ಕೊಪ್ಪಳ ಜಿಲ್ಲೆಯ ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ಡೆಂಘೀ ರೋಗ ದೃಢಪಟ್ಟ ಬಳಿಕ 6 ನೇ ತರಗತಿ ಬಾಲಕಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಬಾಲಕಿ ಸುಫಿಯಾ (12) ಡೆಂಘೀಗೆ ಬಲಿಯಾದ ವಿದ್ಯಾರ್ಥಿನಿ.
ಸುಫಿಯಾ ಶರಣ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 6 ನೇ ತರಗತಿ ವಿದ್ಯಾರ್ಥಿಯಾಗಿದ್ದಳು. ಶನಿವಾರ ಶಾಲೆಗೆ ಬಂದಾಗ ಆಕೆ ಜ್ವರದಿಂದ ಬಳಲುತ್ತಿದ್ದಳು. ಶಿಕ್ಷಕರು ಅದನ್ನು ಗಮನಿಸಿ ಪಾಲಕರಿಗೆ ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ಡೆಂಘೀ ಹಾವಳಿ | ರಾಜ್ಯದಲ್ಲಿ ಈ ವರ್ಷ ಗರಿಷ್ಠ ಪ್ರಕರಣ ದಾಖಲು
ಸುಫಿಯಾಳನ್ನು ಸಿಂಧನೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಅಲ್ಲಿನ ವೈದ್ಯರು ದೇಹದಲ್ಲಿ ರಕ್ತದ ಕಣಗಳು ಕಡಿಮೆಯಾಗಿದೆ ಎಂದು ಹೇಳಿ, ಹೆಚ್ಚಿನ ಚಿಕಿತ್ಸೆಗಾಗಿ ಬಳ್ಳಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾಳೆ ಎಂದು ವರದಿಯಾಗಿದೆ.
ಇತ್ತೀಚಿಗೆ ಸಿದ್ದಾಪುರ ಗ್ರಾಮದಲ್ಲಿ ಡೆಂಗ್ಯೂ ಜ್ವರದಿಂದಾಗಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಕಾಲಕ್ಕೆ ಬರುವುದಿಲ್ಲ. ಅಧಿಕಾರಿಗಳು ಯಾರೂ ಕೇಳುವವವರಿಲ್ಲ. ಸ್ಥಳೀಯವಾಗಿ ಮೆಡಿಕಲ್‌ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಹೆಸರು ಹೇಳಲು ಇಚ್ಛಿಸದ ವ್ಯಕ್ತಿಯೊಬ್ಬರು ಹೇಳಿದರು.
