ರಸ್ತೆ ಬದಿ ನಿಂತಿದ್ದವರಿಗೆ ಬೈಕ್ ಡಿಕ್ಕಿ ಹೊಡೆದು, ಮೂವರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಸಾವನ್ನಪ್ಪಿದ್ದು, ನಾಲ್ವರಿಗೆ ಗಾಯಗಳಾಗಿವೆ. ಗಾಯಾಳುಗಳಲ್ಲಿ ಓರ್ವನ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಗೋಟಖಂಡಕಿ ಗ್ರಾಮದ ನಿವಾಸಿ ನಿಂಗರಾಜ ಚೌಧರಿ ಎಂಬಾತ ತನ್ನ ಬೈಕ್‌ನಲ್ಲಿ ಕುಂಟೋಜಿ ಮಾರ್ಗವಾಗಿ ತೆರಳುತ್ತಿದ್ದರು. ಈ ವೇಳೆ, ಆಯತಪ್ಪಿ ಗ್ರಾಮದಲ್ಲಿ ರಸ್ತೆ ಬದಿ ನಿಂತಿದ್ದವರಿಗೆ ಬೈಕ್ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಬೈಕ್ ಸವಾರ ನಿಂಗರಾಜ ಚೌಧರಿ, ಅನೀಲ ಖೈನೂರ (23), ಉದಯಕುಮಾರ ಪ್ಯಾಟಿ (19) ಎಂಬವರು ಮೃತಪಟ್ಟಿದ್ದಾರೆ.
ಗಾಯಾಳುಗಳನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.