ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಎಲ್ಲ ರೈತರ ಫಸಲು ಬೆಳೆಗಳನ್ನು ಎಪಿಎಂಸಿ ಮೂಲಕವೇ ಖರೀದಿಸಲು ವ್ಯವಸ್ಥೆ ಮಾಡಬೇಕು. ಆ ಮೂಲಕ ದಲ್ಲಾಳಿಗಳ ಹಾವಳಿ ತಪ್ಪಿಸಬೇಕು ಎಂದು ಎಪಿಎಂಸಿ ಮಾರುಕಟ್ಟೆ ಮುಖ್ಯಾಧಿಕಾರಿ ತಿಮ್ಮಪ್ಪ ನಾಯಕ ಅವರಿಗೆ ರೈತರು ಮನವಿ ಸಲ್ಲಿಸಿದರು.
ರೈತರ ಫಸಲನ್ನು ವ್ಯಾಪಾರಸ್ಥರು ದಲ್ಲಾಳಿಗಳ ಬಳಿ ಹೋಗಿ ವ್ಯಾಪಾರ ಮಾಡುತ್ತಿದ್ದು, ಇದರಲ್ಲಿ ತುಂಬಾ ಮೋಸ ಮತ್ತು ಅನ್ಯಾಯ ಆಗುತ್ತಿದೆ. ದಲ್ಲಾಳಿಗಳ ಹಾವಳಿಯನ್ನು ತಡೆಯಲು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಪ್ರತಿ ಕ್ವಿಂಟಾಲ್‌ಗೆ 5 ಕೆ.ಜಿ ಫಸಲು ಕಟ್ ಮಾಡುತ್ತಿದ್ದು, ದಲ್ಲಾಳಿ ಶೇ.2ನ್ನು ಪಡೆಯುತ್ತಿದ್ದಾರೆ. ಇದರಿಂದ ರೈತರಿಗೆ ತುಂಬಾ ನಷ್ಟವಾಗುತ್ತದೆ. ಕೃಷಿ ಉತ್ಪನ್ನ ಮಾರುಕಟ್ಟೆಯ ಅಧ್ಯಕ್ಷರು ಸದಸ್ಯರು ಮತ್ತು ಕಾರ್ಯದರ್ಶಿಗಳ ಸಭೆ ಕರೆದು ರೈತರ ಮತ್ತು ವ್ಯಾಪಾರಸ್ಥರ ನಡುವೆ ದಲ್ಲಾಳಿಗಳ ಹಾವಳಿಯನ್ನು ತಪ್ಪಿಸಬೇಕು ಎಂದರು.
ರೈತರು ಬೆಳೆದ ಪಸಲನ್ನು ಎಪಿಎಂಸಿಗೆ ತಂದು ಯಾವುದೇ ಕಟಾವು ಮತ್ತು ಕಮಿಷನ್ ಇಲ್ಲದೆ ಮಾರಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು. ವ್ಯಾಪಾರಸ್ಥರು ಹಳ್ಳಿಯಲ್ಲಿ ವ್ಯವಹಾರ ಮಾಡಿದರೆ ಯಾವುದೇ ಕಟಾವು ಕಮಿಷನ್ ಇಲ್ಲದೆ ವ್ಯವಹಾರಕ್ಕೆ ಮುಂದಾಗಬೇಕು. ತೂಕದಲ್ಲಿ ವ್ಯಾಪಾರಸ್ಥರಿಂದ ವ್ಯತ್ಯಾಸ ಕಂಡು ಬಂದರೆ ಅಂಥವರ ವಿರುದ್ಧ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು ಹಾಗೂ ಲೆಸೆನ್ಸ್ ರದ್ದು ಮಾಡಬೇಕು ಎಂದು ಒತ್ತಾಯಿಸಿದರು.
ಬೇರೆ ಬೇರೆ ತಾಲೂಕು ಮತ್ತು ಜಿಲ್ಲೆಗಳಿಂದ ವ್ಯಾಪಾರಸ್ಥರು ಹೂವಿನ ಹಡಗಲಿ ಎಪಿಎಂಸಿಗೆ ಬಂದು ವ್ಯಾಪಾರ ಮಾಡಲು ಅನುಕೂಲವಾಗುವಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ತಿಳಿಸಿದರು.
ಇದನ್ನು ಓದಿದ್ದೀರಾ? ಬಾಗಲಕೋಟೆ | ಎರಡು ಬೈಕ್‌ಗಳ ನಡುವೆ ಭೀಕರ ಅಪಘಾತ: ಮೂವರು ಬಲಿ
ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ಸಿದ್ದಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಶಿವರಾಜ್ ಹೊಳಗುಂದಿ, ಜಿಲ್ಲಾಧ್ಯಕ್ಷರಾದ ಸೋಮಶೇಖರಪ್ಪ ನಂದಿಹಳ್ಳಿ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಚನ್ನವೀರಮ್ಮ, ತಾಲೂಕು ಉಪಾಧ್ಯಕ್ಷರಾದ ಶಂಕರ್ ಗೌಡ್ರು, ಮೈಲಾರ ತಾಲೂಕು ಸಂಚಾಲಕ ದುರ್ಗಪ್ಪ, ರೈತ ಮುಖಂಡರಾದ ಶಿವ ನಾಗಪ್ಪ, ಗಿರೀಶ್ ಕೆಕೆ, ತಾಂಡ ಮಂಜು ನಾಯಕ್ ದಾಸರಳ್ಳಿ, ತಾಂಡ ಶರಣಪ್ಪ ಅಲ್ಲಿಪುರ ಇನ್ನೂ ಹಲವರಿದ್ದರು.
