ಬಹುಪಾಲು ಮುಸ್ಲಿಂ ದೊರೆಗಳನ್ನು ಪೂರ್ವಗ್ರಹ ಪೀಡಿತರಾಗಿಯೇ ನೋಡುವ ನಮ್ಮ ನೋಟಕ್ರಮಗಳನ್ನು ಎರಡನೇ
ಇಬ್ರಾಹಿಂ ಆದಿಲಶಾಹನಂತಹ ದೊರೆಗಳು ಬದಲಿಸುತ್ತಾರೆ. ಎರಡು ಧರ್ಮಗಳನ್ನು ಬೆಸೆಯುವ ಈತನ ಕವಿಹೃದಯ ಜನರ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಿರುವುದು ಅರಿವಿಗೆ ಬರುತ್ತದೆ. ಇಂತಹ ಮರುಭೇಟಿಯ ಸಂದರ್ಭದಲ್ಲಿಯೇ ಮುಸ್ಲಿಂ ದೊರೆಯ ಗಣೇಶನ ಚಿತ್ರಣದ ಭಿನ್ನ ಮಗ್ಗಲೊಂದು ತೆರೆದುಕೊಂಡು ಅಚ್ಚರಿ ಹುಟ್ಟಿಸುತ್ತದೆ.
ಗಣೇಶ ಹಬ್ಬ ಎಂಬುದು ಸಾಮೂಹಿಕ ಹಬ್ಬ. ಊರು ಕೇರಿ ಜನ ಸೇರಿ ಸಂಭ್ರಮಿಸಲಾಗುತ್ತದೆ. ಜಾತಿಯ ಗೆರೆಗಳನ್ನು ಮೀರಿ ಗಣೇಶನನ್ನು ಆರಾಧಿಸುವ ಉದಾಹರಣೆಗಳಿವೆ. ಆದರೆ ಇದು ಇಂದಷ್ಟೇ ಅಲ್ಲ, ಆರು ಶತಮಾನಗಳಷ್ಟು ಹಿಂದೆಯೂ ಇತ್ತೆಂದು ಗೊತ್ತೆ? ಬಿಜಾಪುರವನ್ನು ಆಳುತ್ತಿದ್ದ ಆದಿಲ್ ಶಾಹಿ ದೊರೆ 2ನೇ ಇಬ್ರಾಹಿಂ ಗಣೇಶನ ಆರಾಧಿಸುತ್ತಿದ್ದ ಮುಸ್ಲಿಮ್ ದೊರೆ!
ಭಾರತದ ಚರಿತ್ರೆಯಲ್ಲಿ ಮಧ್ಯಯುಗ ಹಲವು ಕಾರಣಕ್ಕೆ ವರ್ಣರಂಜಿತವಾಗಿದೆ. ಹದಿನಾಲ್ಕನೇ ಶತಮಾನದಲ್ಲಿ ಆಡಳಿತದಿಂದ ದಕ್ಷಿಣ ಭಾರತದಲ್ಲಿ ಹಲವರು ಸ್ವತಂತ್ರರಾದರು. ಈ ವೇಳೆ ವಿಜಯನಗರ ಸಾಮ್ರಾಜ್ಯದ ಜತೆ ಕ್ರಿ.ಶ 1489ರಲ್ಲಿ ಬಿಜಾಪುರದಲ್ಲಿ ಆದಿಲಶಾಹಿಗಳ ರಾಜ್ಯವೂ ಸ್ಥಾಪನೆಯಾಯಿತು. ಇವರು ದಕ್ಷಿಣ ಭಾರತದ ಬಹುಭಾಗವನ್ನು ವಿಜಾಪುರ ಕೇಂದ್ರದಿಂದ ಆಳಿದರು. ಈ ಸಂದರ್ಭದಲ್ಲಿ ಹಿಂದೂ ಮುಸ್ಲಿಮ್ ಸಂಸ್ಕೃತಿಗಳ ಕೊಡು-ಕೊಳ್ಳುವಿಕೆಯ ಸಾಮರಸ್ಯದ ಸಂಸ್ಕೃತಿಯೊಂದು ಮೈಪಡೆಯಿತು. ಇದು ಆಳುವ ರಾಜರ ನೆಲೆಯಿಂದ ಜನಸಾಮಾನ್ಯರ ನೆಲೆಗೆ ವ್ಯಾಪಿಸಿ ಸಮಾಜದಲ್ಲಿ ಬೇರುಬಿಟ್ಟಿತು. ಇದರ ಫಲವೇ ಉತ್ತರ ಕರ್ನಾಟಕ ಈಗಲೂ ಧಾರ್ಮಿಕ ಸಾಮರಸ್ಯದ ಕೇಂದ್ರ.
