ಪ್ಯಾರಾಮೆಡಿಕಲ್ ವಿದ್ಯಾರ್ಥಿನಿ ಚಂದ್ರಿಕಾ (21) ಆತ್ಮಹತ್ಯೆ ಪ್ರಕರಣಕ್ಕೆ ಡೆತ್ ನೋಟ್ ಪತ್ತೆಯಾಗುತ್ತಿದಂತೆ ಹೊಸ ತಿರುವು ಪಡೆದುಕೊಂಡಿದ್ದು, ಪ್ರೀತಿಯ ಮಗ್ಗುಲಿಗೆ ಹೊರಳಿದೆ.
ಶಿರಾ ತಾಲೂಕಿನ ಮಡಕನಹಳ್ಳಿ ಗ್ರಾಮದ ಚಂದ್ರಿಕಾ ಎಸ್ ಐಟಿ ಬಳಿಯ ಹಿಂದುಳಿದ ವರ್ಗಗಳ ಹಾಸ್ಟಲ್ ನಲ್ಲಿದ್ದುಕೊಂಡು ತುಮಕೂರು ನಗರದ ಖಾಸಗಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಯೋಗೀಶ್ ಮತ್ತು ಚಂದ್ರಿಕಾ ಪರಸ್ಪರ ಪ್ರೀತಿಸುತ್ತಿದ್ದರು. ಯೋಗೀಶ್ ಎಂಬ ಯುವಕ ಪ್ರೀತಿಸಿ ಮೋಸ ಮಾಡಿದ್ದಕ್ಕೆ, ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಚಂದ್ರಿಕಾ ಡೆತ್ ನೋಟ್ ಬರೆದಿಟ್ಟಿದ್ದಾರೆ. ಡೆತ್ ನೋಟ್ ಪೊಲೀಸರ ಕೈ ಸೇರಿದ ಬೆನ್ನಲ್ಲೆ ಯೋಗೀಶ್ ತಲೆಮರೆಸಿಕೊಂಡಿದ್ದಾನೆ. ಆತನ ಪತ್ತೆಗೆ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.
ಸಾವಿನ ಬಗ್ಗೆ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ತುಮಕೂರಿನ ಹೊಸ ಬಡವಾಣೆ ಠಾಣೆಯ ಪೊಲೀಸರು ಅಸ್ವಾಭಾವಿಕ ಸಾವು (ಯುಡಿಆರ್) ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಡೆತ್ ನೋಟ್ ಪತ್ತೆಯಾಗಿದೆ. ಈ ಬೆಳವಣಿಗೆಯ ನಂತರ ಚಂದ್ರಿಕಾ ತಾಯಿ ನೀಡಿದ ದೂರಿನ ಮೇರೆಗೆ ಯೋಗೀಶ್ ಮತ್ತು ಆತನ ತಾಯಿ ಹಾಗೂ ಮತ್ತೂಬ್ಬರ ವಿರುದ್ಧ ಆತ್ಮಹತ್ಯೆ ಗೆ ಪ್ರಚೋದನೆ, ಎಸ್. ಸಿ, ಎಸ್. ಟಿ, ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಲಿಂಗಾಯತ ಸಮುದಾಯದ ಯೋಗೀಶ್ ಪ್ರೀತಿ ಹೆಸರಿನಲ್ಲಿ ಮೋಸ ಮಾಡಿದ್ದಾನೆ. ನೀನು ಪರಿಶಿಷ್ಟ ಜಾತಿಗೆ ಸೇರಿದ್ದರಿಂದ ಮನೆಯಲ್ಲಿ ಮದುವೆಗೆ ಒಪ್ಪುತ್ತಿಲ್ಲ ಎಂದು ಚಂದ್ರಿಕಾ ಗೆ ಮಾನಸಿಕ ಮತ್ತು ದೈಹಿಕ ಹಿಂಸೆ ನೀಡಿದ್ದಾನೆ. ಬೇರೆ ಹುಡುಗಿ ಜತೆ ಮದುವೆ ಆಗುತ್ತಿರುವುದಾಗಿ ಹೇಳಿ ಕಿರುಕುಳ ನೀಡಿದ್ದಾನೆ. ಮನೆಯಲ್ಲಿ ನೋಡಿದ ಹುಡುಗಿ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಕಿರುಕುಳ, ಹಿಂಸೆ ತಾಳಲಾರದೆ ಚಂದ್ರಿಕಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ತುಮಕೂರಿನ ಎಸ್ ಎಸ್ ಪುರಂ ನ ‘ತಿಂಡಿ ಗುರು’ ಹೊಟೇಲ್ ನಲ್ಲಿ ಚಂದ್ರಿಕಾ ಕ್ಯಾಶಿಯರ್ ಆಗಿ ಪಾರ್ಟ್
ಟೈಮ್ ಕೆಲಸ ಮಾಡುತ್ತಿದ್ದರು. ಹೋಟೆಲ್ ಮುಚ್ಚಿದ ನಂತರ ಇದರ ಮಾಲೀಕ ದರ್ಶನ್ ಮನೆಯಲ್ಲೆ ಮೇಕಿಂಗ್ ಸೆಂಟರ್ ನಡೆಸುತ್ತಿದ್ದರು. ಕೆಲವು ದಿನಗಳಿಂದ ಚಂದ್ರಿಕಾ ಅಡುಗೆ ಕೆಲಸ ಮಾಡುತ್ತಾ, ಅಲ್ಲಿಯೆ ವಾಸವಿದ್ದರು. ಇದೇ ಮನೆಯಲ್ಲಿ ಈಚೆಗೆ ನೇಣು ಹಾಕಿಕೊಂಡಿದ್ದರು.
