ಯುವಜನರಲ್ಲಿ ಇತ್ತೀಚೆಗೆ ಹೆಚ್ಚುತ್ತಿರುವ ಸಲಿಂಗ ಕಾಮಾಸಕ್ತಿಯಿಂದ ಏಡ್ಸ್ ಉಲ್ಬಣಕ್ಕೆ ದಾರಿಮಾಡಿಕೊಡುತ್ತಿದೆ. ಏಡ್ಸ್ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಬೆನ್ನಲ್ಲೇ ಸಲಿಂಗ ಕಾಮದಿಂದ ಏಡ್ಸ್ ಹೆಚ್ಚುತ್ತಿರುವುದು ಆತಂಕಕಾರಿ ವಿಚಾರವಾಗಿದ್ದು, ಏಡ್ಸ್ ಕುರಿತ ಜಾಗೃತಿ ಮೂಡಿಸುವಲ್ಲಿ ಆರೋಗ್ಯ ಇಲಾಖೆ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸಲಿಂಗ ಕಾಮದಿಂದ ಇದುವರೆಗೆ 75 ಜನರಿಗೆ ಹೆಚ್.ಐ.ವಿ ದೃಢಪಟ್ಟಿದ್ದು, ಅಸುರಕ್ಷಿತ ಲೈಂಗಿಕತೆ, ಇತರೆ ಕಾರಣಗಳಿಂದ 2009 ರಿಂದ 2024ರವರೆಗೆ ಒಟ್ಟು 7144 ಏಡ್ಸ್ ಪ್ರಕರಣಗಳು ದಾಖಲಾಗಿವೆ.
ಆರೋಗ್ಯ ಇಲಾಖೆ ವಿಫಲ : ಕಳೆದ 15 ವರ್ಷಗಳಲ್ಲಿ 7144 ಏಡ್ಸ್ ಪ್ರಕರಣಗಳು ದಾಖಲಾಗಿದ್ದು, ಕಳೆದ 5 ವರ್ಷಗಳಲ್ಲಿ ಏರಿಳಿತ ಕಂಡಿವೆ. 2019ರಲ್ಲಿ 402, 2020ರಲ್ಲಿ 285, 2021ರಲ್ಲಿ 262, 2022ರಲ್ಲಿ 371, 2023ರಲ್ಲಿ 436 ರೋಗಿಗಳು ನೋಂದಣಿಯಾಗಿದ್ದಾರೆ. ವರ್ಷದಿಂದ ವರ್ಷಕ್ಕೆ ಏಡ್ಸ್ ರೋಗಿಗಳ ಸಂಖ್ಯೆಯಲ್ಲಿ ಏರಿಳಿತಗಳು ಆಗುತ್ತಿರುವುದು ಆರೋಗ್ಯ ಇಲಾಖೆಯ ವೈಫಲ್ಯತೆಗೆ ಹಿಡಿದ ಕೈಗನ್ನಡಿಯಾಗಿದೆ.
