“ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆಯಿಲ್ಲದ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕೋಮುವಾದದ ಮೂಲಕ ಜನರಲ್ಲಿ ವಿಭಜಿತ ಭಾವನೆಯನ್ನು ಸೃಷ್ಟಿಸುತ್ತಿದೆ. ಕಳೆದ ಹತ್ತು ವರ್ಷಗಳಿಂದ ವಿಭಿನ್ನವಾಗಿ ಉಡುಪು ಧರಿಸುವ, ವಿಭಿನ್ನವಾಗಿ ಆಹಾರ ಸೇವಿಸುವ, ವಿಭಿನ್ನ ಭಾಷೆ ಮಾತನಾಡುವ ಜನರ ವಿರುದ್ಧ ವಿವಿಧ ರೀತಿಯಲ್ಲಿ ಹಿಂಸೆಯ ಬಳಕೆಯಾಗುತ್ತಿದೆ” ಎಂದು ಮುಂಬೈನ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸ್‌ನ ಪ್ರಾಧ್ಯಾಪಕ ಆರ್. ರಾಮ್‌ಕುಮಾರ್ ಆತಂಕ ವ್ಯಕ್ತಪಡಿಸಿದರು.
ಗೌರಿ ಸ್ಮಾರಕ ಟ್ರಸ್ಟ್ ನಗರದಲ್ಲಿ ಗುರುವಾರ ಆಯೋಜಿಸಿದ್ದ ‘ಗೌರಿ ಲಂಕೇಶ್ ನೆನಪು-ಗಂಡಾಂತರದಲ್ಲಿ ಗಣರಾಜ್ಯʼ ವಿಷಯದ ಬಗ್ಗೆ ಮಾತನಾಡಿದ ಅವರು, “ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಏಕೈಕ ಅಜೆಂಡಾ ಪ್ರಜಾಪ್ರಭುತ್ವವನ್ನು ಹತ್ತಿಕ್ಕಿ, ಹಿಂದುತ್ವದ ಸಿದ್ಧಾಂತವನ್ನು ಎಲ್ಲಡೆ ಪಸರಿಸುವುದಾಗಿದೆ. ಬಿಜೆಪಿ ಸರ್ಕಾರ ಒಂದು ದೇಶ, ಒಂದು ಚುನಾವಣೆ, ಒಂದು ಭಾಷೆ, ಒಂದು ಉಡುಪಿನ ಮೂಲಕ ನಿರಂಕುಶವಾದವನ್ನು ಹರಡುತ್ತಿದೆ. ಸರ್ಕಾರವು ಇವೆಲ್ಲವನ್ನು ಬಲವಂತದಿಂದಲೇ ಮಾಡಲು ಹೊರಟಿದೆ. ಆದರೆ ವೈವಿಧ್ಯತೆಯಲ್ಲಿ ಏಕತೆ ಹೊಂದಿರುವ ನಮ್ಮ ದೇಶವು ಇಂತಹವುಗಳನ್ನು ಅನುಮತಿಸುವುದಿಲ್ಲ. ದೇಶ ಪ್ರೇಮದ ಬಗ್ಗೆ ಮಾತನಾಡುವ ಬಿಜೆಪಿ – ಆರ್‌ಎಸ್‌ಎಸ್‌ನವರಿಗೆ ಒಕ್ಕೂಟ ವ್ಯವಸ್ಥೆಯ ಬಗ್ಗೆ ಮಾತನಾಡುವ ಧೈರ್ಯವಿದೆಯೆ ಎಂದು ಪ್ರಶ್ನಿಸಿದ ಅವರು ನಾವು ಇವುಗಳನ್ನು ಖಡಾಖಂಡಿತವಾಗಿ ಒಪ್ಪಲು ಸಾಧ್ಯವಿಲ್ಲ ಎಂದು ಧೈರ್ಯವಾಗಿ ಹೇಳಬೇಕಿದೆ” ಎಂದು ರಾಮ್‌ಕುಮಾರ್ ತಿಳಿಸಿದರು.
