ಮೀಟರ್ ಬಡ್ಡಿ ಕಿರುಕುಳಕ್ಕೆ ಬೇಸತ್ತು ತುಮಕೂರು ಜಿಲ್ಲೆಯ ಗುಬ್ಬಿ ಹೊರವಲಯದ ಸಿಐಟಿ ಕಾಲೇಜು ಬಳಿ ಇರುವ ಬೇಕರಿ ಅಂಗಡಿಯ ಮಾಲೀಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಡರಾತ್ರಿ ನಡೆದಿದೆ.
ಆತ್ಮಹತ್ಯೆಗೆ ಶರಣಾದವರನ್ನು ಬಸವರಾಜು(45) ಎಂದು ಗುರುತಿಸಲಾಗಿದೆ. ಸಾವಿಗೆ ಶರಣಾಗುವುದಕ್ಕೂ ಮುನ್ನ ಮಾಡಿರುವ ವಿಡಿಯೋದಲ್ಲಿ ಮೀಟರ್ ಬಡ್ಡಿ ದಂಧೆ, ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾರೆ.
ಸಿಐಟಿ ಕಾಲೇಜು ಮುಂಭಾಗ ಬೇಕರಿ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದ ಮೃತ ಬಸವರಾಜು, ಚೆಕ್ ನೀಡಿ ಪಡೆದಿದ್ದ ಸಾಲಕ್ಕೆ ಮೀಟರ್ ಬಡ್ಡಿ ನೀಡುವಂತೆ ಮೀಟರ್ ಬಡ್ಡಿ ನಾಗ ಎಂಬ ವ್ಯಕ್ತಿ ಕೇಳಿರುವುದಾಗಿ ನೇರ ಆರೋಪ ಮಾಡಿದ್ದಾರೆ. ಬಡ್ಡಿಗೆ ಸಾಲ ನೀಡಿದ್ದ ನಾಗ ಎಂಬಾತನ ಎಲ್ಲ ಸಾಲವನ್ನೂ ತೀರಿಸಿದ್ದೇನೆ. ಆದರೂ ನನಗೆ ಕಿರುಕುಳ ನೀಡುತ್ತಿದ್ದ. ಹಾಗಾಗಿ, ಈ ನಿರ್ಧಾರ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ತನ್ನ ಮೊಬೈಲ್‌ನಲ್ಲಿ ವಿಡಿಯೋ ಮಾಡಿ, ನಂತರ ಬೇಕರಿಯಲ್ಲೇ ಆತ್ಮಹತ್ಯೆ ಶರಣಾಗಿದ್ದಾರೆ. ಇವರು ಪತ್ನಿ, ಮಗುವನ್ನು ಅಗಲಿದ್ದಾರೆ.
“ನಾಗುಗೆ ನಾನು ಸಾಲ ಎಲ್ಲ ಕೊಟ್ಟಿದ್ದೀನಿ. ಅವನು ಕೊಟ್ಟಿದ್ದ ಚೆಕ್ ವಾಪಸ್ ಕೊಡದೆ ಬೆದರಿಸುತ್ತಿದ್ದಾನೆ. ತುಂಬಾ ರೌಡಿಸಂ ಮಾಡುತ್ತಿದ್ದಾನೆ. ನಂದಿನಿ ಪಾರ್ಲರ್ ನವನು ಓಡಿ ಹೋಗಲು ಇವನೇ ಕಾರಣ. ಯಾವುದೇ ಸಾಲ ಇಲ್ಲದಿದ್ದರೂ ತುಂಬಾ ಕಿರುಕುಳ ನೀಡುತ್ತಿದ್ದಾನೆ. ಎಷ್ಟೋ ಜನ ಇವನಿಂದ ಹೆದರಿ ಓಡಿ ಹೋಗಿದ್ದಾರೆ. ತುಂಬಾ ರೌಡಿಸಂ ಮಾಡುತ್ತಾನೆ. ನನಗೆ ಅವರು ಗೊತ್ತು ಇವರು ಗೊತ್ತು ವಾಸಣ್ಣ ಗೊತ್ತು ಎಂದು ಹೆದರಿಸುತ್ತಾನೆ. ಈತನ ಬಗ್ಗೆ ಹಲವು ಬಾರಿ ಕೇಸ್ ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ” ಎಂದು ವಿಡಿಯೋದಲ್ಲಿ ಹೇಳಿರುವ ಮೃತನ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಇದನ್ನು ಓದಿದ್ದೀರಾ? ವಿಜಯನಗರ | ತಾಡಪಲ್ ದರ ದುಪ್ಪಟ್ಟು : ಬೆಲೆ ಕಡಿಮೆಗೊಳಿಸಲು ಆಗ್ರಹಿಸಿ ರೈತ ಸಂಘದಿಂದ ಮನವಿ
ಆತ್ಮಹತ್ಯೆಯ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೀಟರ್ ಬಡ್ಡಿ ದಂಧೆಯ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸಿ, ಹೆಡೆಮುರಿ ಕಟ್ಟುವರೇ ಕಾದು ನೋಡಬೇಕಿದೆ.