ಹಾಸ್ಟೆಲ್, ಪಿಜಿ, ರೂಮ್‌ಗಳೇ ಹಾಟ್‌ಸ್ಪಾಟ್‌ಗಳು : ಸಲಿಂಗ ಕಾಮಿಗಳ ಅಸುರಕ್ಷಿತ, ಅಸಹಜ ಲೈಂಗಿಕತೆಯಿಂದ ಏಡ್ಸ್ ರೋಗ ಹರಡುತ್ತಿದ್ದು, ಹಾಸ್ಟೆಲ್, ಪಿಜಿ, ರೂಮ್‌ಗಳು ಸಲಿಂಗ ಕಾಮಿಗಳ ಹಾಟ್ಸ್‌ಸ್ಪಾಟ್‌ಗಳಾಗಿವೆ. ವಿದ್ಯಾರ್ಜನೆ, ಉದ್ಯೋಗ, ಪ್ರವಾಸಕ್ಕೆಂದು ನಗರ ಪ್ರದೇಶಗಳತ್ತ ಬರುವ ಯುವಜನರು ಹಾಸ್ಟೆಲ್, ಪಿಜಿ, ರೂಮ್‌ಗಳಲ್ಲಿ ವಾಸಿಸುತ್ತಿದ್ದು, ಲೈಂಗಿಕ ಪ್ರಚೋದನೆ, ಆಕರ್ಷಣೆಯಿಂದ ಸಲಿಂಗ ಕಾಮದಲ್ಲಿ ತೊಡಗುತ್ತಿರುವುದು ವೈದ್ಯರ ಸಮಾಲೋಚನೆಯಿಂದ ತಿಳಿದುಬಂದಿದೆ. ಸಲಿಂಗ ಕಾಮಿಗಳು ಗೌಪ್ಯವಾಗಿ ಅಸುರಕ್ಷಿತ, ಅಸಹಜ ಲೈಂಗಿಕ ಕ್ರಿಯೆಯಲ್ಲಿ ತೊಡಗುತ್ತಿರುವುದು ಏಡ್ಸ್ ರೋಗಕ್ಕೆ ಕಾರಣವಾಗುತ್ತಿದೆ.
ನಗ್ನ ವಿಡಿಯೋಗಳಿಂದ ಪ್ರಚೋದನೆ : ಆತ್ಯಾಧುನಿಕತೆಯಿಂದ ಯುವಜನರಲ್ಲಿ ಮೊಬೈಲ್ ಬಳಕೆ ಹೆಚ್ಚಾಗಿದ್ದು, ನಗ್ನ ಚಿತ್ರ, ನಗ್ನ ವಿಡಿಯೋಗಳ ವೀಕ್ಷಣೆಯಿಂದ ಲೈಂಗಿಕ ಪ್ರಚೋದನೆಗೆ ದಾರಿಯಾಗುತ್ತಿದೆ. ಇದರಿಂದ ಸಲಿಂಗ ಕಾಮದ ಗೀಳಿಗೆ ಬಲಿಯಾಗುತ್ತಿದ್ದಾರೆ.
ಮೊದಲ ಸ್ಥಾನದಲ್ಲಿ ಚಿಂತಾಮಣಿ : ಚಿಕ್ಕಬಳ್ಳಾಪುರ ಜಿಲ್ಲಲೆಯ ಚಿಂತಾಮಣಿ ತಾಲೂಕಿನಲ್ಲಿ ಅತೀ ಹೆಚ್ಚು ಏಡ್ಸ್ ಪ್ರಕರಣಗಳು ದಾಖಲಾಗುತ್ತಿದ್ದು, ಚಿಂತಾಮಣಿ ತಾಲೂಕು ಮೊದಲ ಸ್ಥಾನದಲ್ಲಿದೆ. ಇನ್ನು ಬಾಗೇಪಲ್ಲಿ ತಾಲೂಕಿನಲ್ಲೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿದ್ದು, ಬಾಗೇಪಲ್ಲಿ ಎರಡನೇ ಸ್ಥಾನದಲ್ಲಿದೆ.
ಸಂತೆ, ಜಾತ್ರೆಗಳಲ್ಲಿ ಸಂಪರ್ಕ : ಹೆಚ್ಚು ಜನ ಸೇರುವ ಮಾರುಕಟ್ಟೆ, ಸಂತೆ, ಜಾತ್ರೆ, ಬಸ್ ಮತ್ತು ರೈಲುಗಳಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗುತ್ತಿದ್ದಾರೆ. ಈ ಮೂಲಕ ಒಬ್ಬರನ್ನೊಬ್ಬರು ಸಂಪರ್ಕ ಹೊಂದಲು ಸಾಧ್ಯವಾಗುತ್ತಿದೆ. ಇದರಿಂದಲೇ ಸಲಿಂಗ ಕಾಮ ಹೆಚ್ಚಿದೆ ಎನ್ನುತ್ತಾರೆ ಜಿಲ್ಲಾಸ್ಪತ್ರೆ ಎ.ಆರ್.ಟಿ ಕೇಂದ್ರದ ಸಮಾಲೋಚಕರಾದ ಹರೀಶ್.
