ಕುಸ್ತಿ ಅಂಗಳದಲ್ಲಿ ಸತತ ಒಂದೊಂದೇ ಗೆಲುವಿನ ಮೆಟ್ಟಿಲೇರಿದ ಚರ್ಕಿ ದಾದ್ರಿಯ ಛಲಗಾರ್ತಿಗೆ ಒಲಿಂಪಿಕ್‌ನಲ್ಲಿ ಪದಕ ಗಳಿಸಿ ನಿವೃತ್ತರಾಗಬೇಕು ಎಂಬ ಗುರಿಯಿತ್ತು. ಆದರೆ, ಪದಕದ ಕನಸು ಹುಸಿಯಾಗಿದೆ. ಮುಂದಿನ ಒಲಿಂಪಿಕ್‌ಗೆ ವಿನೇಶ್ ಸ್ಪರ್ಧಿಸುತ್ತಾರಾ ಗೊತ್ತಿಲ್ಲ. ಆದರೆ ಹೊಸ ಹೋರಾಟದ ಹಾದಿ ಅವರನ್ನು ಕೈಬೀಸಿ ಕರೆದಿದೆ.
ಕುಸ್ತಿಪಟು ವಿನೇಶ್ ಫೋಗಟ್ ಈಗ ರಾಜಕೀಯ ಅಂಗಳದ ಕುಸ್ತಿಗೆ ಕಾಲಿಟ್ಟಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಫೈನಲ್ ಪಂದ್ಯಕ್ಕೆ ಪ್ರವೇಶ ಪಡೆದರೂ ಕೊನೆಯ ಕ್ಷಣದಲ್ಲಿ 100 ಗ್ರಾಮ್ ಗಳ ಹೆಚ್ಚುವರಿ ದೇಹತೂಕ ಆಕೆಯ ಪದಕದ ಕನಸನ್ನು ಮಣ್ಣುಪಾಲು ಮಾಡಿತ್ತು. “ಕುಸ್ತಿ ನನ್ನನ್ನು ಸೋಲಿಸಿತು” ಎಂದು ಭಾವುಕರಾದ ಅವರು ಪ್ಯಾರಿಸ್ ನೆಲದಲ್ಲಿಯೇ ಕುಸ್ತಿ ಕ್ರೀಡೆಗೆ ವಿದಾಯ ಘೋಷಿಸಿದ್ದರು. ಆದರೆ, ಅಲ್ಲಿಂದ ಭಾರತದ ನೆಲಕ್ಕೆ ಕಾಲಿಡುತ್ತಿದ್ದಂತೆ ಅಭಿಮಾನಿಗಳು ನೀಡಿದ ಭವ್ಯ ಸ್ವಾಗತ ಮತ್ತು ಹುಟ್ಟೂರಿನ ಜನ ತೋರಿದ ಪ್ರೀತಿಯ ಮಹಾಪೂರಕ್ಕೆ ವಿನೇಶ್ ಕರಗಿದ್ದರು. ಆಗ ಅವರಾಡಿದ ಮಾತಿಗೆ ಈಗ ಇನ್ನೊಂದು ಅರ್ಥ ದಕ್ಕಿದೆ. ಹುಟ್ಟೂರಿನ ಸ್ವಾಗತ ಸ್ವೀಕರಿಸಿ ಮಾಧ್ಯಮಗಳ ಜೊತೆ ಮಾತನಾಡಿದ “ವಿನೇಶ್ ಹೋರಾಟ ಇನ್ನೂ ಮುಗಿದಿಲ್ಲ, ಮುಂದುವರಿಯಲಿದೆ” ಎಂದು ಸಾರಿದ್ದರು. ಇನ್ಮುಂದೆ ಕುಸ್ತಿ ಅಂಗಳದಲ್ಲಿ ವಿನೇಶ್ ಕಾಣಿಸಿಕೊಳ್ಳುವುದಿಲ್ಲ, ಎಂದು ನೊಂದಿದ್ದ ಕ್ರೀಡಾಭಿಮಾನಿಗಳು ಹೋರಾಟ ಇನ್ನೂ ಮುಂದುವರಿಯಲಿದೆ ಎಂಬ ಹೇಳಿಕೆಯನ್ನು, ತಮ್ಮ ನಿವೃತ್ತಿಯ ನಿರ್ಧಾರವನ್ನು ಅವರು ವಾಪಸ್ ಪಡೆದಿದ್ದಾರೆ ಎಂದೇ ಭಾವಿಸಿದ್ದರು. ಆದರೆ, ನಿನ್ನೆ (ಸೆ.6) ಕಾಂಗ್ರೆಸ್ ಸೇರಿದ್ದ ವಿನೇಶ್ ಫೋಗಟ್-ಭಜರಂಗ್ ಪೂನಿಯಾ ಹರಿಯಾಣದ ರಾಜಕೀಯ ಅಖಾಡದಲ್ಲಿ ತಮ್ಮ ಹೋರಾಟ ಮುಂದುವರಿಸುವ ಸೂಚನೆ ಕೊಟ್ಟಿದ್ದಾರೆ. ಈ ರಾಜಕೀಯ ಕುಸ್ತಿಯ ಕದನ ಕುತೂಹಲ ಮುಂಬರುವ ದಿನಗಳಲ್ಲಿ ರೋಚಕವಾಗಿಯೇ ಇರಲಿದೆ.

