ಲೋಕೊಪಯೊಗಿ ಸಚಿವ ಸತೀಶ್ ಜಾರಕಿಹೊಳಿ ಮುಖ್ಯಮಂತ್ರಿ ಹುದ್ದೆ ಕುರಿತು ಹೇಳಿಕೆ ನೀಡಿದ್ದು, “ಸಿಎಂ ಆಗುವ ಸಂಬಂಧವಾಗಿ ನಾವು ಅಗತ್ಯ ತಯಾರಿ ಮಾಡುತ್ತಿದ್ದೇವೆ. ಆದರೆ ಅದು ಈಗಲ್ಲ, ಬದಲಿಗೆ 2028ರ ವಿಧಾನಸಭಾ ಚುನಾವಣೆ ನಂತರ” ಎಂದಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.
ಬೆಳಗಾವಿಯಲ್ಲಿ ಸತೀಶ ಜಾರಕಿಹೊಳಿಯವರು ಮಾಧ್ಯಮದವರ ಜತೆಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಮುಡಾ ಪ್ರಕರಣದ ಇಕ್ಕಟ್ಟಿಗೆ ಸಿಲುಕಿದ ನಂತರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಸಿಎಂ ಬದಲಾವಣೆ ಹಾಗೂ ಯಾರು ಸಾಲಿನಲ್ಲಿದ್ದಾರೆ ಎಂಬ ಚರ್ಚೆ ಮುನ್ನೆಲೆ ಬರುತ್ತಿರುವುದರಿಂದ ಪ್ರತಿಕ್ರಿಯೆ ನೀಡಿದ ಅವರು, “ಸಿಎಂ ಆಗಿ ಸಿದ್ದರಾಮಯ್ಯ ಅವರೇ ಮುಂದುವರಿಯುತ್ತಾರೆ” ಎಂದು ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಸಮಾಜ ಕಲ್ಯಾಣ ಇಲಾಖೆ ಕಚೇರಿಯಲ್ಲಿ ಹಾವು ಪ್ರತ್ಯಕ್ಷ; ವಸತಿ ನಿಲಯದ ಸುತ್ತ ಸ್ವಚ್ಛತೆಗೆ ಆಗ್ರಹ
“ಸದ್ಯ ನಾನು ಸಿಎಂ ಸ್ಥಾನದ ರೇಸ್‌ನಲ್ಲಿ ಇಲ್ಲ. ನಾನು ಸದ್ಯಕ್ಕೆ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಯೂ ಅಲ್ಲ. ಈಗಲೇ ಅನೇಕರು ಸಿಎಂ ಆಗುವ ಆಸೆ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಗುದ್ದಾಟ, ಕುಸ್ತಿ ಮಾಡುವ ಅವಶ್ಯಕತೆ ಇಲ್ಲ. ರಾಜ್ಯದಲ್ಲಿ ಅಂತಹ ಯಾವುದೇ ಸನ್ನಿವೇಶ ಇಲ್ಲವೇ ಇಲ್ಲ. ನಾನಂತೂ ಈಗಾಗಲೇ ಸಿದ್ದರಾಮಯ್ಯನವರಿಗೆ ಬೆಂಬಲ ನೀಡಿದ್ದೇನೆ. ಅಲ್ಲಿಯವರೆಗೆ ಅಭಿಮಾನಿಗಳು ಸಮಾಧಾನದಿಂದ ಕಾಯಬೇಕು” ಎಂದು ಹೇಳಿದ್ದಾರೆ.