“ಬಿಜೆಪಿ – ಆರ್‌ಎಸ್‌ಎಸ್‌ಗೆ ಒಕ್ಕೂಟ ವ್ಯವಸ್ಥೆಯ ಮೇಲೆ ನಂಬಿಕೆಯಲ್ಲ. ನಾವು ಸಂವಿಧಾನವನ್ನು ಅರ್ಥ ಮಾಡಿಕೊಂಡಿದ್ದೇವೆ. ಅವರು ಸಂವಿಧಾನನ್ನು ನಂಬುವುದಿಲ್ಲ. ಅವರು ಬಾಬಾ ಸಾಹೇಬ್ ಬಿ ಆರ್ ಅಂಬೇಡ್ಕರ್ ರಚಿಸಿದ ಸಂವಿಧಾವವನ್ನು ಜಾರಿಗೊಳಿಸುವುದಕ್ಕೂ ಬಯಸಲಿಲ್ಲ. ಅವರಿಗೆ ತ್ರಿವರ್ಣ ಧ್ವಜವೂ ಬೇಕಾಗಿಲ್ಲ. ಅವರಿಗೆ ಬೇಕಿರುವುದು ಕೇಸರಿ ಧ್ವಜ ಮಾತ್ರ. ಅವರಿಗೆ ಬೇಕಿರುವುದು ಮನುಸ್ಮೃತಿಯನ್ನು ಜಾರಿಗೊಳಿಸುವುದು ಮಾತ್ರ” ಎಂದು ಕೇಂದ್ರದ ಗುಪ್ತ ಅಜೆಂಡಗಳ ಬಗ್ಗೆ ರಾಮ್‌ಕುಮಾರ್ ವಿವರಿಸಿದರು.
ಈ ಸುದ್ದಿ ಓದಿದ್ದೀರಾ? ಭಾರತ ಕೇಂದ್ರೀಯ ವ್ಯವಸ್ಥೆಯಲ್ಲ, ಒಕ್ಕೂಟ ವ್ಯವಸ್ಥೆ: ರಹಮತ್ ತರೀಕೆರೆ
“ಆರ್‌ಎಸ್‌ಎಸ್‌ನ ಪ್ರಮುಖ ನಾಯಕರಾದ ಮಾಧವ ಸದಾಶಿವ ಗೋಳ್ವಾಲ್ಕರ್ ಅವರು 1961ರಲ್ಲಿಯೇ ಒಕ್ಕೂಟ ವ್ಯವಸ್ಥೆಯನ್ನು ವಿರೋಧಿಸಿ ಪತ್ರ ಬರೆದಿದ್ದರು. ‘ಇಂದಿನ ಒಕ್ಕೂಟ ವ್ಯವಸ್ಥೆ ಪ್ರತ್ಯೇಕತಾವಾದವನ್ನು ಪೋಷಿಸುತ್ತದೆ. ಇದು ಒಂದು ದೇಶದ ಕಲ್ಪನೆಯನ್ನು ಗುರುತಿಸಲು ನಿರಾಕರಿಸುತ್ತದೆ ಹಾಗೂ ಹಾಳು ಮಾಡುತ್ತದೆ. ಇದನ್ನು ನಾವು ಸಂಪೂರ್ಣವಾಗಿ ಇದನ್ನು ಬುಡಸಮೇತ ಕಿತ್ತು ಹಾಕಬೇಕಿದೆ. ನಾವು ಸಂವಿಧಾನವನ್ನು ಶುದ್ದೀಕರಿಸಿ ಏಕ ರೀತಿಯ ಸರ್ಕಾರವನ್ನು ರಚಿಸಬೇಕಿದೆ’ ಎಂದಿದ್ದರು ಎಂದು ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ನಿಜವಾದ ಮುಖವನ್ನು ರಾಮ್‌ಕುಮಾರ್ ಹೇಳಿದರು.