ಯಾಕೆಂದರೆ, ವಿನೇಶ್ ಹುಟ್ಟು ಛಲಗಾರ್ತಿ. ಕಳೆದ ವರ್ಷ ಆಕೆ ಕುಸ್ತಿ ಫೆಡರೇಷನ್ ಅಧ್ಯಕ್ಷನ ವಿರುದ್ಧ ಬೀದಿಯಲ್ಲಿ ಕೂತು ತಿಂಗಳ ಕಾಲ ಹೋರಾಟ ಮಾಡಿದ್ದರು. ಭಜರಂಗ್ ಪೂನಿಯಾ, ಸಾಕ್ಷಿ ಮಲ್ಲಿಕ್ ಜೊತೆ ಸೇರಿ ಸಂಸದ ಬ್ರಿಜ್‌ಭೂಷಣ್ ಶರಣ ಸಿಂಗ್ ವಿರುದ್ಧ ನಡೆಸಿದ ಹೋರಾಟ ಆತನಿಗೆ ಲೋಕಸಭೆಯ ಟಿಕೆಟ್ ಸಿಗದಂತೆ ಮಾಡಿತ್ತು. ಅದು ವಿನೇಶ್ ತಂಡದ ಹೋರಾಟದ ನೇರ ಪರಿಣಾಮ ಎಂದೇ ಹೇಳಬಹುದು. ಪೊಲೀಸರು ಬ್ರಿಜ್ ಭೂಷಣನ ವಿರುದ್ಧ ಚಾರ್ಜ್‌ಶೀಟ್ ಕೋರ್ಟ್‌ಗೆ ಸಲ್ಲಿಸಲೇಬೇಕಾಯಿತು. ತನ್ನ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಸುಪ್ರೀಂ ಮೊರೆ ಹೋದರೂ ಫಲ ನೀಡಿಲ್ಲ. ರದ್ದುಪಡಿಸಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ಹೇಳಿದೆ. ವಿನೇಶ್ ಹೋರಾಟ ವ್ಯರ್ಥವಾಗಿಲ್ಲ. ಬೀದಿ ಹೋರಾಟ ನಡೆದ ಕೇವಲ ಒಂದೇ ವರ್ಷದಲ್ಲಿ ಆಕೆ ಒಲಿಂಪಿಕ್ ಸ್ಪರ್ಧೆಗೆ ಪುಟಿದೆದ್ದು ಅಣಿಯಾಗಿದ್ದರು. ಈ ಬಾರಿ ಒಲಿಂಪಿಕ್ಸ್‌ನಲ್ಲಿ ಪದಕ ಪಡೆದೇ ತೀರುವ ಛಲ ತೊಟ್ಟಿದ್ದರು. ಅಂತೆಯೇ ಸೆಮಿಫೈನಲ್‌ಗೆ ಪ್ರವೇಶ ಪಡೆದ ಮೊದಲ ಭಾರತೀಯ ಕುಸ್ತಿಪಟು ವಿನೇಶ್.
