ರಾಜ್ಯದಲ್ಲಿ ರಸ್ತೆ ಅಪಘಾತಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಇದರಿಂದ ಅಪಘಾತಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಕೂಡ ಹೆಚ್ಚಾಗಿದೆ. ಗೌರಿ ಹಬ್ಬದ ಸಂಭ್ರಮದ ನಡುವೆಯೇ ರಸ್ತೆ ಅಪಘಾತದಲ್ಲಿ 20ಕ್ಕೂ ಹೆಚ್ಚು ಜನ ಸಾವನ್ನಪ್ಪಿರುವ ಬಗ್ಗೆ ರಾಜ್ಯದಲ್ಲಿ ವರದಿಯಾಗಿದೆ.
ಸಂಚಾರ ನಿಯಮ ಪಾಲಿಸಿ, ಅತಿ ವೇಗದಿಂದ ವಾಹನ ಚಲಾಯಿಸಬೇಡಿ ಎಂದು ಟ್ರಾಫಿಕ್ ಪೊಲೀಸರು ಚಾಲಕರಲ್ಲಿ ಅರಿವು ಮೂಡಿಸುತ್ತಿದ್ದರೂ, ಕೆಲ ಸವಾರರು ಮಾತ್ರ ನಿಯಮಗಳನ್ನು ಗಾಳಿಗೆ ತೂರಿ ವಾಹನ ಚಲಾಯಿಸುತ್ತಾರೆ. ಇದರಿಂದ ಅಪಘಾತಗಳು ಸಂಭವಿಸಿ ಜೀವ ಕಳೆದುಕೊಳ್ಳುತ್ತಿದ್ದಾರೆ.
ಬೆಂಗಳೂರು, ವಿಜಯಪುರ, ಬಾಗಲಕೋಟೆ, ರಾಮನಗರ, ಮಂಗಳೂರು, ಚಿಕ್ಕಮಗಳೂರು ಸೇರಿದಂತೆ ನಾನಾ ಕಡೆ ನಿನ್ನೆಯಿಂದ (ಸೆ.6) ನಡೆದ ರಸ್ತೆ ಅಪಘಾತದಲ್ಲಿ 20ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಮೃತರ ಕುಟುಂಬಸ್ಥರ ಪಾಲಿಗೆ ಗಣೇಶ ಚತುರ್ಥಿ ಕರಾಳ ದಿನವಾಗಿದೆ.
ಟ್ರಾಫಿಕ್ ಹಾಗೂ ರಸ್ತೆ ಸುರಕ್ಷತಾ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಅವರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿರುವ ಮೂರು ವರ್ಷದ ಅಂಕಿ-ಅಂಶಗಳನ್ನು ಇದೇ ಸಂದರ್ಭದಲ್ಲಿ ‘ಎಕ್ಸ್’ ತಾಣದಲ್ಲಿ ಹಂಚಿಕೊಂಡಿದ್ದಾರೆ.
ಪೊಲೀಸ್ ವರದಿ ಪ್ರಕಾರ ರಾಜ್ಯದಲ್ಲಿ 2023 ಆಗಸ್ಟ್‌ನಿಂದ 2024 ಆಗಸ್ಟ್‌ವರೆಗೂ 7,596 ಜನ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. 2022 ಆಗಸ್ಟ್‌ನಿಂದ 2023 ಆಗಸ್ಟ್‌ವರೆಗೂ 8,146 ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 2021 ಆಗಸ್ಟ್‌ನಿಂದ 2022 ಆಗಸ್ಟ್‌ವರೆಗೂ 7,996 ಜನ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ.

ಜೂನ್, ಜುಲೈ, ಆಗಸ್ಟ್‌ನಲ್ಲೇ ಹೆಚ್ಚಿನ ಸಾವು
ಮುಂಗಾರು ಮಳೆಯ ಅವಧಿಯಾದ ಜೂನ್, ಜುಲೈ ಹಾಗೂ ಆಗಸ್ಟ್‌ನಲ್ಲೇ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ರಸ್ತೆ ಅಪಘಾತಗಳಲ್ಲಿ ಜನರು ಸಾವನ್ನಪ್ಪಿದ್ದನ್ನು ಕಾಣಬಹುದು. ಜೂನ್ 2022ರಲ್ಲಿ 1006, ಜೂನ್ 2023ರಲ್ಲಿ 1059 ಹಾಗೂ ಜೂನ್2024ರಲ್ಲಿ 860 ಜನ ಮೃತಪಟ್ಟಿದ್ದಾರೆ.
ಜುಲೈ 2022ರಲ್ಲಿ 867, ಜುಲೈ 2023ರಲ್ಲಿ 862 ಹಾಗೂ ಜುಲೈ 2024ರಲ್ಲಿ 800 ಹಾಗೆಯೇ ಆಗಸ್ಟ್ 2022ರಲ್ಲಿ 900, ಆಗಸ್ಟ್ 2023ರಲ್ಲಿ 914 ಹಾಗೂ ಆಗಸ್ಟ್ 2024ರಲ್ಲಿ 801 ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಬೆಂಗಳೂರಿನಲ್ಲೇ ಹೆಚ್ಚು ಸಾವು
ರಾಜ್ಯದ ಜಿಲ್ಲೆಗಳಿಗೆ ಹೋಲಿಸಿದರೆ ಬೆಂಗಳೂರು ನಗರದಲ್ಲಿ ರಸ್ತೆ ಅಪಘಾತಗಲ್ಲಿ ಸಾವನ್ನಪ್ಪುವವರ ಸಂಖ್ಯೆ ಜಾಸ್ತಿ ಇದೆ. 2022ರಲ್ಲಿ 515, 2023ರಲ್ಲಿ 567 ಹಾಗೂ 2024ರಲ್ಲಿ 569 ಜನ ಮೃತಪಟ್ಟಿದ್ದಾರೆ.
ಕೊಡಗಿನಲ್ಲಿ ಕಡಿಮೆ
ರಾಜ್ಯಕ್ಕೆ ಹೋಲಿಸಕೊಂಡರೆ ಕೊಡಗಿನಲ್ಲಿ ರಸ್ತೆ ಅಪಘಾತದ ಸಾವಿನ ಪ್ರಮಾಣ ಕಡಿಮೆ ಇದೆ. 2022ರಲ್ಲಿ 49, 2022ರಲ್ಲಿ 59 ಹಾಗೂ 2024ರಲ್ಲಿ 60 ಜನ ಕೊಡಗಿನಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಬೆಂಗಳೂರು ಬಿಟ್ಟರೆ ತುಮಕೂರು, ಬೆಳಗಾವಿ, ಮಂಡ್ಯ, ಮೈಸೂರು, ವಿಜಯಪುರ ಜಿಲ್ಲೆಗಳಲ್ಲೂ ಅಪಘಾತ ಸಾವಿನ ಪ್ರಮಾಣ ಹೆಚ್ಚಿದೆ. ಸರಾಸರಿ 300-400 ವರೆಗೂ ಪ್ರತಿ ವರ್ಷ ಈ ಜಿಲ್ಲೆಗಳಲ್ಲಿ ಜನರು ಅಪಘಾತಗಳಲ್ಲಿ ಮೃತಪಟ್ಟಿರುತ್ತಾರೆ.