“ಗೋಳ್ವಾಲ್ಕರ್ ನೇತೃತ್ವದ ಆರ್‌ಎಸ್‌ಎಸ್ ತಂಡಕ್ಕೆ ದೇಶದಲ್ಲಿ ಭಾಷಾಧಾರಿತ ರಾಜ್ಯಗಳಾಗಲು ಸಂಪೂರ್ಣ ಇಷ್ಟವಿರಲಿಲ್ಲ. ಇಡೀ ಸಂವಿಧಾನವನ್ನು ಬದಲಿಸಿ ಏಕ ಭಾಷೆ, ಏಕ ಆಡಳಿತ ರೀತಿಯ ವ್ಯವಸ್ಥೆಯನ್ನು ಜಾರಿಗೊಳಿಸಬೇಕೆಂದು 60ರ ದಶಕದಲ್ಲಿಯೇ ಒತ್ತಾಯಿಸಿದ್ದರು. ಅವರೆಲ್ಲರೂ ಒಕ್ಕೂಟ ವ್ಯವಸ್ಥೆಯ ಶತ್ರುಗಳು. ಬಿಜೆಪಿಯ ನಿಜವಾದ ಸಿದ್ಧಾಂತ ವೈವಿಧ್ಯತೆಯನ್ನು ದ್ವೇಷಿಸುವುದು. ಈಗ ಆಡಳಿತ ನಡೆಸುತ್ತಿರುವ ಬಿಜೆಪಿ ಸರ್ಕಾರ ಕೂಡ ಒಕ್ಕೂಟ ವ್ಯವಸ್ಥೆಯನ್ನು ಬುಡಸಮೇತ ಕಿತ್ತುಹಾಕಿ ಏಕ ದೇಶ, ಏಕ ಸಿದ್ಧಾಂತ ಕಲ್ಪನೆಯನ್ನು ಬಲವಂತವಾಗಿ ವಿವಿಧ ರೀತಿಯಲ್ಲಿ ಹೇರಲು ಪ್ರಯತ್ನಿಸುತ್ತಲೇ ಇದೆ. ಏಕ ರೀತಿಯ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಜಾರಿಗೊಳಿಸುವ ಸಲುವಾಗಿಯೇ ಲೋಕಸಭಾ ಕ್ಷೇತ್ರಗಳನ್ನು ಮರುವಿಂಗಡನೆಗೊಳಿಸಲಾಗುತ್ತಿದೆ. ಒಕ್ಕೂಟ ವ್ಯವಸ್ಥೆ ಉಳಿಸಿಕೊಳ್ಳುವುದಕ್ಕಾಗಿ ನಾವು ಒಟ್ಟಾಗಿ ದೇಶಾದ್ಯಂತ ಹೋರಾಟ ನಡೆಸುವ ಅಗತ್ಯವಿದೆ” ಎಂದು ತಿಳಿಸಿದರು
“ಸಂಯುಕ್ತ ವ್ಯವಸ್ಥೆಯಲ್ಲಿ ರಾಜ್ಯಗಳ ಆರ್ಥಿಕ ಹಕ್ಕುಗಳನ್ನು ಹತ್ತಿಕ್ಕಲು ಎನ್‌ಡಿಎ ಸರ್ಕಾರ ಎಲ್ಲವನ್ನೂ ಮಾಡುತ್ತಿದೆ. ಇದು ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲನ್ನು ಕಡಿಮೆ ಮಾಡುತ್ತಿದೆ. ತಮ್ಮ ಹಕ್ಕುಗಳನ್ನು ಪ್ರತಿಪಾದಿಸುವ ರಾಜ್ಯಗಳನ್ನು ರಾಷ್ಟ್ರವಿರೋಧಿ ಎಂದು ಬಿಂಬಿಸಲಾಗುತ್ತಿದೆ. ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲನ್ನು ಕಡಿಮೆ ಮಾಡುತ್ತಿದೆ. ಸೆಸ್, ಸರ್‌ಚಾರ್ಜ್‌ಗಳಲ್ಲಿ ರಾಜ್ಯಗಳಿಗೆ ಪಾಲಿಲ್ಲ. ತೆರಿಗೆ ಆದಾಯ ಪಾಲರನ್ನು ಹಂಚಿಕೊಳ್ಳಲು ಇಷ್ಟವಿಲ್ಲದ ಬಿಜೆಪಿ ಸೆಸ್, ಸರ್‌ಚಾರ್ಜ್‌ಗಳನ್ನು ಹೆಚ್ಚಿಸಿ ರಾಜ್ಯಗಳ ಹಣ ಲೂಟಿ ಹೊಡೆಯುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಪ್ರೊ. ರಹಮತ್ ತರಿಕೆರೆ, ವಿಜಯಮ್ಮ, ರೈತ ಹೋರಟಗಾರ ವೀರಸಂಗಯ್ಯ, ಪ್ರಗತಿಪರ ಚಿಂತಕರಾದ ನೂರ್ ಶ್ರೀಧರ್, ಪ್ರೊ. ಮೀನಾಕ್ಷಿ ಬಾಳಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.