ಹರಿಯಾಣದ ಚರ್ಕಿ ದಾದ್ರಿ ಎಂಬ ಗ್ರಾಮದ ಒಂದು ಸಾಮಾನ್ಯ ಕುಟುಂಬದಲ್ಲಿ ಜನಿಸಿದ ವಿನೇಶ್ ಒಂಬತ್ತನೆ ವಯಸ್ಸಿನಲ್ಲಿಯೇ ತನ್ನ ತಂದೆಯನ್ನು ಕಳೆದುಕೊಂಡು ದೊಡ್ಡಪ್ಪ ಮಹಾವೀರ್ ಫೋಗಟ್ ನೆರಳಿನಲ್ಲಿ ಬೆಳೆಯುತ್ತಾರೆ. ಅವರೇ ಇವರ ಕುಸ್ತಿಯ ಗುರುವಾಗುತ್ತಾರೆ. ಪುರುಷ ಸೀಮಿತ ಕುಸ್ತಿ ಕಣದೊಳಗೆ ಸ್ಥಾನ ಗಳಿಸಲು ಸಾಮಾಜಿಕ ವಿರೋಧವನ್ನು ಎದುರಿಸುವ ವಿನೇಶ್ ಮತ್ತು ದೊಡ್ಡಪ್ಪನ ಕುಟುಂಬವು ಊರನ್ನೇ ತೊರೆಯಬೇಕಾಗುತ್ತದೆ. ಇವೆಲ್ಲಾ ಸವಾಲುಗಳನ್ನು ಎದುರಿಸಿ ಕುಸ್ತಿಯಲ್ಲಿ ದೊಡ್ಡ ಸಾಧನೆ ಮಾಡಿದರೆ ಅತ್ತ ತಾಯಿ ಕ್ಯಾನ್ಸರ್‌ನೊಂದಿಗೆ ಹೋರಾಡಿ ಗೆದ್ದಿದ್ದರು. ವಿನೇಶ್ ಈಗ ಕ್ರೀಡಾ ಅಂಗಳದಿಂದ ರಾಜಕೀಯ ಅಂಗಳಕ್ಕೆ ಇಳಿದಿದ್ದಾರೆ. ಹೋರಾಟ ಎಂಬುದು ಆಕೆಯ ಬದುಕಿನಲ್ಲಿ ನಿರಂತರ ಜೊತೆಗಾರ ಅನ್ನಿಸುತ್ತದೆ. ವಿನೇಶ್ ಗೆ ಇನ್ನೂ ಮುವತ್ತರ ಚಿಕ್ಕ ವಯಸ್ಸು. ಪರಿಸ್ಥಿತಿ ಆಕೆಯ ಹೋರಾಟದ ಅಂಗಳವನ್ನು ಬದಲಿಸಿದೆ ಅಷ್ಟೇ.
ಪ್ಯಾರಿಸ್ ಒಲಿಂಪಿಕ್ಸ್‌ನ ಫೈನಲ್ ಪಂದ್ಯಕ್ಕೆ ಆಕೆ ಅನರ್ಹವಾಗಿದ್ದನ್ನು ಈ ದೇಶದ ಒಂದು ವರ್ಗದ ಜನ ಸಂಭ್ರಮಿಸಿದ್ದಾರೆ ಎಂಬುದು ಈ ದೇಶದ ದುರಂತ. ಕುಸ್ತಿ ಫೆಡರೇಷನ್‌ನ ಅಧ್ಯಕ್ಷ ತರಬೇತಿ ನಿರತ ಎಳೆಯ ಕುಸ್ತಿ ಪಟುಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಆತನ ವಿರುದ್ಧ ದೂರು ನೀಡಿದ್ದು, ಪೊಲೀಸರು ತಮ್ಮ ಕರ್ತವ್ಯ ಮಾಡದೇ ಕಾಲಹರಣ ಮಾಡಿದ್ದನ್ನು ಪ್ರತಿಭಟಿಸಿದ್ದನ್ನು “ಅದು ಬಿಜೆಪಿ ಮತ್ತು ಮೋದಿಯವರ ವಿರುದ್ಧದ ಪ್ರತಿಭಟನೆ” ಎಂದುಕೊಂಡವರು ಬಿಜೆಪಿ ಬೆಂಬಲಿಗರು. ಇದೇ ಜನ ನಾಲ್ಕು ವರ್ಷಗಳ ಹಿಂದೆ ಮೋದಿ ಸರ್ಕಾರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಯಲ್ಲಿ ಪಂಜಾಬ್, ಹರಿಯಾಣ, ಉತ್ತರ ಪ್ರದೇಶದ ರೈತಾಪಿಗಳು ಪ್ರತಿಭಟನೆ ಕುಳಿತಾಗ ಅವರನ್ನೂ “ಖಲಿಸ್ತಾನಿಗಳು, ಕಾಂಗ್ರೆಸ್ ಏಜೆಂಟರು, ನಕಲಿ ರೈತರು, ದೇಶದ್ರೋಹಿಗಳು” ಎಂದು ಹೇಳುತ್ತಾ ತಾವು ತಿನ್ನುವ ಅನ್ನವ ಬೆಳೆಯುವ ಅನ್ನದಾತರನ್ನೇ ಅವಮಾನಿಸಿ ಗೇಲಿ ಮಾಡಲು ಹಿಂದೆ ಮುಂದೆ ನೋಡಿರಲಿಲ್ಲ.
