ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕು ಹಟ್ಟಿ ಚಿನ್ನದ ಗಣಿ ಪಟ್ಟಣಕ್ಕೆ ರಸ್ತೆ, ನೀರು, ನೈರ್ಮಲ್ಯ ವಿದ್ಯುತ್ ದೀಪಗಳು ಸೇರಿದಂತೆ ವಿವಿಧ ಹಕ್ಕೊತ್ತಾಯಗಳನ್ನು ಈಡೇರಿಸಲು ಆಗ್ರಹಿಸಿ ಜಂಟಿ ಸಂಘಟನೆಗಳ ಮುಖಂಡರು, ಬುಡ್ಡೇಕಲ್ ಚೌಕ್‌ನಿಂದ ಪಟ್ಟಣ ಪಂಚಾಯತಿವರೆಗೆ ಪ್ರತಿಭಟನಾ ರ್‍ಯಾಲಿ ಮಾಡಿ, ಅನಿರ್ದಿಷ್ಟಾವಧಿ ಧರಣಿ ನಡೆಸಿದರು.
ಪಟ್ಟಣಕ್ಕೆ ಕುಡಿಯಲು ನೀರು, ಹೈಟೆಕ್ ಶೌಚಾಲಯ, ಪಟ್ಟಣದ ಜತ್ತಿ ಕಾಲೋನಿ ರಸ್ತೆ ದುರಸ್ಥಿ, ಪದವಿ, ಐಟಿಐ, ಡಿಪ್ಲೊಮೊ ಕಾಲೇಜು ಮಂಜೂರು, ಕಾಮ್ರೇಡ್ ಅಮರಗುಂಡಪ್ಪ ಬಸ್ ನಿಲ್ದಾಣದ ಜಾಗ ಒತ್ತುವರಿ, ಸರಿಯಾದ ಕಸ ವಿಲೇವಾರಿ, ಪಟ್ಟಣಕ್ಕೆ ರುದ್ರಭೂಮಿ, ಗ್ರಂಥಾಲಯ, ಪಾರ್ಕ್ ಮಂಜೂರು ಮಾಡಲು ಪ್ರತಿಭಟಿಸಿದರು.
ನಗರದಲ್ಲಿ ನಡೆದ ಬ್ರಿಡ್ಜ್ ಕಾಮಗಾರಿ ಎಸ್ಟಿಮೇಟ್‌ನಲ್ಲಿ ಈ ರಸ್ತೆಯನ್ನು ನಿರ್ಮಾಣ ಮಾಡಬೇಕೆಂದು ಇದ್ದರೂ ಸಹ ರಸ್ತೆ ನಿರ್ಮಾಣವಾಗಿಲ್ಲ. ಈ ಕೂಡಲೇ ರಸ್ತೆಯನ್ನು ಸಹ ಮಾಡಿ ಜನರ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಪ್ಲಾಸ್ಟಿಕ್, ಇತರೆ ವಸ್ತುಗಳಿಂದ ಮಲಿನವಾಗಿದ್ದು, ಕೂಡಲೇ ಈ ಕಸ ವಿಲೇವಾರಿ ಘಟಕ ನಿರ್ಮಿಸಿ ಸರಿಯಾದ ಸಮಯಕ್ಕೆ ಕಸ ವಿಲೇವಾರಿ ಮಾಡಬೇಕು ಎಂದು ಆಗ್ರಹಿಸಿದರು.
ಪಟ್ಟಣದ ಕಾಮ್ರೇಡ್ ಅಮರಗುಂಡಪ್ಪ ಬಸ್ ನಿಲ್ದಾಣ(ವಿಲೇಜ್ ಬಸ್ ಸ್ಟ್ಯಾಂಡ್) ದ ಜಾಗ ಒತ್ತುವರಿಯಾಗಿ ಬಸ್‌ಗಳು ನಿಲ್ಲಿಸಲು ಮತ್ತು ಸಾರ್ವಜನಿಕರು ನಿಲ್ಲಲು ಜಾಗವಿಲ್ಲದಂತಾಗಿದೆ. ಈಗಾಗಲೇ ಕೋರ್ಟ್ ಒತ್ತುವರಿ ಜಾಗ ತೆರವುಗೊಳಿಸಲು ಆದೇಶ ನೀಡಿ ದಶಕಗಳು ಕಳೆದರೂ ತೆರವುಗೊಳಿಸಿಲ್ಲ. ಆದ್ದರಿಂಲೇ ಈ ಕೂಡಲೇ ಒತ್ತುವರಿಯಾದ ಜಾಗ ತೆರವುಗೊಳಿಸಬೇಕು. ದೇಶಕ್ಕೆ ಸ್ವಾತಂತ್ರ್ಯ ಬಂದು 76 ವರ್ಷಗಳು ಕಳೆದರೂ ಪಟ್ಟಿಯಲ್ಲಿ ಸತ್ತ ಹೆಣಗಳನ್ನು ಹೂಳಲು ರುದ್ರಭೂಮಿಯೂ ಇಲ್ಲದಂತಾಗಿದೆ. ಕೂಡಲೇ ರುದ್ರಭೂಮಿ ಮಂಜೂರು ಮಾಡಬೇಕು. ಹಟ್ಟಿ ಪಟ್ಟಣಕ್ಕೆ ಪದವಿ ಕಾಲೇಜು ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಹಟ್ಟಿ ಪಟ್ಟಣದಲ್ಲಿ ಮಟಕಾ, ಗಾಂಜಾ, ಇಸ್ಪೀಟ್, ಕ್ರಿಕೆಟ್ ಬೆಟ್ಟಿಂಗ್ ದಂಧೆ ಹೆಚ್ಚಾಗಿದ್ದು, ಹಾದಿ ಬೀದಿಯಲ್ಲಿ ಮಟಕಾ ದಂಧೆ ನಿರ್ಭಯವಾಗಿ ನಡೆಯುತ್ತಿದ್ದರೂ ಆಡಳಿತ ಮತ್ತು ಪೊಲೀಸ್ ಅಧಿಕಾರಿಗಳು ಜಾಣ ಕುರುಡು ಪ್ರದರ್ಶನ ಮಾಡುತ್ತಿದ್ದಾರೆ. ಸಂಪೂರ್ಣವಾಗಿ ವಿದ್ಯಾರ್ಥಿ ಯುವಜನ ರೈತರು ಕಾರ್ಮಿಕರು ಸಂಪೂರ್ಣವಾಗಿ ಇದಕ್ಕೆ ಬಲಿಯಾಗಿ ಬದುಕನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಹಟ್ಟಿ ಪಟ್ಟಣದಲ್ಲಿ ಎಲ್ಲ ಸಿಎ ಸೈಟುಗಳನ್ನು ಒತ್ತುವರಿ ಮಾಡಿದ್ದು, ಕೂಡಲೇ ಅವುಗಳನ್ನು ತೆರವುಗೊಳಿಸಿ ನಾಗರಿಕ ಸೌಲಭ್ಯಕ್ಕೆ ಅನುಕೂಲವಾಗುವ ಗ್ರಂಥಾಲಯ ಪಾರ್ಕ್ ಭವನಗಳನ್ನು ನಿರ್ಮಿಸಬೇಕು. ಹಟ್ಟಿಯ ಸರ್ವಾಂಗೀಣ ಅಭಿವೃದ್ಧಿಗೆ ಮುಂದಾಗಬೇಕು ಎಂದು ಜಂಟಿ ಸಂಘಟನೆಗಳ ಮುಖಂಡರು ಒತ್ತಾಯಿಸಿದರು. ನಿರ್ಲಕ್ಷ್ಯ ತೋರಿದರೆ ಹಟ್ಟಿ ಪಟ್ಟಣದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಪಾದಯಾತ್ರೆ ನಡೆಸಲಾಗುವುದೆಂದು ಎಚ್ಚರಿಸಿದರು.
ಇದನ್ನು ಓದಿದ್ದೀರಾ? ಮಂಗಳೂರು | ಹಿರಿಯ ತುಳು ಕಲಾವಿದ ದೇವದಾಸ್ ಕಾಪಿಕಾಡ್‌ರನ್ನು ಇಕ್ಕಟ್ಟಿಗೆ ಸಿಲುಕಿಸಿದ ಬಿಜೆಪಿ!
ಈ ಸಂದರ್ಭದಲ್ಲಿ ಎಸ್ಎಫ್ಐ ಜಿಲ್ಲಾಧ್ಯಕ್ಷ ರಮೇಶ ವೀರಾಪೂರು, ಅಮರೇಶ ಗುರಿಕಾರ್, ನಿಂಗಪ್ಪ ಎಂ, ಕೆಪಿಆರ್ ಎಸ್ ಮುಖಂಡ ಹನುಮಂತ ಪಲಕನಮರಡಿ, ಮಹ್ಮದ್ ಹನೀಫ್, ಅಲ್ಲಾಭಕ್ಷ, ದಾವೂದ್, ಡಿವೈಎಫ್ಐ ಜಿಲ್ಲಾ ಮುಖಂಡ ಚೆನ್ನಬಸವ ಅಂಬೇಡ್ಕರ್ ನಗರ, 7ನೇ ವಾರ್ಡ್ ಅದ್ಯಕ್ಷ ಪಯಾಜ್ ಖುರೇಷಿ, ಅಬ್ದುಲ್ ರೌಫ್, ರಿಯಾಜ್ ಖುರೇಶಿ, ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ, ಅಂಬಮ್ಮ, ಅಮಿನಮ್ಮ, ರಾಜಬೀ, ನಿಂಗಮ್ಮ , ದಾದಾ ಬ್ಯಾಂಕ್, ಕಟ್ಟಡ ಕಾರ್ಮಿಕರ ಅಧ್ಯಕ್ಷ ಹಾಜಿಬಾಬಾ, ಬಂದೆನವಾಜ್, ಖಾಜಾ ಸಾಬ್, ಶಂಶು ಮೇಸನ್, ರಾಜಾಸಾಬ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
