆ.
ಡಿಕ್ಕಿಯ ರಭಸಕ್ಕೆ ಹೋಟೆಲ್ ನ ಕ್ಯಾಷಿಯರ್ ಕುರ್ಚಿಯಲ್ಲಿ ಕುಳಿತಿದ್ದ ಶಿವಾನಂದ್ ಮತ್ತು ಪಕ್ಕದಲ್ಲೇ ತರಕಾರಿ ಹೆಚ್ಚುತ್ತಿದ್ದ ಕುಮಾರ್ ಇಬ್ಬರೂ ಸಾವನ್ನಪ್ಪಿದ್ದಾರೆ. ಮತ್ತೋರ್ವ ವ್ಯಕ್ತಿ ವಿನಾಯಕ ನಗರದ 50 ವರ್ಷದ ಶ್ರೀನಿವಾಸಬಾಬು ಕಾಲಿಗೆ ಪೆಟ್ಟುಬಿದ್ದಿದ್ದು ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಹೋಟೆಲ್‌ನಲ್ಲಿದ್ದ ಗ್ರಾಹಕರು ಸೇರಿದಂತೆ ಇತರೆ ಕೆಲಸಗಾರರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಇದನ್ನು ಓದಿದ್ದೀರಾ? ಚಿಕ್ಕಬಳ್ಳಾಪುರ | ನಾಡು ನುಡಿ ಸಾಹಿತ್ಯ ಬೆಳೆಸುವುದು ಅನಿವಾರ್ಯವಾಗಿದೆ: ಕಸಾಪ ಜಿಲ್ಲಾಧ್ಯಕ್ಷ ಕೋಡಿರಂಗಪ್ಪ
ಘಟನೆ ಸ್ಥಳಕ್ಕೆ ಚಿಕ್ಕಬಳ್ಳಾಪುರ ಅಡಿಷನಲ್ ಎಸ್ಪಿ ರಜಾ ಇಮಾಮ್ ಖಾಸಿಂ, ಸರ್ಕಲ್ ಇನ್ಸ್ಪೆಕ್ಟರ್ ಶಿವರಾಜ್, ನಗರ ಠಾಣೆಯ ಸಬ್ ಇನ್ಸ್ಪೆಕ್ಟರ್ ಭೇಟಿ ನೀಡಿದ್ದು, ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.