ಆದಿಲಶಾಹಿಗಳಲ್ಲಿ ನಲವತ್ತೇಳು ವರ್ಷಗಳ ಕಾಲ ಆಳಿದ ಎರಡನೆಯ ಇಬ್ರಾಹಿಂ ಆದಿಲಶಾಹಿ ಕವಿಹೃದಯದ ಅರಸ. ಈತನ ಆಡಳಿತದಲ್ಲಿ ಬಿಜಾಪುರ ಸಾಂಸ್ಕೃತಿಕವಾಗಿ ಮಹತ್ತರ ಬೆಳವಣಿಗೆ ಕಂಡಿತು. ಶ್ರೇಷ್ಠ ಸೂಫಿಸಂತರು, ಕವಿಗಳು, ಸಂಗೀತಗಾರರು, ವಾಸ್ತುಶಿಲ್ಪಿಗಳು, ಕಲಾವಿದರು ಬಿಜಾಪುರದಲ್ಲಿ ನೆಲೆನಿಂತರು. ಈ ಸಾಂಸ್ಕೃತಿಕ ವಾತಾವರಣದಲ್ಲಿ ಸ್ವತಃ ಇಬ್ರಾಹಿಂ ಕವಿಯಾಗಿ, ಸಂಗೀತಗಾರನಾಗಿ, ಚಿತ್ರಕಲಾವಿದನಾಗಿ ರೂಪುಗೊಂಡ. ಈತನನ್ನು ಸಂಗೀತದ ನವರಸಗಳು ಹುಚ್ಚು ಹಿಡಿಸಿದ್ದವು. ಇದರ ಫಲವಾಗಿಯೇ ಆತನ ‘ಕಿತಾಬ್-ಇ-ನವರಸ್’ ಕೃತಿ ರೂಪುಗೊಂಡಿತು. ಇದು ದಖನಿ ಭಾಷೆಯ 39 ಗೀತೆಗಳ, 17 ದೋಹಾಗಳ ಸಂಕಲನವಾಗಿದೆ. ಈ ಕೃತಿಯನ್ನು ಡಾ. ಕೃಷ್ಣ ಕೋಲಾರ ಕುಲಕರ್ಣಿ ಅವರು ಕನ್ನಡಕ್ಕೆ ತಂದಿದ್ದಾರೆ. ಬಿಜಾಪುರದ ಬಿ.ಎಲ್.ಡಿ.ಇ ಸಂಸ್ಥೆಯ ಫ.ಗು.ಹಳಕಟ್ಟಿ ಸಂಶೋಧನ ಕೇಂದ್ರವು ಪ್ರಕಟಿಸಿದ ‘ಆದಿಲಶಾಹಿ ಸಾಹಿತ್ಯ ಸಂಪುಟ’ದ ಸರಣಿಯಲ್ಲಿ ಪ್ರಕಟವಾಗಿದೆ.