ತಿಂಗಳಿಗೆ 40-45 ಜನರು ಬರುತ್ತಿದ್ದಾರೆ. ಬಹಳ ಮಂದಿ ಮುಚ್ಚಿಡುತ್ತಿದ್ದಾರೆ. ಏಡ್ಸ್ ಕುರಿತು ಸಭೆ ಮಾಡುವ ಮೂಲಕ, ನಾಟಕಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದೇವೆ. ಅಸುರಕ್ಷಿತ ಲೈಂಗಿಕತೆಯಿಂದ ಮತ್ತು ತಾಯಿಯಿಂದ ಮಗುವಿಗೆ ಏಡ್ಸ್ ಹರಡುತ್ತಿದೆ. ರಕ್ತ ಪರೀಕ್ಷೆ ಸಮಯದಲ್ಲಿ ಏಡ್ಸ್ ಪತ್ತೆಯಾಗುತ್ತಿದೆ. ಆದರೂ, ಕೆಲವರಿಗೆ ಚಟವಾಗಿ ಮಾರ್ಪಟ್ಟಿದೆ. ದುಡುಕುತನದಿಂದ ಇತ್ತೀಚೆಗೆ ಜಾಸ್ತಿಯಾಗುತ್ತಿದೆ. ಪ್ರಾಥಮಿಕ ಹಂತದಲ್ಲೇ ಚಿಕಿತ್ಸೆ ಪಡೆದರೆ ಉಳಿಸಿಕೊಳ್ಳಬಹುದು ಎನ್ನುತ್ತಾರೆ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆ ಎ.ಆರ್.ಟಿ ಸೆಂಟರ್‌ನ ವೈದ್ಯಾಧಿಕಾರಿ ಬೃಂದಾ ಎ.ಪಿ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ| ವಿನೇಶ್ ಫೋಗಟ್ ಪಕ್ಷ ರಾಜಕಾರಣ ಮಾಡಿದರೆ ಆಕೆ ಎತ್ತಿದ ಪ್ರಶ್ನೆಗಳು ಸುಳ್ಳಾಗವು
ಒಟ್ಟಾರೆಯಾಗಿ ಹೆಚ್ಚುತ್ತಿರುವ ಏಡ್ಸ್ ರೋಗಿಗಳ ಸಂಖ್ಯೆ ಕ್ಷೀಣಿಸಬೇಕಿದೆ. ಸಣ್ಣ ವಯಸ್ಸಿನಲ್ಲೇ ಏಡ್ಸ್‌ಗೆ ತುತ್ತಾಗಿ ಜೀವನ ಕಳೆದುಕೊಳ್ಳುತ್ತಿರುವ ಯುವಜನರಲ್ಲಿ ಹೆಚ್ಚಿನ ಜಾಗೃತಿ ಬೇಕಿದೆ. ಈ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಹೆಚ್ಚಿನ ಜನಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಬೇಕಿದೆ. ಜಡತ್ವ ಬಿಟ್ಟು ಯುವಜನರನ್ನು ಕಾಪಾಡುವತ್ತ ಯೋಚಿಸಬೇಕಿದೆ.

ಚಿಕ್ಕಬಳ್ಳಾಪುರ, ಕೋಲಾರ, ಬೆಂ.ಗ್ರಾಮಾಂತರ ಜಿಲ್ಲಾ ಸಂಯೋಜಕರು. ಪತ್ರಕರ್ತ, ಪರಿಸರ ಪ್ರೇಮಿ.
ಮೂಲತಃ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗಜ್ಜರಹಳ್ಳಿ ಗ್ರಾಮದವರು.