ಮೋದಿ ಸರ್ಕಾರದ ರೈತವಿರೋಧಿ ನೀತಿಯನ್ನು ವಿರೋಧಿಸಿದ್ದಕ್ಕೆ ಹೋರಾಟನಿರತ ರೈತರನ್ನು ಕೆಲ ರೈತ ಮಕ್ಕಳೇ ಗೇಲಿ ಮಾಡಿದರು. ಆಗ ಈ ಹೋರಾಟಕ್ಕೆ ದೇಶದ ಪ್ರಗತಿಪರ ಸಂಘಟನೆಗಳು, ಕಾಂಗ್ರೆಸ್, ಸಮಾಜವಾದಿ ಪಾರ್ಟಿ, ಅಕಾಲಿದಳ, ಎಪಿಪಿ ಸೇರಿದಂತೆ ಎಲ್ಲ ಪಕ್ಷಗಳೂ ಬೆಂಬಲಿಸಿದ್ದವು. ಕುಸ್ತಿಪಟುಗಳ ಹೋರಾಟವನ್ನೂ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳನ್ನು ಹೊರತುಪಡಿಸಿ ವಿಪಕ್ಷಗಳು ನೇರವಾಗಿಯೇ ಬೆಂಬಲಿಸಿದ್ದವು. ವಿನೇಶ್ ಫೋಗಟ್ ತಂಡ ಒಬ್ಬ ಅತ್ಯಾಚಾರಿಯ ವಿರುದ್ಧ ಕಾನೂನು ಹೋರಾಟ ಮಾಡಿದ್ದನ್ನೂ ಟೀಕಿಸಿ, ಆಕೆಯನ್ನೇ ಅನುಮಾನಿಸಿದ ಬಿಜೆಪಿಗೆ ಈಗ ವಿನೇಶ್ ಫೋಗಟ್ ಮತ್ತು ಬಜರಂಗ ಪೂನಿಯಾ ಹರಿಯಾಣ ಚುನಾವಣೆಯ ಕಣದಲ್ಲಿ ಎದುರಾಗಲಿದ್ದಾರೆ. ನಿಜವಾದ ಆಟ ಈಗ ಶುರುವಾಗಲಿದೆ. ಸ್ಪರ್ಧೆ ಎಂದ ಮೇಲೆ ಅದು ಕಠಿಣವೇ. ವಿನೇಶ್ ಸುಲಭಕ್ಕೆ ಸೋಲೊಪ್ಪದ ಛಲಗಾತಿ ಎಂಬುದನ್ನು ಈಗಾಗಲೇ ತೋರಿಸಿಕೊಟ್ಟಿದ್ದಾರೆ.

ಕಾಂಗ್ರೆಸ್ ಸೇರ್ಪಡೆ ಬಳಿಕ ಮಾತನಾಡಿದ ವಿನೇಶ್ ಫೋಗಟ್, ”ಕಷ್ಟದ ಸಮಯದಲ್ಲಿ ಯಾರು ಜತೆಗಿರುತ್ತಾರೆ ಎಂಬುದು ಬ್ರಿಜ್ ಭೂಷಣ್ ವಿರುದ್ಧದ ಹೋರಾಟದ ವೇಳೆ ಕಂಡುಕೊಂಡೆ. ಅಂದು ನಮ್ಮನ್ನು ಬೀದಿಯಲ್ಲಿ ಎಳೆದಾಡಿದಾಗ ಬಿಜೆಪಿ ಹೊರತುಪಡಿಸಿ ಉಳಿದೆಲ್ಲಾ ಪಕ್ಷಗಳು ನಮ್ಮ ಜತೆಗಿದ್ದವು. ನಮಗೆ ಬೆಂಬಲ ನೀಡಿದ ಕಾಂಗ್ರೆಸ್‌ಗೆ ಧನ್ಯವಾದ ಹೇಳ ಬಯಸುವೆ. ನಾವು ಬಹಳ ನೋವು ಅನುಭವಿಸಿದ್ದೇವೆ. ನೋವುಂಡವರ ಪರ ನಾವಿರುತ್ತೇವೆ. ನನ್ನ ದೇಶದ ಜನರ ಸೇವೆ ಮಾಡಲು ನನಗೆ ಅವಕಾಶ ಸಿಕ್ಕಿದೆ. ಇದು ಹೊಸ ಇನಿಂಗ್ಸ್. ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ನಮ್ಮ ಹೋರಾಟ ಮುಂದುವರಿಯಲಿದೆ” ಎಂದು ಹೇಳಿದ್ದರು.
