ಕಲಬುರಗಿ ಮತ್ತು ಬೆಂಗಳೂರು ಕಡೆ ಚಲಿಸುವ ರೈಲ್ವೆಗಳ ಸಂಖ್ಯೆ ಹೆಚ್ಚಿಸಲು, ಜನರಲ್ ಮತ್ತು ಸ್ಲೀಪರ್ ಬೋಗಿಗಳು ಹೆಚ್ಚಿಸುವಂತೆ ಹಾಗೂ ಖಾಲಿ ಹುದ್ದೆಗಳ ಭರ್ತಿಗಾಗಿ ಎಐಡಿವೈಓ ಸಂಘಟಕರು ಆಗ್ರಹಿಸಿದರು.
ಜನಸಾಮಾನ್ಯರ ಸಹಿ ಸಂಗ್ರಹದ ಅಂಗವಾಗಿ ಕಲಬುರಗಿಯ ಶಹಾಬಾದ ರೈಲ್ವೆ ನಿಲ್ದಾಣದ ಎದುರುಗಡೆ ಎಐಡಿವೈಓ ಯುವಜನ ಸಂಘಟಕರು ಜನರ ಸಹಿ ಸಂಗ್ರಹಣೆ ಮಾಡಿದರು.
ಜಿಲ್ಲಾಧ್ಯಕ್ಷ ಜಗನ್ನಾಥ ಎಸ್ ಹೆಚ್ ಮಾತನಾಡಿ, ಭಾರತೀಯ ರೈಲ್ವೆಯು ಸಂಪೂರ್ಣ ವಿನಾಶದತ್ತ ಸಾಗುತ್ತಿದ್ದು, ಕಳೆದ ಒಂದು ದಶಕದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡ ಕ್ರಮಗಳಿಂದ ಪ್ರತಿ ವರ್ಷ ತೀವ್ರಗೊಳ್ಳುತ್ತಿದೆ. ಖಾಸಗೀಕರಣ ಮತ್ತು ವ್ಯಾಪಾರೀಕರಣದ ಕ್ರಮಗಳು ರೈಲ್ವೆ ಪ್ರಯಾಣಿಕರನ್ನು ಬೆಂಕಿಗೆ ತಳ್ಳಿವೆ. ಇತ್ತೀಚಿನ ದಿನಗಳಲ್ಲಿ ರೈಲ್ವೆ ಪ್ರಯಾಣದಲ್ಲಿ ಸುರಕ್ಷತೆ ತೀವ್ರ ಆತಂಕಕಾರಿಯಾಗಿದ್ದು, ಪ್ರಯಾಣಿಕರ ಸುರಕ್ಷತೆಗೆ ಯಾವುದೇ ಖಾತರಿ ಇಲ್ಲದಂತಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.

2023ರ ಅಂಕಿ-ಅಂಶಗಳ ಪ್ರಕಾರ ಸುರಕ್ಷತಾ ವಿಭಾಗಗಳಲ್ಲೇ 1.7 ಲಕ್ಷ ಹುದ್ದೆಗಳು ಖಾಲಿ ಇವೆ ಎಂದು ಹೇಳಲಾಗಿದ್ದು, ಉಲ್ಬಣಗೊಳ್ಳುತ್ತಿರುವ ನಿರುದ್ಯೋಗದಿಂದಾಗಿ, ದೇಶದ ಮೂಲೆ-ಮೂಲೆಗಳಲ್ಲಿ ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚುತ್ತಲೇ ಇದೆ. ವಲಸೆ ಕಾರ್ಮಿಕರು, ಕೈಗಾರಿಕೆಗಳು, ಕಟ್ಟಡ ನಿರ್ಮಾಣ, ಖಾಸಗಿ ವಲಯಗಳಲ್ಲಿ ದಿನಗೂಳಂತೆ ದುಡಿಯುತ್ತಿದ್ದಾರೆ. ಅಂಗಡಿ, ಹೋಟೆಲ್, ಸಣ್ಣ ಕಾರ್ಖಾನೆ, ಕೃಷಿಯಲ್ಲಿಯೂ ಅವರನ್ನು ಅಗ್ಗದ ಕೂಲಿ ಕಾರ್ಮಿಕರನ್ನಾಗಿ ದುಡಿಸಿಕೊಂಡು ಶೋಷಣೆ ಮಾಡಲಾಗುತ್ತಿದೆ ಎಂದರು.
ವಲಸೆ ಕಾರ್ಮಿಕರೇ ಇಂದು ದೂರ ಪ್ರಯಾಣದ ರೈಲುಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಸತ್ತಿರುವ ಪರಿಣಾಮ, ಪ್ರತಿ ರೈಲು ಜನದಟ್ಟಣೆಯಿಂದ ಓಡುತ್ತಿವೆ. ಇದರ ನಿವಾರಣೆಗೆ ಸೂಕ್ತ ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದರು.
ನಾಗರಿಕ ಪ್ರಯಾಣಕ್ಕೆ ಮೂಲಭೂತ ಸೌಕರ್ಯ ಒದಗಿಸುವಲ್ಲಿ ವಿಫಲವಾಗಿರುವ ಸರ್ಕಾರ ಪ್ರಧಾನಿ ಮೋದಿಯವರಿಂದ ವಂದೇ ಭಾರತ್ ರೈಲುಗಳನ್ನು ಉದ್ಘಾಟಿಸುತ್ತಲೇ ಇದೆ. ಈ ರೈಲುಗಳ ದರ ಮಧ್ಯಮ ವರ್ಗದವರ ಮೇಲೆ ಹೇರಳವಾಗಿದೆ. ಸಾಮಾನ್ಯ ಜನರಿಗೆ ಅಗತ್ಯಕ್ಕೆ ಅನುಗುಣವಾಗಿ ರೈಲು ಸಂಖ್ಯೆ ಹೆಚ್ಚಿಸಿ , ಜರ್ನಲ್ ಮತ್ತು ಸ್ಲಿಪರ್ರಬೋಗಿಗಳು ಹೆಚ್ಚಿಸುವಂತೆ ಒತ್ತಾಯಿಸಿದರು.
ಇದನ್ನು ಓದಿದ್ದೀರಾ? ಬಸವಾನುಯಾಯಿಗಳ ಗೈರು-ವಿರೋಧದ ಮಧ್ಯೆಯೇ ವಿಜಯಪುರದಲ್ಲಿ ‘ವಚನ ದರ್ಶನ’ ಬಿಡುಗಡೆ
ರೈಲ್ವೆ ಸಚಿವ ಅಶ್ವಿನಿ ವೈಷ್ಣವವರಿಗೆ ಸಂಗ್ರಹಿಸಿದ ಸಹಿಗಳ ಪ್ರತಿಯನ್ನು ಸಲ್ಲಿಸಲಾಗುವುದು ಎಂದರು. ರಘು ಪವಾರ, ರಮೇಶ ದೇವಕರ್, ಮಲ್ಲಿಕಾರ್ಜುನ, ಅಜಯ್ ಗುರ್ಜಲ್ಕರ್ ಭಾಗವಹಿಸಿದ್ದರು.