ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಜ್ಞಾನವನ್ನಷ್ಟೇ ಅಲ್ಲದೆ, ಜೀವನದ ಪಾಠಗಳನ್ನೂ ಕಲಿಸಬೇಕಿದೆ ಎಂದು ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಬಿ.ಕೆ.ತುಳಸಿಮಾಲ ಹೇಳಿದರು.
ವಿಜಯಪುರದ ಕರ್ನಾಟಕ ರಾಜ್ಯ ಅಕ್ಕ ಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳ ಜ್ಞಾನ ಅಭಿವೃದ್ಧಿಪಡಿಸುವುದರ ಜೊತೆಗೆ ಶಿಕ್ಷಕರು ಅಭಿವೃದ್ಧಿಯಾಗಬೇಕು. ಶಿಕ್ಷಕರು ವೃತ್ತಿಪರತೆಯನ್ನು ಹೆಚ್ಚಿಸಲು ಹಲವಾರು ಮಾರ್ಗಗಳನ್ನು ಅಳವಡಿಸಿಕೊಳ್ಳಬೇಕಾಗಿದೆ. ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕದ ಜ್ಞಾನವಷ್ಟೇ ಅಲ್ಲ, ಜೀವನ ಪಾಠಗಳನ್ನೂ ಕಲಿಸಬೇಕು. ಶಿಕ್ಷಕರು ಪ್ರತಿ ವಿದ್ಯಾರ್ಥಿಗಳ ಬದುಕಿಗೆ ಪ್ರೇರಣೆಯಾಗಬೇಕು. ಹೊಸ ದೃಷ್ಟಿಕೋನ, ಹೊಸ ಭರವಸೆಯಿಂದ ಮುಂದಕ್ಕೆ ಸಾಗೋಣ ಎಂದು ಕರೆಕೊಟ್ಟರು.
ಇವತ್ತಿನ ತಂತ್ರಜ್ಞಾನ ಯುಗದಲ್ಲಿ, ಶಿಕ್ಷಕರು ಮುಂಬರುವ ಸವಾಲುಗಳನ್ನು ಎದುರಿಸಿ ಹೊಸ-ಹೊಸ ಬಗೆಯ ಬೋಧನಾ ತಂತ್ರಗಳನ್ನು ಅಳವಡಿಸಿಕೊಳ್ಳಬೇಕು. ಶಿಕ್ಷಕರು ನಿರಂತರವಾಗಿ ಕಲಿಕೆಯಲ್ಲಿ ತೊಡಗಿಸಿಕೊಂಡು, ತಮ್ಮ ವಿದ್ಯಾರ್ಥಿಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ಮಾರ್ಗದರ್ಶನ ನೀಡಲು ಸಿದ್ಧರಾಗಿರಬೇಕು. ಜ್ಞಾನ ಕೊಟ್ಟ ಶಿಕ್ಷಕರನ್ನು ನೆನೆಸುತ್ತಾ, ನಾವು ಹೇಗೆ ಜ್ಞಾನ ಪಡೆಯಬೇಕು ಎಂಬುದನ್ನು ವಿದ್ಯಾರ್ಥಿಗಳು ಯೋಚಿಸಬೇಕು ಎಂದು ಬಿಎಲ್‌ಡಿಇಯ ಸಹ ಕುಲಪತಿ ಪ್ರೊ. ಅರುಣ ಸಿ ಇನಾಮದಾರ್ ಹೇಳಿದರು.

ಶಿಕ್ಷಕರ ವೃತ್ತಿ ಅತ್ಯಂತ ಶ್ರೇಷ್ಠ ವೃತ್ತಿಯಾಗಿದ್ದು, ಸಮಾಜ ನಿರ್ಮಾಣದಲ್ಲಿ ಶಿಕ್ಷಕರು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ಮನುಷ್ಯತ್ವ ಮತ್ತು ಸಂಸ್ಕಾರ ಕಲಿಸುವವರು ಶಿಕ್ಷಕರು ಮಾತ್ರ ಸಮಾಜವನ್ನು ಎತ್ತರಕ್ಕೆ ಒಯ್ಯಲು ಗುರಿ ಮತ್ತು ಗುರು ಅವಶ್ಯಕ. ಕೇವಲ ಶಿಕ್ಷಕರ ದಿನಾಚರಣೆ ದಿನವೇ ಗುರುಗಳಿಗೆ ಗೌರವಿಸುವುದು ಅಲ್ಲ, ಪ್ರತಿ ದಿನವೂ ಶಿಕ್ಷಕರಿಗೆ ಗೌರವಕೊಡಬೇಕು ಎಂದು ಮುಖ್ಯ ಅತಿಥಿ ಕುಲ ಸಚಿವ ಶಂಕರಗೌಡ ಸೋಮನಾಳ ಹೇಳಿದರು.
ಪ್ರಾಧ್ಯಾಪಕ ಪ್ರೊ.ಓಂಕಾರ ಕಾಕಡೆ, ಪ್ರೊ.ಶಾಂತಾದೇವಿ ಟಿ, ಪ್ರೊ.ಲಕ್ಷ್ಮಿದೇವಿ,ವಿವಿಧ ವಿಭಾಗಗಳ ಮುಖ್ಯಸ್ಥರು, ಆಧ್ಯಾಪಕರು, ಬೋಧಕೇತರ ಸಿಬ್ಬಂದಿ, ಸಂಶೋಧನಾ ವಿದ್ಯಾರ್ಥಿನಿಯರು, ಕಾರ್ಯಕ್ರಮದ ಸಂಯೋಜಕ ಡಾ.ಚಂದ್ರಶೇಖರ ಮಠಪತಿ, ಡಾ.ಗಣೇಶ.ಎಸ್.ಆರ್, ಡಾ.ಬಾಬು ಲಂಬಾಣಿ ಭಾಗವಹಿಸಿದ್ದರು. ವಿದ್ಯಾರ್ಥಿನಿ ನಿಕಿತಾ ಚಿತವಾಡಗಿ ನಿರೂಪಿಸಿದರು.