ವಿನೇಶ್ ಫೋಗಟ್, ಸಾಕ್ಷಿ ಮಲ್ಲಿಕ್ ಮುನ್ನಡೆಸಿದ ಹೋರಾಟಕ್ಕೆ ಅಂದು ರೈತ ಸಂಘಟನೆಯ ಮುಖಂಡರು ಬೆಂಬಲ ನೀಡಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಸಂಸದ ಬ್ರಿಜ್ ಭೂಷಣ್ ಬಂಧನಕ್ಕೆ ಒತ್ತಾಯಿಸಿ ಪದಕಗಳನ್ನು ಗಂಗೆಗೆ ಸಮರ್ಪಿಸಲು ಹೊರಟ ಕುಸ್ತಿಪಟುಗಳನ್ನು ತಡೆದು ಮನವೊಲಿಸಿದವರು ರೈತ ಮುಖಂಡರು. ವಿನೇಶ್ ಪ್ಯಾರಿಸ್‌ನಿಂದ ವಾಪಸ್ ಬರುತ್ತಿದ್ದಂತೆ ರೈತ ಸಂಘಟನೆಗಳು ಪಂಜಾಬ್ ಮತ್ತು ಹರ್ಯಾಣದ ನಡುವಿನ ಶಂಭು ಗಡಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲ ಬೆಳೆಗಳಿಗೂ ಕನಿಷ್ಠ ಬೆಂಬಲ ಬೆಲೆಯ (ಎಂಎಸ್‌ಪಿ) ಕಾನೂನಿನ ಖಾತರಿ ನೀಡುವಂತೆ ಹಾಗೂ ಇತರೆ ರೈತಾಪಿ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಏಳು ತಿಂಗಳುಗಳಿಂದ (ಫೆಬ್ರವರಿ 13ರಿಂದ) ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಆಗಸ್ಟ್ ೩೦ರಂದು 200 ದಿನ ತುಂಬಿದ ಸಂದರ್ಭದಲ್ಲಿ ಶಂಭು ಗಡಿಗೆ ತೆರಳಿದ ವಿನೇಶ್, “ನಿಮ್ಮ ಮನೆ ಮಗಳು ನಿಮ್ಮ ಜತೆಗಿದ್ದಾಳೆ” ಎಂದು ಸಾರಿದ್ದರು.

ಶುಕ್ರವಾರ ರೈಲ್ವೆ ಉದ್ಯೋಗಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಸೇರಿದ ತಕ್ಷಣ ಹರಿಯಾಣ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಜುಲಾನಾ ವಿಧಾನಸಭೆ ಕ್ಷೇತ್ರದಿಂದ ವಿನೇಶ್ ಫೋಗಟ್ಗೆ ಟಿಕೆಟ್ ನೀಡಲಾಗಿದೆ. ವಿನೇಶ್ ಫೋಗಟ್ ಮತ್ತು ಬಜರಂಗ್ ಪೂನಿಯಾ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಬುಧವಾರವಷ್ಟೇ ಭೇಟಿ ಮಾಡಿದ್ದರು. ಕುಸ್ತಿ ಫೆಡರೇಷನ್ ವಿರುದ್ಧದ ಹೋರಾಟವೀಗ ಅವರನ್ನು ಕ್ರೀಡಾ ಅಂಗಳದಿಂದ ರಾಜಕೀಯದಂಗಳಕ್ಕೆ ತಂದು ಬಿಟ್ಟಿದೆ.