‘ಕಿತಾಬ್ -ಇ- ನವರಸ್’ ಕೃತಿಯಲ್ಲಿ ಇಬ್ರಾಹಿಂ ಆದಿಲಶಾಹನು ಹಿಂದೂ ದೇವ ದೇವತೆಗಳನ್ನು ವರ್ಣಿಸುವ ಭಾಗಗಳು ವಿಶಿಷ್ಟವಾಗಿವೆ. ಅಂತೆಯೇ ಆತನ ಈ ಬಗೆಯ ನಂಬುಗೆಯ ಹಾದಿಯು ಧರ್ಮನಿರಪೇಕ್ಷ ಗುಣಕ್ಕೆ ಸಾಕ್ಷಿಯಾಗಿದೆ. ಮೊದಲ ದೋಹಾದಲ್ಲಿಯೇ ‘ಹೇ ತಾಯೇ ಸರಸ್ವತಿ, ಇಬ್ರಾಹಿಮನ ಮೇಲೆ ನಿನ್ನ ಅನುಗ್ರಹವಿದ್ದ ಕಾರಣವೇ ಆತನ ನವರಸ ಕಾವ್ಯವು ಜಗತ್ತಿನಲ್ಲಿ ಬಹುಕಾಲ ಬಾಳುತ್ತದೆ’ ಎಂಬ ಆತ್ಮವಿಶ್ವಾಸದಲ್ಲಿ ಕಾವ್ಯವನ್ನು ಬರೆಯುತ್ತಾನೆ. ಅಂತೆಯೇ ಶಿವನನ್ನು ‘ಕರ್ಪೂರದ ಗೌರವವರ್ಣ, ಹಣೆಯಲ್ಲಿ ಚಂದ್ರ ತಿಲಕ, ಮುಕ್ಕಣ್ಣ, ಮುಕುಟದಲ್ಲಿ ಗಂಗೆ ಧರಿಸಿದಾತ, ಕೈಯಲ್ಲಿ ನರರುಂಡ, ತ್ರಿಶೂಲ ಹಿಡಿದವ, ಭಸ್ಮಲೇಪಿತ’ ಎಂದು ವರ್ಣಿಸುತ್ತಾನೆ. ದುರ್ಗೆಯ ಶಕ್ತಿಯ ಬಗ್ಗೆ ಅಚ್ಚರಿ ವ್ಯಕ್ತಪಡಿಸುತ್ತಲೇ ಗೌರವಿಸುತ್ತಾನೆ.
ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ | ಸಿನಿಮಾ ನಿರ್ಮಾಣ ಸಂಸ್ಥೆಗಳಲ್ಲೂ ಲೈಂಗಿಕ ದೌರ್ಜನ್ಯ ತಡೆಗೆ ಆಂತರಿಕ ದೂರು ಸಮಿತಿಗಳು ಇರಲಿ
ಈ ದೈವಗಳ ವರ್ಣನೆಯಲ್ಲಿ ಗಣೇಶನ ಚಿತ್ರಗಳು ಗಮನ ಸೆಳೆಯುತ್ತವೆ. ಇಬ್ರಾಹಿಮನು ಗಣೇಶನ ಜತೆ ಕರುಳಬಳ್ಳಿಯಂತೆ ಗುರುತಿಸಿಕೊಳ್ಳುವುದು ವಿಶಿಷ್ಟವಾಗಿದೆ. ಈತನು ಗಣೇಶನನ್ನು ತಂದೆ ಎಂತಲೂ, ಸರಸ್ವತಿಯನ್ನು ತಾಯಿ ಎಂತಲೂ ಭಾವಿಸುವ ಕ್ರಮವೇ ಅನ್ಯೋನ್ಯವಾಗಿದೆ. ‘ಗಣಪತಿ ನಿನ್ನ ರೂಪವನು ತುಸು ನೋಡಿದರೂ, ವಸಂತ ಋತುವಿನ ಸೂರ್ಯ ಥಳಥಳಿಸಿದಂತೆ ಕಾಣುವೆ’ ಎಂದು ವರ್ಣಿಸುತ್ತಾನೆ. ‘ಮಾತಾ ಪಿತೃಗಳಾದ ಶಾರದೆ, ಗಣಪತಿಯರು ಎರಡು ಸ್ಪಟಿಕದ ನಿರ್ಮಳ ಗಾಜುಗಳಂತಿದ್ದೀರಿ. ಅನಾಮಿಕ ಇಬ್ರಾಹಿಮನಿಗೆ ನೀವು ಆಶೀರ್ವದಿಸಿದ್ದರಿಂದಲೇ ನನ್ನ ಕೀರ್ತಿಯು ಹೆಚ್ಚಿದೆ’ ಎಂದು ವಿನಮ್ರನಾಗಿ ಪ್ರಾರ್ಥಿಸುತ್ತಾನೆ. ಮುಂದುವರಿದು ‘ಸರಸ್ವತಿ ಗಣಪತಿಯರ ತುಂಬರ ವೀಣೆಯ ಜುಗಲಬಂದಿ ದುಃಖಗಳನ್ನೆಲ್ಲ ದೂರ ಮಾಡಿ ಭೋಗವಿಲಾಸಗಳ ಸುಖವ ಸೃಷ್ಟಿಸಿ ಸೂರ್ಯ ಚಂದ್ರರಾಗಿ ಕಂಗೊಳಿಸುತ್ತಾರೆ’ ಎಂದು ಸಂಗೀತದ ಲಯಗಳ ಜತೆ ಸಮೀಕರಿಸುವ ರೀತಿಯೂ ವಿಶಿಷ್ಟವಾಗಿದೆ.
