ಹಳೆ ದ್ವೇಷದ ಹಿನ್ನೆಲೆ ಇಟ್ಟುಕೊಂಡು ಗಣೇಶ ವಿಸರ್ಜನೆ ವೇಳೆ ಗಲಾಟೆ ನಡೆದಿದ್ದು, ಓರ್ವ ವ್ಯಕ್ತಿ ಕೊಲೆಯಾಗಿರುವ ಘಟನೆ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಮೂರು ಮೈಲ್ ಕ್ಯಾಂಪ್‌ನಲ್ಲಿ ನಡೆದಿದೆ.
ಮೂರು ಮೈಲ್ ಕ್ಯಾಂಪ್ ನಿವಾಸಿ ವೀರಬಸಪ್ಪ (60) ಮೃತಪಟ್ಟ ವ್ಯಕ್ತಿ. ಕೆಲವು ದಿನ ಹಿಂದೆ ಪರಶುರಾಮ ಎನ್ನುವ ಯುವಕ ಮದ್ಯಪಾನ ಮಾಡುತ್ತಿದ್ದುದನ್ನು ನೋಡಿದ ಮೃತ ವೀರಬಸಪ್ಪ ಬುದ್ದಿಮಾತು ಹೇಳಲು ಕುಟುಂಬದವರಿಗೆ ವಿಷಯ ತಿಳಿಸಿದ್ದರು. ಇದರಿಂದ ಪರಶುರಾಮ ಕೋಪಗೊಂಡು ಮೃತ ವೀರಬಸಪ್ಪನ ಮೇಲೆ ದ್ವೇಷ ಇಟ್ಟುಕೊಂಡಿದ್ದ ಎನ್ನಲಾಗಿದೆ.
ಶನಿವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನೆ ಸಮಯದಲ್ಲಿ ಮದ್ಯಪಾನದ ವಿಷಯ ಕುರಿತಾಗಿ ಪರಶುರಾಮ ಮತ್ತು ವೀರಬಸಪ್ಪನ ಕುಟುಂಬದವರ ನಡುವೆ ಪ್ರಾರಂಭವಾದ ಕಲಹ ವಿಕೋಪಕ್ಕೆ ತಿರುಗಿದೆ. ಪರಶುರಾಮ, ಮಹೇಶ ಮತ್ತು ಮಂಜು ಎನ್ನುವವರು ವೀರಬಸಪ್ಪನಿಗೆ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆಗೈದಿದ್ದಾರೆ.
ಇದನ್ನು ಓದಿದ್ದೀರಾ? ಕೊಪ್ಪಳ | ಗಣೇಶ ಚತುರ್ಥಿಯ ಮರುದಿನ ಮುಸ್ಲಿಮರ ಈ ಮನೆಯಲ್ಲಿ ಇಲಿ ಪೂಜೆ!
ಘಟನೆಯ ವಿಷಯ ತಿಳಿಯುತ್ತಲೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಿವುಕುಮಾರ, ಡಿವೈಎಸ್‌ಪಿ ಬಿ.ಎಸ್.ತಳವಾರ ಸ್ಥಳಕ್ಕೆ ಭೇಟಿ ನೀಡಿದರು.
ಘಟನೆ ಕುರಿತು ಮಾಹಿತಿ ಪಡೆದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಸಿಂಧನೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