ವಿನೇಶ್ ಎಂಬ ದಿಟ್ಟ ಹೋರಾಟಗಾರ್ತಿಯೇ ಭಾರತಾಂಬೆಯ ಎದೆ ಮೇಲಿನ ಒಂದು ಬಂಗಾರದ ಪದಕ. ಮೋದಿ ಭಕ್ತಗಣ ಮತ್ತು ಬ್ರಿಜಭೂಷಣ ಶರಣ ಸಿಂಗ್ ಕಿರಾತಕ ಶಕ್ತಿಗಳು ವಿನೇಶ್ ರನ್ನು ಚುನಾವಣೆಯಲ್ಲಿ ಸೋಲಿಸಲು ಎಲ್ಲ ಕುತಂತ್ರಗಳ ನಡೆಸಿಯೇ ತೀರುವರು. ಆದರೆ ಪ್ರವಾಹಕ್ಕೆ ಎದುರಾಗಿ ಈಜಿ ಗೆಲ್ಲುವುದು ವಿನೇಶ್ ಗೆ ಹೊಸತಲ್ಲ. ಮಿಗಿಲಾಗಿ ಹರಿಯಾಣದ ಜನ ತಮ್ಮಮನೆ ಮಗಳನ್ನು ಸುಲಭಕ್ಕೆ ಬಿಟ್ಟು ಕೊಡುವುದಿಲ್ಲ.
ಕುಸ್ತಿಯಂಗಳದ ಗೆಲುವಿನ ಹುಡುಗಿ…
2013ರಿಂದಲೂ ಅಂತರರಾಷ್ಟ್ರೀಯ ಸ್ಪರ್ಧೆಗಳಲ್ಲಿ ವಿನೇಶ್ ಸತತವಾಗಿ ಗೆಲುವು ದಾಖಲಿಸಿದ್ದಾರೆ. ಏಷ್ಯಾ ಕುಸ್ತಿ ಚಾಂಪಿಯನ್‍ಶಿಪ್, ಕಾಮನ್‍ವೆಲ್ತ್ ಗೇಮ್ಸ್, ಏಷ್ಯನ್ ಗೇಮ್ಸ್, ವಿಶ್ವ ಚಾಂಪಿಯನ್‍ಶಿಪ್ ಮತ್ತು ಏಷ್ಯನ್ ಚಾಂಪಿಯನ್‍ಶಿಪ್‍ಗಳಲ್ಲಿ ಒಟ್ಟು 5 ಚಿನ್ನ, 2 ಬೆಳ್ಳಿ, 7 ಕಂಚಿನ ಪದಕಗಳನ್ನು ಗೆದ್ದಿದ್ದಾರೆ. 2018ರಲ್ಲಿ ಕಾಮನ್‍ವೆಲ್ತ್ ಮತ್ತು ಏಷ್ಯನ್ ಗೇಮ್ಸ್ ಎರಡರಲ್ಲಿಯೂ ಚಿನ್ನವನ್ನು ಗಳಿಸಿದ ಮೊದಲ ಭಾರತೀಯ ಮಹಿಳೆಯಾಗಿದ್ದಾರೆ. ಅರ್ಜುನ ಪ್ರಶಸ್ತಿ, ಕ್ರೀಡಾ ಪ್ರಾಧಿಕಾರದ ಪದ್ಮಶ್ರಿ ಮತ್ತು ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿಗಳನ್ನು ಪಡೆದ ಇವರು, 2019ರ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಮೊದಲ ಭಾರತೀಯ ಮಹಿಳೆ ಹಾಗೂ 2022ರ ವರ್ಷದ ಬಿಬಿಸಿ ಭಾರತೀಯ ಮಹಿಳಾ ಕ್ರೀಡಾಪಟು.
ಕುಸ್ತಿ ಅಂಗಳದಲ್ಲಿ ಸತತ ಒಂದೊಂದೇ ಗೆಲುವಿನ ಮೆಟ್ಟಿಲೇರಿದ ಚರ್ಕಿ ದಾದ್ರಿಯ ಛಲಗಾರ್ತಿಗೆ ಒಲಿಂಪಿಕ್‌ನಲ್ಲಿ ಪದಕ ಗಳಿಸಿ ನಿವೃತ್ತರಾಗಬೇಕು ಎಂಬ ಗುರಿಯಿತ್ತು. ಆದರೆ, ಪದಕದ ಕನಸು ಹುಸಿಯಾಗಿದೆ. ಮುಂದಿನ ಒಲಿಂಪಿಕ್‌ಗೆ ವಿನೇಶ್ ಸ್ಪರ್ಧಿಸುತ್ತಾರಾ ಗೊತ್ತಿಲ್ಲ. ಆದರೆ ಹೊಸ ಹೋರಾಟದ ಹಾದಿ ಅವರನ್ನು ಕೈಬೀಸಿ ಕರೆದಿದೆ.

