ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 7ರ ಶನಿವಾರ ಬೆಂಗಳೂರಿನಲ್ಲಿ ಮಾಂಸ ಮಾರಾಟ ನಿಷೇಧಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶ ಹೊರಡಿಸಿದೆ.
ಮಾಂಸ ಮಾರಾಟ ನಿಷೇಧಿಸಿ ಪ್ರಕಟಣೆ ಹೊರಡಿಸಿರುವ ಬಿಬಿಎಂಪಿ, “ಗಣೇಶ ಚರುರ್ಥಿ ಪ್ರಯುಕ್ತ ಶನಿವಾರ ಬಿಬಿಎಂಪಿ ವ್ಯಾಪ್ತಿಯ ಕಸಾಯಿಖಾನೆಯಲ್ಲಿ ಪ್ರಾಣಿವಧೆ ಮತ್ತು ಮಾಂಸದಂಗಡಿಗಳಲ್ಲಿ ಮಾಂಸ ಮಾರಾಟ ಮಾಡುವಂತಿಲ್ಲ” ಎಂದು ಹೇಳಿದೆ.
ಇನ್ನು, ಹಬ್ಬದ ವೇಳೆ ವಿದ್ಯುತ್ ಅವಘಡಗಳು ನಡೆಯದಂತೆ ಎಚ್ಚರಿಕೆ ವಹಿಸಲು ಬೆಸ್ಕಾಂ ಹಲವು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. “ಯಾವುದೇ ವಿದ್ಯುತ್ ಅವಘಡಗಳು ಸಂಭವಿಸಿದರೆ ಕೂಡಲೇ 1912 ಸಹಾಯವಾಣಿಗೆ ಕರೆ ಮಾಡಬೇಕು” ಎಂದು ಜನರಲ್ಲಿ ಮನವಿ ಮಾಡಿದೆ.
“ಹಬ್ಬಕ್ಕೆ ತೋರಣ, ಪೆಂಡಾಲ್, ಸೀರಿಯಲ್ ಲೈಟ್ ಹಾಕುವಾಗ ವಿದ್ಯುತ್ ತಂತಿಗಳ ಬಗ್ಗೆ ಎಚ್ಚರವಹಿಸಬೇಕು. ವಿದ್ಯುತ್ ತಂತಿ, ವಿದ್ಯುತ್ ಕಂಬ ಅಥವಾ ಪರಿವರ್ತಕ ಕೇಂದ್ರಗಳಿಗೆ ಚಪ್ಪರ, ಶಾಮಿಯಾನ ಕಟ್ಟಬಾರದು. ಮೆರವಣಿಗೆ ವೇಳೆ ರಸ್ತೆ ಬದಿ ವಿದ್ಯುತ್ ತಂತಿಗಳನ್ನು ಮೇಲಕ್ಕೆತ್ತಲು ಪ್ರಯತ್ನಿಸಬಾರದು” ಎಂದು ಎಚ್ಚರಿಕೆ ನೀಡಿದೆ.