ಗಣೇಶನ ಮೇಲೆ ಇಬ್ರಾಹಿಮನ ಪ್ರೀತಿ ಎಷ್ಟಿತ್ತೆಂದರೆ, ಸ್ವತಃ ಗಣೇಶನೇ ಈತನ ಪ್ರೀತ್ಯಾಧಾರಗಳನ್ನು ಕಂಡು ಮೋಹಗೊಂಡದ್ದಾಗಿ ಹೇಳುತ್ತಾನೆ ‘ಗಣಪತಿ ಮೋಹಗೊಂಡನು. ದೇವತೆಗಳು ತಥಾಸ್ತು ಎಂದರು. ಸರಸ್ವತಿ ಪ್ರಸನ್ನಳಾದಳು ಅದಕ್ಕೆಂದೇ ಇಬ್ರಾಹಿಮನ ಕಂಠ ಅಮೋಘವಾಯಿತು’ ಎಂದು ಉನ್ಮತ್ತನಾಗಿ ನೆನೆಯುತ್ತಾನೆ. ಗಣಪತಿಯ ಸೃಷ್ಟಿಯನ್ನು ಇಬ್ರಾಹಿಮನು ನೋಡುವುದು ಭಿನ್ನವಾಗಿದೆ. ಇಲ್ಲಿ ಸರಸ್ವತಿ ಮತ್ತು ಗಣಪತಿಗಳನ್ನು ಸತಿಪತಿಗಳನ್ನಾಗಿಯೂ, ಅಭೇದವಾಗಿ ಕಾಣುತ್ತಾನೆ.
ಗಣೇಶ ಪಾರ್ವತಿಯ ಮೈಮಣ್ಣಿನಿಂದ ಸೃಷ್ಟಿಯಾದ ಪುರಾಣದ ಕಥನವಿದ್ದರೆ ಅದನ್ನು ಇಬ್ರಾಹಿಮನು ಪರಿಭಾವಿಸುವ ಕ್ರಮವೇ ಬೇರೆ. ಆತ ಸರಸ್ವತಿಯ ಸೌಂದರ್ಯವನ್ನು ವರ್ಣಿಸುತ್ತಾ ”ಸರಸ್ವತಿ ಗಜದಂತದಲ್ಲಿ ಕೊರೆದ ಮೂರ್ತಿಯಂತಿರುವ ಕಾರಣ ಗಣಪತಿ ತನ್ನ ರೂಪವನ್ನೇ ‘ಆನೆಯಂತೆ’ ಮಾಡಿಕೊಂಡನೆಂದು” ವಿವರಿಸುತ್ತಾನೆ. ಇಲ್ಲಿ ಗಣಪನ ಸೃಷ್ಟಿಯನ್ನು ಸರಸ್ವತಿಯ ಮೂಲದಿಂದ ಹೇಳುತ್ತಾನೆ.

