ಬಿಜೆಪಿಯವರ ಒಂದು ಸಂದೇಶವು ಕರಾವಳಿ ಭಾಗದ ಹಿರಿಯ ತುಳು ಕಲಾವಿದ, ನಿರ್ದೇಶಕ ದೇವದಾಸ್ ಕಾಪಿಕಾಡ್ರನ್ನು ಇಕ್ಕಟ್ಟಿಗೆ ಸಿಲುಕಿಸಿದ ಬೆಳವಣಿಗೆ ನಡೆದಿದೆ. ಕೊನೆಗೆ ಖುದ್ದು ‘ತೆಲಿಕೆದ ಬೊಳ್ಳಿ’ಯೇ ಸ್ಪಷ್ಟನೆ ನೀಡಬೇಕಾದ ಅನಿವಾರ್ಯತೆ ಒದಗಿಬಂತು.
ಕಾರಣ ಇಷ್ಟೇ. ಪಕ್ಷದ ಸಂಘಟನೆಯ ದೃಷ್ಟಿಯಿಂದ ಬಿಜೆಪಿಯವರು ರಾಜ್ಯಾದ್ಯಂತ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದೆ. ಇದರ ಭಾಗವಾಗಿ ಮಾಜಿ ಸಿಎಂ ಸದಾನಂದ ಗೌಡ ನೇತೃತ್ವದಲ್ಲಿ ಮಂಗಳೂರಿನಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿತ್ತು. ಪ್ರಸಿದ್ಧ ತುಳು ನಾಟಕ ಕಲಾವಿದ, ಸಿನಿಮಾ ನಟ, ನಿರ್ದೇಶಕರೂ ಆಗಿರುವ ತೆಲಿಕೆದ ಬೊಳ್ಳಿ’ ಖ್ಯಾತಿಯ ದೇವದಾಸ್ ಕಾಪಿಕಾಡ್ ಅವರ ಮನೆಗೆ ತೆರಳಿದೆ. ಆ ಬಳಿಕ ಬಿಜೆಪಿ ಕರ್ನಾಟಕ ಘಟಕವು ಫೋಟೋ ಹಂಚಿಕೊಂಡು, “ತುಳು ರಂಗಭೂಮಿಯ ಜನಪ್ರಿಯ ಕಲಾವಿದ ‘ತೆಲಿಕೆದ ಬೊಳ್ಳಿ’ ಡಾ.ದೇವದಾಸ್ ಕಾಪಿಕಾಡ್ ಅವರು ಬಿಜೆಪಿ ಸದಸ್ಯತ್ವವನ್ನು ಪಡೆದರು” ಎಂದು ಪೋಸ್ಟ್ ಮಾಡಿತ್ತು.
ದೇವದಾಸ್ ಕಾಪಿಕಾಡ್ ಅವರು ಕರಾವಳಿಯಲ್ಲಿ ಎಲ್ಲ ಧರ್ಮ, ಜಾತಿಗಳ ಅಭಿಮಾನಿಗಳನ್ನು ಹೊಂದಿದ್ದಾರೆ. ಕಾಪಿಕಾಡ್ ಅವರ ತಂಡವು ಕೇವಲ ಮಂಗಳೂರು, ಉಡುಪಿ ಮಾತ್ರವಲ್ಲದೆ, ವಿದೇಶಗಳಲ್ಲೂ ಕಾರ್ಯಕ್ರಮಗಳನ್ನು ನೀಡುವ ಮೂಲಕ ಗಮನ ಸೆಳೆಯುತ್ತಿದೆ.
ಬಿಜೆಪಿ ಸೇರ್ಪಡೆಯಾಗಿದ್ದಾರೆಂಬ ಸುದ್ದಿ ವೈರಲ್ ಆಗುತ್ತಿದ್ದಂತೆ ಹಲವರು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇವದಾಸ್ ಕಾಪಿಕಾಡ್ಗೆ ಫೋನ್ ಮಾಡಿ ಬೇಸರ ವ್ಯಕ್ತಪಡಿಸಿದ್ದಾರೆ. ನಟವಾಗಿ ಎಲ್ಲಾ ರಾಜಕೀಯ ಪಕ್ಷಗಳು, ಧರ್ಮಗಳ ಅಭಿಮಾನಿಗಳು ನಿಮ್ಮನ್ನು ಒಪ್ಪಿಕೊಳ್ಳುತ್ತಾರೆ. ಹೀಗಿರುವಾಗ ಒಂದು ಪಕ್ಷದ ಸದಸ್ಯತ್ವ ಪಡೆದುಕೊಂಡರೆ ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.
ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ದೇವದಾಸ್ ಕಾಪಿಕಾಡ್ ಇದಕ್ಕೆ ಸ್ಪಷ್ಟನೆ ನೀಡಿದ್ದು, ಆಡಿಯೋವೊಂದನ್ನು ಹರಿಯಬಿಟ್ಟಿದ್ದು, “ನಾನು ಯಾವುದೇ ಪಕ್ಷದ ಸದಸ್ಯತ್ವವನ್ನು ಪಡೆದಿಲ್ಲ. ನನಗೆ ಎಲ್ಲ ಪಕ್ಷದಲ್ಲೂ ಸ್ನೇಹಿತರಿದ್ದಾರೆ. ಅಭಿಮಾನಿಗಳಿದ್ದಾರೆ. ನಾನು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾಗಿದ್ದೇನೆ ಎಂಬ ಸುದ್ದಿ ಸುಳ್ಳು” ಎಂದು ಸ್ಪಷ್ಟಪಡಿಸಿದ್ದಾರೆ.
ಇದನ್ನು ಓದಿದ್ದೀರಾ? ಎತ್ತಿನಹೊಳೆ | ಮುಖ್ಯಮಂತ್ರಿ ಅವರಿಂದ ಬಾಗಿನ ಅರ್ಪಿಸಲು ನಿರ್ಮಿಸಲಾಗಿದ್ದ ಮಂಟಪ ದಿಢೀರ್ ಕುಸಿತ
“ನಾನೊಬ್ಬ ಕಲಾವಿದ, ಎಲ್ಲಾ ಜಾತಿ ಮತ ಧರ್ಮಗಳ ಜನರು ನನ್ನ ಅಭಿಮಾನಿಗಳಾಗಿದ್ದು ನನ್ನನ್ನು ಪ್ರೀತಿ ಮಾಡುತ್ತಾರೆ, ನನಗೆ ಯಾವ ಪಕ್ಷವೂ ಬೇಕಿಲ್ಲ, ಎಲ್ಲಾ ಪಕ್ಷಗಳ ನಾಯಕರ ಜೊತೆಗೂ ನನಗೆ ಭಾಂಧವ್ಯ ಇದೆ. ರಮಾನಾಥ ರೈ, ಯು.ಟಿ ಖಾದರ್, ನಳಿನ್ ಕುಮಾರ್ ಕಟೀಲ್ ಸೇರಿದಂತೆ ನನಗೆ ಎಲ್ಲರೂ ಒಳ್ಳೆಯ ಸ್ನೇಹಿತರು. ನನ್ನ ಮನೆಗೆ ಯಾವ ಪಕ್ಷದ ನಾಯಕರು ಬಂದರೂ ಸ್ವಾಗತಿಸಿ ಆತಿಥ್ಯ ನೀಡಿ ಫೋಟೋ ತೆಗೆಸಿಕೊಳ್ಳುತ್ತೇನೆ’ ಎಂದಿದ್ದಾರೆ.
ದೇವದಾಸ್ ಕಾಪಿಕಾಡ್ ಬಿಜೆಪಿ ಸದಸ್ಯತ್ವ ಪಡೆದಿದ್ದಾರೆ ಎಂಬ ಸುದ್ದಿ ಹರಿದಾಡಿದ ಬಳಿಕ, ಸೋಷಿಯಲ್ ಮೀಡಿಯಾಗಳಲ್ಲಿ ‘ಬಾಯ್ಕಾಟ್ ದೇವದಾಸ್ ಕಾಪಿಕಾಡ್ ಅಭಿಯಾನ’ ನಡೆಯುತ್ತಿರುವುದು ಕಂಡುಬಂದಿದೆ. ಅದರ ಬೆನ್ನಲ್ಲೇ ದೇವದಾಸ್ ಕಾಪಿಕಾಡ್ ಅವರಿಂದ ಸ್ಪಷ್ಟನೆ ಹೊರಬಂದಿದೆ. ಬಿಜೆಪಿ ಸದಸ್ಯತ್ವ ಪಡೆದ ಕಾರಣಕ್ಕೆ ಸೌದಿ ಅರೇಬಿಯಾದಲ್ಲಿ ಪ್ರಸಿದ್ದ ನಟನ ಕಾರ್ಯಕ್ರಮ ಬಹಿಷ್ಕಾರ ಹಾಕಲಾಗಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ ಇದು ಅಧಿಕೃತವಾಗಿ ಯಾವುದೇ ಆಯೋಜಕರಿಂದ ಬಂದಿಲ್ಲ.
