ಶಂಕಿತ ಬುಡಕಟ್ಟು ಉಗ್ರರು ಶುಕ್ರವಾರ ಮಣಿಪುರದ ಬಿಷ್ಣುಪುರ್ ಜಿಲ್ಲೆಯಲ್ಲಿ ಮಣಿಪುರದ ಮೊದಲ ಮುಖ್ಯಮಂತ್ರಿ ಮೈರೆಂಬಮ್ ಕೊಯಿರೆಂಗ್ ಮನೆಯನ್ನು ಗುರಿಯಾಗಿಸಿ ರಾಕೆಟ್ ದಾಳಿ ನಡೆಸಿದ್ದು, ಮೈತೇಯಿ ಸಮುದಾಯದ ಉನ್ನತ ಸಂಸ್ಥೆಯಾದ ಮಣಿಪುರ ಸಮಗ್ರತೆಯ ಸಮನ್ವಯ ಸಮಿತಿ (ಕೊಕೊಮಿ) ‘ಸಾರ್ವಜನಿಕ ತುರ್ತು ಪರಿಸ್ಥಿತಿ’ ಘೋಷಿಸಿದೆ.
ಈ ರಾಕೆಟ್ ದಾಳಿಯಿಂದಾಗಿ 70 ವರ್ಷದ ಅರ್ಚಕ ಆರ್ಕೆ ರಾಬೆ ಮೃತಪಟ್ಟರೆ ಅಪ್ರಾಪ್ತ ಬಾಲಕಿ ಸೇರಿದಂತೆ ಐವರು ಗಾಯಗೊಂಡಿದ್ದಾರೆ.
1944ರಲ್ಲಿ ಲೆಫ್ಟಿನೆಂಟ್ ಕರ್ನಲ್ ಶೌಕತ್ ಅಲಿ ಅವರು ಭಾರತದಲ್ಲಿ ಮೊದಲ ಬಾರಿಗೆ ತ್ರಿವರ್ಣ ಧ್ವಜವನ್ನು ಹಾರಿಸಿದ ನೆಲದಲ್ಲಿರುವ ಭಾರತೀಯ ರಾಷ್ಟ್ರೀಯ ಸೇನೆಯ (ಐಎನ್ಎ) ಪ್ರಧಾನ ಕಚೇರಿಯಿಂದ ಕೇವಲ 100 ಮೀಟರ್ ದೂರದಲ್ಲಿ ಮಾಜಿ ಸಿಎಂ ಅವರ ಮನೆಯಿದೆ.
ಇದನ್ನು ಓದಿದ್ದೀರಾ? ಮಣಿಪುರ ಹಿಂಸಾಚಾರ | ಗುಂಡಿನ ದಾಳಿಗೆ ಐವರು ಬಲಿ
ಮೊಯಿರಾಂಗ್ ಫೀವಾಂಗ್ಬಾಮ್ ಲೈಕೈಯ ಅರ್ಚಕ ಆರ್ಕೆ ರಾಬೆ ಅವರು ಮಾಜಿ ಸಿಎಂ ನಿವಾಸದಲ್ಲಿ ಧಾರ್ಮಿಕ ಸಮಾರಂಭಕ್ಕೆ ತಯಾರಿ ನಡೆಸುತ್ತಿದ್ದಾಗ ನಡೆದ ರಾಕೆಟ್ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಇನ್ನು ಶೆರಿನಾ ಮೈರೆನ್ಬಾಮ್ (13), ಕೊಂಜೆನ್ಬಾಮ್ ಜುಗೆಂಡ್ರೊ (51), ರಾಜೀವ್ ಅಲಿಯಾಸ್ ಬೊಬೊ (58), ಸಲಾಮ್ ನಾನೋ (40) ಮತ್ತು ನ್ಗಾಂಗೊಮ್ ಇಬೋಬಿ (62) ರಾಕೆಟ್ ದಾಳಿಯಿಂದ ಗಾಯಗೊಂಡಿದ್ದಾರೆ.
ಕಳೆದ ವರ್ಷ ಮೇ ತಿಂಗಳಲ್ಲಿ ಮಣಿಪುರದಲ್ಲಿ ಹಿಂಸಾಚಾರ ಆರಂಭವಾಗಿದ್ದು, ಈವರೆಗೆ ಹಿಂಸಾಚಾರ ನಿಂತಿಲ್ಲ. ಈಗಾಗಲೇ 200ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ನಿನ್ನೆ ತಡರಾತ್ರಿಯಷ್ಟೆ ಗುಂಡಿನ ದಾಳಿಯಿಂದ ಐವರು ಸಾವನ್ನಪ್ಪಿದ್ದಾರೆ.
