ಮುಡಾ ಅಕ್ರಮ ಪ್ರಕರಣದ ಕುರಿತು ಎನ್ಡಿಟಿವಿ ನಡೆಸಿದ ಚರ್ಚಾ ಕಾರ್ಯಕ್ರಮವೊಂದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ‘ಸಿದ್ದ’ ಎಂದು ಅರ್ಧ ಹೆಸರಿನಲ್ಲಿ ಉಲ್ಲೇಖಿಸಿದೆ. ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಅರ್ಧ ಹೆಸರಿನಲ್ಲಿ ಉಲ್ಲೇಖಿಸಿದ್ದನ್ನು ಕಾರ್ಯಕ್ರಮದಲ್ಲೇ ವಿರೋಧಿಸಿದ ಕಾಂಗ್ರೆಸ್ ವಕ್ತಾರೆ ಭವ್ಯಾ ನರಸಿಂಹಮೂರ್ತಿ, ಎನ್ಡಿಟಿವಿಯ ನಿರೂಪಕಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
“ಒಂದು ರಾಜ್ಯದ ಗೌರವಾನ್ವಿತ ಮುಖ್ಯಮಂತ್ರಿಯನ್ನು ಅರ್ಧ ಹೆಸರಿನಲ್ಲಿ ಉಲ್ಲೇಖಿಸುವುದು, ಸಂಬೋಧಿಸುವುದು ಸರಿಯಾದ ನಡೆಯಲ್ಲ” ಎಂದು ಎನ್ಡಿಟಿವಿ ವಿರುದ್ಧ ಭವ್ಯಾ ಕಿಡಿಕಾರಿದ್ದಾರೆ. ಭವ್ಯಾ ಅವರು ತರಾಟೆಗೆ ತೆಗೆದುಕೊಳ್ಳುತ್ತಿದ್ದಂತೆಯೇ ಸಿದ್ದರಾಮಯ್ಯ ಅವರನ್ನು ಎನ್ಡಿಟಿವಿ ಪೂರ್ಣ ಹೆಸರಿನಲ್ಲಿ ಉಲ್ಲೇಖಿಸಿದೆ. ಮಾತ್ರವಲ್ಲದೆ, ನಿರೂಪಕಿ ಕಾರ್ಯಕ್ರಮದಲ್ಲೇ ಕ್ಷಮೆ ಕೇಳಿದ್ದಾರೆ.
ಚರ್ಚಾ ಕಾರ್ಯಕ್ರಮದಲ್ಲಿ ಎನ್ಡಿಟಿವಿಯನ್ನು ತರಾಟೆಗೆ ತೆಗೆದುಕೊಂಡಿದ್ದ ವಿಡಿಯೋ ತುಣುಕನ್ನು ಸ್ವತಃ ಭವ್ಯಾ ನರಸಿಂಹಮೂರ್ತಿ ಅವರೇ ‘ಎಕ್ಸ್‘ನಲ್ಲಿ ಹಂಚಿಕೊಂಡಿದ್ದಾರೆ.
ವಿಡಿಯೋದಲ್ಲಿ, “ಕರ್ನಾಟಕದ ಗೌರವಾನ್ವಿತ ಮುಖ್ಯಮಂತ್ರಿಯನ್ನು ‘ಸಿದ್ದ’ ಎಂದು ಉಲ್ಲೇಖಿಸಿದ್ದೀರಿ. ಇದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಹೀಗೆ ಉಲ್ಲೇಖಿಸುವುದು ಗೌರವಾರ್ಥವಲ್ಲ. ನಾವು ಪ್ರಧಾನಿ ಮೋದಿ ಅವರನ್ನು ‘ನರೇಂದ್ರ’ ಅಥವಾ ‘ನರೇನ್’ ಎಂದು ಬಳಸುವುದಿಲ್ಲ. ನರೇಂದ್ರ ಮೋದಿ ಅವರು ಕೊನೆಯ ಹೆಸರನ್ನು (ಮೋದಿ) ಹೊಂದಿದ್ದಾರೆ. ಆದರೆ, ಸಿದ್ದರಾಮಯ್ಯ ಕೊನೆಯ ಹೆಸರನ್ನು ಹೊಂದಿಲ್ಲ” ಎಂದಿದ್ದಾರೆ.
“ಸಿದ್ದರಾಮಯ್ಯ ಕರ್ನಾಟಕದ ಪ್ರಮುಖ ನಾಯಕರು. ಸಿದ್ದರಾಮಯ್ಯ ಅವರ ಹೆಸರನ್ನು ಪೂರ್ಣವಾಗಿ ಉಲ್ಲೇಖಿಸಿ, ಗೌರವ ಕೊಡಬೇಕು. ಅವರಿಗೆ ಅವರ ಸಾಂವಿಧಾನಿಕ ಉನ್ನತ ಹುದ್ದೆಯೊಂದಿಗೆ ಹೆಚ್ಚು ಗೌರವವನ್ನು ನೀಡಬೇಕು” ಎಂದು ಚರ್ಚಾ ಕಾರ್ಯಕ್ರಮದಲ್ಲೇ ಒತ್ತಾಯಿಸಿದ್ದಾರೆ. ಈ ವೇಳೆ ನಿರೂಪಕಿ ಕ್ಷಮೆ ಕೇಳಿದ್ದಲ್ಲದೇ, ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.