ರೈಡ್ ಹೇಲಿಂಗ್ ಆ್ಯಪ್ ಮೂಲಕ ಬುಕ್ ಮಾಡಿದ್ದ ‘ಆಟೋ ರೈಡ್’ಅನ್ನು ಕ್ಯಾನ್ಸಲ್ ಮಾಡಿದ್ದಕ್ಕೆ ಮಹಿಳೆಯೊಬ್ಬರ ಮೇಲೆ ಓಲಾ ಆಟೋ ಚಾಲಕನೊಬ್ಬ ಹಲ್ಲೆ ಮಾಡಿರುವ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನಡೆದಿದೆ. ಆಟೋ ಚಾಲಕ ಮಹಿಳೆಯ ಕಪಾಳಕ್ಕೆ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಆಟೋ ಚಾಲಕ ಮತ್ತು ಮಹಿಳೆಯ ನಡುವಿ ವಾಗ್ವಾದದ ವಿಡಿಯೋ ವೈರಲ್ ಆಗಿದ್ದು, ಮಹಿಳೆಯ ಕಪಾಳಕ್ಕೆ ಹೊಡೆದಿರುವ ಚಾಲಕ, ಆಕೆಯ ಮೊಬೈಲ್‌ಅನ್ನು ಕಸಿದುಕೊಳ್ಳಲು ಯತ್ನಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಆರೋಪಿ ಚಾಲಕನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಡಿಯೋದಲ್ಲಿ, ಆಟೋ ಚಾಲಕ ಮಹಿಳೆಯ ವಿರುದ್ಧ ಕಿರುಚಾಡುವುದು ಕಂಡುಬಂದಿದೆ. ಆಕೆ ಯಾಕೆ ಕೂಗಾಡುತ್ತಿದ್ದಾರಾ ಎಂದು ಪ್ರಶ್ನಿಸಿದಾಗ, ‘ತೇರಾ ಬಾಪ್ ದೇತಾ ಹೈ ಕ್ಯಾ ಗ್ಯಾಸ್ ಕೆ ಪೈಸೆ?’ (ನಿಮ್ಮ ತಂದೆ ನನಗೆ ಇಂಧನಕ್ಕೆ ಹಣ ಕೊಡುತ್ತಾರೆ?) ಎಂದು ಆಟೋ ಚಾಲಕ ನಿಂದಿಸಿದ್ದಾರೆ.
ಘಟನೆಯ ವಿಡಿಯೋವನ್ನು ಮಹಿಳೆಯು ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. “ನಿನ್ನೆ ಬೆಂಗಳೂರಿನಲ್ಲಿ, ನನ್ನ ಸ್ನೇಹಿತ ಮತ್ತು ನಾನು ಪೀಕ್ ಅವರ್‌ನಿಂದಾಗಿ ಓಲಾದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿದ್ದೆವು. ಒಂದು ಆಟೋ ಮೊದಲು ಬಂದ ಬಳಿಕ, ಮತ್ತೊಂದು ಆಟೋವನ್ನು ನಾವು ರದ್ದುಗೊಳಿಸಿದೆವು. ನಂತರ ಬಂದ ಇನ್ನೊಬ್ಬ ಆಟೋ ಚಾಲಕ ಕೋಪದಿಂದ ನಮ್ಮನ್ನು ಹಿಂಬಾಲಿಸಿದನು. ಪರಿಸ್ಥಿತಿ ಬಗ್ಗೆ ವಿವರಿಸಿದರೂ ಆತ ಕೂಗಾಡಲು ಆರಂಭಿಸಿದ. ಅವಾಚ್ಯವಾಗಿ ನಿಂದಿಸಿ, ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ” ಎಂದು ಬರೆದಿದ್ದಾರೆ.
ಅವರ ಪೋಸ್ಟ್‌ಗೆ ಪ್ರತಿಕ್ರಿಯಿಸಿರುವ ಸಂಚಾರ ಮತ್ತು ರಸ್ತೆ ಸುರಕ್ಷತಾ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಅಲೋಕ್ ಕುಮಾರ್, “ಇಂತಹ ನಡವಳಿಕೆ ಸ್ವೀಕಾರಾರ್ಹವಲ್ಲ. ಇಂತಹ ಕೃತ್ಯಗಳು ಆಟೋ ಚಾಲಕರ ಸಮುದಾಯಕ್ಕೆ ಕೆಟ್ಟ ಹೆಸರನ್ನು ತರುತ್ತವೆ. ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ” ಎಂದಿದ್ದಾರೆ.
ಆರೋಪಿ ಆಟೋ ಚಾಲಕನನ್ನು ಮಾಗಡಿ ರಸ್ತೆ ಪೊಲೀಸರು ಬಂಧಿಸಿದ್ದಾರೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ವರದಿ ಓದಿದ್ದೀರಾ?: ಭಾರತದಲ್ಲಿ ನಿಮ್ಮ ವ್ಯವಹಾರ ರದ್ದು ಮಾಡುತ್ತೇವೆ: ವಿಕಿಪೀಡಿಯಗೆ ಹೈಕೋರ್ಟ್ ಎಚ್ಚರಿಕೆ
ಪೀಕ್ ಅವರ್‌ನ ಕಾರಣ ಓಲಾದಲ್ಲಿ ತಾನು ಮತ್ತು ಅವಳ ಸ್ನೇಹಿತ ಆರಂಭದಲ್ಲಿ ಎರಡು ಆಟೋಗಳನ್ನು ಬುಕ್ ಮಾಡಿದ್ದೇವೆ ಮತ್ತು ಅವಳು ಬುಕ್ ಮಾಡಿದ ಆಟೋ ಮೊದಲು ಬಂದಾಗ ತನ್ನ ಸ್ನೇಹಿತನು ಬುಕ್ ಮಾಡಿದ ಒಂದನ್ನು ರದ್ದುಗೊಳಿಸಿದೆ ಎಂದು ಮಹಿಳೆ ಹೇಳಿದರು, ನಂತರ ರದ್ದುಪಡಿಸಿದ ಕ್ಯಾಬ್‌ನಿಂದ ಚಾಲಕನು ಹಿಂಬಾಲಿಸಿ ಅವರನ್ನು ನಿಂದಿಸಿದನು.
ಮಹಿಳೆಯ ಪೋಸ್ಟ್‌ಗೆ ಓಲಾ ಪ್ರತಿಕ್ರಿಯಿಸಿದ್ದು, ‘ಘಟನೆಯು ಆತಂಕಕಾರಿಯಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುವುದು’ ಎಂದು ಹೇಳಿದೆ.