ಹಳೆಯ ದ್ವೇಷ ಇಟ್ಟುಕೊಂಡು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ನಗರಸಭಾ ಸದಸ್ಯನ ಕೊಲೆಗೆ ಯತ್ನ ನಡೆದಿದ್ದು, ಘಟನೆಗೆ ಸಂಬಂಧಿಸಿ ಓರ್ವ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಚಿಂತಾಮಣಿ ನಗರದ ವಾರ್ಡ್ ಸಂಖ್ಯೆ 3ರ ನಗರಸಭಾ ಸದಸ್ಯ ಸಿ ಕೆ ಶಬ್ಬೀರ್ ಅವರೊಂದಿಗೆ ಹಣ ಕೇಳುವ ವಿಚಾರಕ್ಕೆ ಮಾತುಕತೆ ನಡೆದಿದ್ದು, ಈ ವೇಳೆ ಡ್ರಾಗರ್‌ನಿಂದ ಕೊಲೆ ಮಾಡಲು ಯತ್ನಿಸಲಾಗಿದೆ. ಘಟನೆಯು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ವೆಂಕಟಗಿರಿಕೋಟೆಯಲ್ಲಿ ಬುಧವಾರ ರಾತ್ರಿ 8ರ ಸುಮಾರಿಗೆ ನಡೆದಿತ್ತು. ಈ ಘಟನೆಗೆ ಸಂಬಂಧಿಸಿ ಆರೋಪಿ ಮನ್ಸೂರ್ ಅಲಿಯಾಸ್ ಚೋಟು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ನಗರಸಭಾ ಸದಸ್ಯ ಸಿ ಕೆ ಶಬ್ಬೀರ್ ರಾತ್ರಿ ಸುಮಾರು 8ರ ವೇಳೆಗೆ ಅದೇ ವಾರ್ಡಿನ ವಾಸಿಯಾದ ಮನ್ಸೂರ್ ಅಲಿಯಾಸ್ ಚೋಟು, ನಗರಸಭಾ ಸದಸ್ಯನ ಬಳಿ ಬಂದು 100/-ರೂ ಹಣ ಕೊಡು ಎಂದು ಕೇಳಿದ್ದಾರೆ. ಈ ವೇಳೆ ಶಬ್ಬೀರ್ ಅವರು ತನ್ನ ಮಗನಾದ ಜಾಬೀರ್ ಅವರ ಬಳಿ ಹೋಗಿ ತೆಗೆದುಕೋ ಎಂತ ಹೇಳಿದ್ದರು. ಅದಕ್ಕೆ ಉತ್ತರಿಸಿದ್ದ ಆರೋಪಿ ಮನ್ಸೂರ್, ನಿಮ್ಮ ಜಾಬೀರ್ ಯಾರ ಜೊತೆಯಲ್ಲಿಯೋ ಮಾತನಾಡುತ್ತಿದ್ದಾನೆ ಎಂದು ಉತ್ತರಿಸಿದ್ದಾನೆ. ಇದೇ ವೇಳೆ ವಾಗ್ವಾದ ನಡೆದಾಗ, ತನ್ನ ಬೆನ್ನಿನ ಹಿಂದೆ ಇಟ್ಟುಕೊಂಡಿದ್ದ ಒಂದು ಡ್ರಾಗರ್ ತರಹದ ದೊಡ್ಡ ಚಾಕುವನ್ನು ಏಕಾಏಕಿ ತೆಗೆದು ತಿವಿಯಲು ಯತ್ನಿಸಿದ್ದಾನೆ. ಈ ವೇಳೆ ಸ್ಥಳೀಯರು ಬಂದು ನಗರಸಭಾ ಸದಸ್ಯನನ್ನು ಬಚಾವ್ ಮಾಡಿದ್ದಾರೆ.
ಇದನ್ನು ಓದಿದ್ದೀರಾ? ರಾಯಚೂರು | ಶಾಲಾ ಬಸ್ ಅಪಘಾತ: ರಸ್ತೆ ಗುಂಡಿಗಳನ್ನು ಮುಚ್ಚಲು ಆಗ್ರಹಿಸಿ ಹೆದ್ದಾರಿ ತಡೆದು ಪ್ರತಿಭಟನೆ
ಈ ಘಟನೆಯ ವಿಷಯ ತಿಳಿದ ತಕ್ಷಣ ನಗರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ವಿಜಿ ಕುಮಾರ್ ಹಾಗೂ ತಂಡ ಸ್ಥಳಕ್ಕೆ ಭೇಟಿ ನೀಡಿ, ಆರೋಪಿ ಮನ್ಸೂರ್‌ನನ್ನು ವಶಕ್ಕೆ ಪಡೆದಿದ್ದು, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
