ರಾಜ್ಯ ಸರಕಾರವು ಸೆಪ್ಟೆಂಬರ್ 15 ರಂದು ‘ಪ್ರಜಾಪ್ರಭುತ್ವ ದಿನ’ವನ್ನು ವಿಶೇಷವಾಗಿ ಆಚರಿಸಲು ನಿರ್ಧರಿಸಿದ್ದು, ಎಲ್ಲರೂ ಸೇರಿ ಸಂಭ್ರಮಿಸಬೇಕಿದೆ. ಎಲ್ಲ ಇಲಾಖೆಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಕಡ್ಡಾಯವಾಗಿ ಪ್ರಜಾಪ್ರಭುತ್ವ ದಿನದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂದು ಕಾರ್ಮಿಕ, ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಜಿಲ್ಲಾಮಟ್ಟದ ಅಧಿಕಾರಿ ಮತ್ತು ವಿವಿಧ ಸರ್ಕಾರೇತರ ಸಂಘ, ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲರೂ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಬೇಕೆಂದು ಸೂಚಿಸಿದರು.
ಬೀದರ್ ಜಿಲ್ಲೆಯಿಂದ ಚಾಮರಾಜನಗರದವರೆಗೆ ಏಕಕಾಲಕ್ಕೆ ರಾಜ್ಯದ ಎಲ್ಲ 31 ಜಿಲ್ಲೆಗಳಲ್ಲಿ ಮಾನವ ಸರಪಳಿ ರೂಪಿಸುವ ಮೂಲಕ ಪ್ರಜಾಪ್ರಭುತ್ವದ ಏಕತೆ, ಸದೃಢತೆ, ಸಾಮರಸ್ಯ ಮತ್ತು ಜನಶಕ್ತಿ ಸಾರುವ ಸಂಕೇತವಾಗಿ ಮಾನವ ಸರಪಳಿ ರೂಪಿಸಲಾಗುತ್ತಿದೆ. ಜಿಲ್ಲೆಯ 51 ಕಿ.ಮೀ ಮಾರ್ಗದಲ್ಲಿ ಮಾನವ ಸರಪಳಿ ನಿರ್ಮಿಸಲಾಗುತ್ತಿದೆ. ಕಾರ್ಯಕ್ರಮದ ಯಶಸ್ವಿಗೆ ಪ್ರತಿಯೊಬ್ಬರು ಶ್ರಮಿಸಿ, ಪಾಲ್ಗೊಳ್ಳಬೇಕು ಎಂದರು.
ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ವಿಶೇಷವಾಗಿ ಆಚರಿಸಲಾಗುತ್ತಿರುವ ರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಲ್ಲೆಯ ವಿದ್ಯಾರ್ಥಿಗಳು, ಸಂಘ, ಸಂಸ್ಥೆಗಳ ಪ್ರತಿನಿಧಿಗಳು, ಸರಕಾರಿ ನೌಕರರು, ಕುಟುಂಬದವರು, ಸಾರ್ವಜನಿಕರು ಭಾಗವಹಿಸಬೇಕೆಂದು ಹೇಳಿದರು.
ಇದನ್ನು ಓದಿದ್ದೀರಾ? ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಬಾಯಲ್ಲಿ ಮತ್ತೆ ದೇವರು, ಮತ್ತೆ ಸುದ್ದಿ, ಮತ್ತೆ ಮೌನ!
ಅಪರ ಜಿಲ್ಲಾಧಿಕಾರಿ ಗೀತಾ ಸಿ.ಡಿ., ಮಹಾನಗರ ಪೋಲೀಸ್ ಆಯುಕ್ತ ಎನ್.ಶಶಿಕುಮಾರ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸ್ವರೂಪ ಟಿ.ಕೆ., ಹೆಚ್ಚುವರಿ ಪೋಲೀಸ್ ಅಧೀಕ್ಷಕ ನಾರಾಯಣ ಬರಮನಿ, ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ವೇದಿಕೆಯಲ್ಲಿದ್ದರು.