ಗಣಪನನ್ನು ಹಲವು ಕಡೆಗಳಲ್ಲಿ ನಿಸರ್ಗದ ಜತೆ ಸಮೀಕರಿಸಿ ಬೆಸೆಯುತ್ತಾನೆ. ಗಣಪನ ಮೂರ್ತಿಯು ‘ಹಸ್ತಾ ನಕ್ಷತ್ರದಂತಿದೆ’ ಎಂದು ಹೇಳುತ್ತಾ, ಹಸ್ತಾ ನಕ್ಷತ್ರದಲ್ಲಿ ಹೇಗೆ ಮಳೆಯಾಗುತ್ತದೆಯೋ, ಹಾಗೆ ಆತನ ಹಣೆಯಿಂದ ‘ಮದ’ ಹೊರಬೀಳುತ್ತದೆ ಎನ್ನುತ್ತಾನೆ. ಮುಂದುವರಿದು ಮಳೆಯ ಜತೆ ಗಣಪನನ್ನು ಹೋಲಿಸುತ್ತಾ, ‘ಆತನ ದಂತಗಳೇ ಮಿಂಚು, ಹಣೆಯೇ ಕಾಮನಬಿಲ್ಲು ಆತನ ವಾಣಿ ಅಮೃತ ಸಮಾನ, ಆತನ ಎದುರಿನ ಗಂಟೆಗಳ ನಾದವೇ ಮೋಡಗಳ ಗುಡುಗು…’ ಎಂದು ವರ್ಣಿಸುತ್ತಾ ಹೋಗುತ್ತಾನೆ. ಗುಣೀಜನರೇ, ಗಜಪತಿಯ ಪ್ರಶಂಸೆಯಲ್ಲಿ ನವರಸ ಗೀತೆಗಳನ್ನು ಹಾಡಿರಿ, ಪ್ರಕಾಶಮಾನವಾದ ಆತನು ಸದಾ ಸುಖಿಯಾಗಿರಲಿ ಎಂದು ಪ್ರಜೆಗಳಲ್ಲಿಯೂ ನಿವೇದಿಸಿಕೊಳ್ಳುತ್ತಾನೆ. ಹೀಗೆ ಇಬ್ರಾಹಿಮನು ಗಣೇಶನನ್ನು ತಂದೆಯ ಸ್ಥಾನದಲ್ಲಿರಿಸಿ ತನ್ನನ್ನು ತಾನು ಮಗನಂತೆ ಭಾವಿಸಿಕೊಳ್ಳುತ್ತ ಧರ್ಮದ ಗಡಿಗಳನ್ನು ಕೆಡವುತ್ತಾನೆ.
ಬಹುಪಾಲು ಮುಸ್ಲಿಂ ದೊರೆಗಳನ್ನು ಪೂರ್ವಗ್ರಹ ಪೀಡಿತರಾಗಿಯೇ ನೋಡುವ ನಮ್ಮ ನೋಟಕ್ರಮಗಳನ್ನು ಎರಡನೇ
ಇಬ್ರಾಹಿಮ ಆದಿಲಶಾಹನಂತಹ ದೊರೆಗಳು ಬದಲಿಸುತ್ತಾರೆ. ಹೀಗಾಗಿ ನಾವುಗಳು ಮುಸ್ಲಿಂ ದೊರೆಗಳ ಬಗೆಗಿನ ಮತೀಯ ಚರಿತ್ರೆಯ ನೋಟಗಳನ್ನು ಬದಲಿಸಿ ಮೂಲಪಠ್ಯಗಳನ್ನು ಮರುಓದು ಮಾಡಬೇಕಿದೆ. ಹಾಗಾದಲ್ಲಿ ಏಕಮುಖದ ಆಚೆಯ ಮಾನವೀಯ ಚಿತ್ರಗಳು ಕಣ್ಣಿಗೆ ಬೀಳುತ್ತವೆ. ಇಲ್ಲಿ ಇಬ್ರಾಹಿಮನು ದೈವಗಳನ್ನು ಮೂರ್ತೀಕರಿಸಿ ಜಡಗೊಳಿಸದೆ ಮನುಷ್ಯ ಸಂಬಂಧಗಳ ಜತೆ ಬೆಸೆದು ಚಲನಶೀಲಗೊಳಿಸುತ್ತಾನೆ. ಎರಡು ಧರ್ಮಗಳನ್ನು ಬೆಸೆಯುವ ಈತನ ಕವಿಹೃದಯ ಜನರ ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡುತ್ತಿರುವುದು ಅರಿವಿಗೆ ಬರುತ್ತದೆ. ಇಂತಹ ಮರುಭೇಟಿಯ ಸಂದರ್ಭದಲ್ಲಿಯೇ ಮುಸ್ಲಿಂ ದೊರೆಯ ಗಣೇಶನ ಚಿತ್ರಣದ ಭಿನ್ನ ಮಗ್ಗಲೊಂದು ತೆರೆದುಕೊಂಡು ಅಚ್ಚರಿ ಹುಟ್ಟಿಸುತ್ತದೆ.

ಅರುಣ್ ಜೋಳದ ಕೂಡ್ಲಿಗಿ
ಲೇಖಕ, ಜಾನಪದ ಸಂಶೋಧಕರು