ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನಾದ್ಯಂತ ರೈತರು ಬಿತ್ತಿದ ಹೆಸರು, ಉದ್ದು ಕಟಾವಿಗೆ ಬಂದಿದೆ. ಆದರೆ ಖರೀದಿ ಕೇಂದ್ರ ಇನ್ನೂ ಸ್ಥಾಪನೆಯಾಗಿಲ್ಲ. ಹೀಗಾಗಿ ಕೂಡಲೇ ಸರ್ಕಾರ ಖರೀದಿ ಕೇಂದ್ರ ಸ್ಥಾಪಿಸಬೇಕು ಎಂದು ರೈತ ಸಂಘದ ಪದಾಧಿಕಾರಿಗಳು ಒತ್ತಾಯಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಬಸವಕಲ್ಯಾಣ ನಗರದ ಎಪಿಎಂಸಿ ಕಚೇರಿಯ ಕಾರ್ಯದರ್ಶಿ ಸಂತೋಷಕುಮಾರ ಮುದ್ದಾ ಅವರಿಗೆ ಸಲ್ಲಿಸಿದರು.
‘ಎಪಿಎಂಸಿ ಮಾರುಕಟ್ಟೆಯಲ್ಲಿ ಮಧ್ಯ ವರ್ತಿಗಳ ಹಾವಳಿ ಹೆಚ್ಚಾಗಿದೆ. ಕ್ವಿಂಟಲ್‌ಗೆ 3ಕೆ.ಜಿ. ದವಸ ಧಾನ್ಯಗಳು ಕಡಿತಗೊಳಿಸುತ್ತಿದ್ದು ಹಾಗೂ ಶೇ.100ಕ್ಕೆ 2 ಪ್ರತಿಶತ ಹಣ ಕಡಿತಗೊಳಿಸುತ್ತಿದ್ದಾರೆ. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕಿ ಮೋಸ ಹೋಗುತ್ತಿದ್ದಾರೆ’ ಎಂದು ಆರೋಪಿಸಿದರು.

‘ರೈತರ ಮಕ್ಕಳಿಗೆ ವಿದ್ಯಾಸಿರಿ ಯೋಜನೆ ಪುನರ್ ಆರಂಭಿಸಬೇಕು. ಬೆಳೆ ಪರಿಹಾರ ಸಿಗದ ರೈತರಿಗೆ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಬೇಕು. ಬೆಳೆ ವಿಮೆ, ಬರಪೀಡಿತ ಪರಿಹಾರ ಸಿಗದಿರುವ ರೈತರಿಗೆ ಪರಿಹಾರ ಪಾವತಿಸಲು ಕ್ರಮ ಕೈಗೊಳ್ಳಬೇಕು. ಒಂದು ವಾರದಲ್ಲಿ ಬೇಡಿಕೆ ಬಗೆಹರಿಸಬೇಕು. ಇಲ್ಲದಿದ್ದರೆ ರಸ್ತೆ ತಡೆದು ಉಗ್ರ ಹೋರಾಟ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂತೋಷಕುಮಾರ ಗುದಗೆ, ತಾಲೂಕಾಧ್ಯಕ್ಷ ರುದ್ರಯ್ಯ ಸ್ವಾಮಿ, ಗೌರವಾಧ್ಯಕ್ಷ ಖಾನ್ ಸಾಬ್, ಕಾರ್ಯಾಧ್ಯಕ್ಷ ಕಾಶಿನಾಥ ಬಿರಾದಾರ ಸೇರಿದಂತೆ ಪ್ರಮುಖರಾದ ಕಲ್ಲಪ್ಪಾ ಗೌಡೆ, ಜಯಪ್ರಕಾಶ ಸದಾನಂದೆ, ವೀರೇಶ ಬೋರಗೆ, ಬಾಬು ಗೌರ ಹಾಗೂ ಇತರರಿದ್ದರು.