ವಿನೇಶ್ ಫೋಗಟ್ ಒಲಿಂಪಿಕ್ಸ್ ನಲ್ಲಿ ಅನರ್ಹಗೊಂಡಾಗ ಶೂಟಿಂಗ್ ಚಾಂಪಿಯನ್ ಅಭಿನವ್ ಬಿಂದ್ರಾ ನೀಡಿದ ಸಂದೇಶದಲ್ಲಿ, “ನೀವೊಬ್ಬ ನಿಜವಾದ ಹೋರಾಟಗಾರ್ತಿ, ಅದು ಅಖಾಡದಲ್ಲಿರಲಿ, ಅದರಾಚೆಗೇ ಇರಲಿ. ಎಲ್ಲಾ ಗೆಲುವು ಒಂದೇ ರೀತಿ ಇರುವುದಿಲ್ಲ. ಕೆಲವು ಕಪಾಟಿನಲ್ಲಿರುವ ಮಿನುಗುವ ಸ್ಮರಣೆಕೆಯಾಗಿ ಕೊನೆಯಾಗುತ್ತದೆ. ಆದಕ್ಕಿಂತ ಹೆಚ್ಚು ಮುಖ್ಯವಾದುದು ಏನೆಂದರೆ, ನಾವು ನಮ್ಮ ಮಕ್ಕಳಿಗೆ ಹೇಳುವ ಕಥೆಗಳಿಗೆ ದಾರಿ ಮಾಡಿಕೊಡುವುದು. ನಿಮ್ಮನ್ನು ಈ ದೇಶದ ಪ್ರತಿಯೊಂದು ಮಗುವೂ ಚಾಂಪಿಯನ್ ಆಗಿ ನೆನಪಿನಲ್ಲಿಟ್ಟುಕೊಳ್ಳುತ್ತದೆ. ನೀವು ತೋರಿದ ಅದೇ ಧೈರ್ಯವನ್ನು ಪ್ರತಿ ಮಗುವೂ ಬದುಕಿನಲ್ಲಿ ಅಳವಡಿಕೊಳ್ಳಲು ಬಯಸುತ್ತದೆ” ಎಂದು ಹೇಳಿದ್ದರು.
ಇದನ್ನೂ ಓದಿ ಈ ದಿನ ಸಂಪಾದಕೀಯ| ವಿನೇಶ್ ಫೋಗಟ್ ಪಕ್ಷ ರಾಜಕಾರಣ ಮಾಡಿದರೆ ಆಕೆ ಎತ್ತಿದ ಪ್ರಶ್ನೆಗಳು ಸುಳ್ಳಾಗವು
ವಿನೇಶ್ ಹರಿಯಾಣದ ಚುನಾವಣೆಗೆ ತಿಂಗಳಿರುವಾಗ ಕಾಂಗ್ರೆಸ್ ಸೇರಿದ್ದಾರೆ. ರಾಜಕಾರಣ ಅವರಿಗೆ ಹೊಸದು. ದುಷ್ಟಕೂಟ ಅವರನ್ನು ಸೋಲಿಸಲು ಹಗಲೂ ರಾತ್ರಿ ಶ್ರಮಿಸಬಹುದು. ಅವರು ಗೆಲ್ಲಬಹುದು ಅಥವಾ ಸೋಲಲೂಬಹುದು. ಬಲಿಷ್ಠರನ್ನು ಎದುರು ಹಾಕಿಕೊಂಡು ಹೋರಾಡುವುದೆಂದರೆ ಅದಕ್ಕೆ ಗುಂಡಿಗೆ ಗಟ್ಟಿ ಇರಬೇಕು. ಬಲಿಷ್ಠ ಗೂಂಡಾ, ಬಿಜೆಪಿ ಮುಖಂಡ ಬ್ರಿಜ್‌ಭೂಷಣನ ಅಹಂಕಾರ ಮುರಿದು ತಾನು ಗಟ್ಟಿಗಿತ್ತಿ ಎಂಬುದನ್ನು ವಿನೇಶ್ ಈಗಾಗಲೇ ಸಾಬೀತುಪಡಿಸಿಯಾಗಿದೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.