ಇಂದು ನಾಲ್ಕು ಹೈಪ್ರೊಫೈಲ್ ಕೇಸುಗಳ ವಿಚಾರಣೆ ಹೈಕೋರ್ಟ್ ಸೇರಿದಂತೆ ವಿವಿಧ ಕೋರ್ಟ್‌ಗಳಲ್ಲಿ ನಡೆಯಲಿದೆ. ಸಿ ಎಂ ಸಿದ್ದರಾಮಯ್ಯ ಮತ್ತು ಬಿ ಎಸ್ ಯಡಿಯೂರಪ್ಪ ಅವರ ಅರ್ಜಿಗಳ ವಿಚಾರಣೆ ಹೈಕೋರ್ಟ್ ನಡೆಯಲಿದೆ. ಚಿತ್ರದುರ್ಗದಲ್ಲಿ ಮುರುಘಾ ಮಠದ ಶಿವಮೂರ್ತಿ ಸ್ವಾಮಿ ವಿಚಾರಣೆಗೆ ಕೋರ್ಟ್‌ಗೆ ಹಾಜರಾಗಿದ್ದಾರೆ. ದರ್ಶನ್ ವಿಡಿಯೊ ಕಾನ್ಫರೆನ್ಸ್ ಮೂಲಕ ವಿಚಾರಣೆ ಎದುರಿಸಲಿದ್ದಾರೆ.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಖಾಸಗಿ ದೂರು ಆಧರಿಸಿ ರಾಜ್ಯಪಾಲರು ತನಿಖೆಗೆ ನೀಡಿದ ಅನುಮತಿಯನ್ನು ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯ ಮೂರನೇ ಹಂತದ ವಿಚಾರಣೆ ಇಂದು ನಡೆಯಲಿದೆ. ಸಿಎಂ ಪರ ಸರ್ಕಾರದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಇಂದು ಮಧ್ಯಾಹ್ನ 3.30ಕ್ಕೆ ವಾದ ಮಂಡಿಸಲಿದ್ದಾರೆ.
ಮುಡಾ ಪ್ರಕರಣ ಸಂಬಂಧದಲ್ಲಿ ಆರ್‌ಟಿಐ ಕಾರ್ಯಕರ್ತರ ದೂರು ಆಧರಿಸಿ ಸಿಎಂ ವಿರುದ್ಧದ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಆಗಸ್ಟ್ 17 ರಂದು ಅನುಮತಿ ನೀಡಿದ್ದರು. ಇದರ ಬೆನ್ನಿಗೇ ಈ ಆದೇಶ ಪ್ರಶ್ನಿಸಿ ಸಿಎಂ ಪರ ವಕೀಲರು ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ಕುರಿತ ವಿಚಾರಣೆ ಕಳೆದ ಆಗಸ್ಟ್ 19 ರಂದು ಹೈಕೋರ್ಟ್‌ನಲ್ಲಿ ಶುರುವಾಗಿತ್ತು. ನ್ಯಾಯಮೂರ್ತಿ ನಾಗಪ್ರಸನ್ನ ಪೀಠದ ಮುಂದೆ ಸಿಎಂ ಪರವಾಗಿ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ವಾದಿಸಿದ್ದರು. ರಾಜ್ಯಪಾಲರ ಆದೇಶ ರದ್ದುಪಡಿಸಬೇಕು ಎನ್ನುವುದು ಅವರ ವಾದವಾಗಿತ್ತು. ಈ ವಾದ ಆಲಿಸಿದ ನ್ಯಾಯಾಲಯ ವಿಚಾರಣೆಯನ್ನು ಆಗಸ್ಟ್ 29ಕ್ಕೆ ಮುಂದೂಡುವುದರ ಜತೆಗೆ, ”ಈ ವಿಚಾರದಲ್ಲಿ ಬಲವಂತದ ಕ್ರಮ ಜರುಗಿಸಬಾರದು,” ಎಂದು ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ಗೆ ಸೂಚಿಸಿತ್ತು.
ಆಗಸ್ಟ್ 29ರಂದು ವಿಚಾರಣೆ ನಡೆಸಿದ್ದ ಪೀಠ ಆಗಸ್ಟ್ 31ಕ್ಕೆ ಮುಂದೂಡಿತ್ತು. ಅಂದು ಇಡೀ ದಿನ ದೂರುದಾರರ ಪರ ವಕೀಲರು ವಾದ ಮಂಡಿಸಿದ್ದರು. ನಂತರ ಸೆಪ್ಟಂಬರ್ 9ರಂದು ಸಿಎಂ ಪರ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಮತ್ತು ಸೆ. 12 ರಂದು ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಅಭಿಷೇಕ್ ಮನು ಸಿಂಗ್ವಿ ವಾದ ಮಂಡನೆಗೆ ಅವಕಾಶ ನೀಡಿ ವಿಚಾರಣೆ ಮುಂದೂಡಿದ್ದರು. ಇಂದು ವಿಚಾರಣೆ ನಡೆಯಲಿದೆ.
ಬಿಎಸ್‌ವೈ ಪೋಕ್ಸೊ ಪ್ರಕರಣ ರದ್ದು ಕೋರಿದ್ದ ಅರ್ಜಿ ವಿಚಾರಣೆ
ಬಿಜೆಪಿಯ ಹಿರಿಯ ಮುಖಂಡ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ವಿರುದ್ಧ ಕಳೆದ ಮಾರ್ಚ್‌ನಲ್ಲಿ ದಾಖಲಾದ ಪೋಕ್ಸೊ ಪ್ರಕರಣವನ್ನು ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ 2.30ಕ್ಕೆ ವಿಚಾರಣೆಗೆ ಬರಲಿದೆ. ಯಡಿಯೂರಪ್ಪ ಅವರ ಮನೆಗೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ ಮಹಿಳೆ, ತನ್ನ ಮಗಳೆಗೆ ಲೈಂಗಿಕ ದೌರ್ಜನ್ಯ ನಡೆದಿದೆ. ಪೊಲೀಸರು ದೂರು ದಾಖಲಿಸಿಕೊಳ್ಳುತ್ತಿಲ್ಲ, ಈ ಕಾರಣದಿಂದ ಸಹಾಯ ಮಾಡಬೇಕು ಎಂದು ನಿವೇದಿಸಿಕೊಂಡಿದ್ದರು. ಯುಡಿಯೂರಪ್ಪ ಅವರು ಬಾಲಕಿಯನ್ನು ಕೋಣೆಗೆ ಕರೆದೊಯ್ದು ಬಾಗಿಲು ಹಾಕಿಕೊಂಡಿದ್ದರು. ಕೆಲ ನಿಮಿಷಗಳ ನಂತರ ಬಾಗಿಲು ತೆಗೆದು ಹೊರ ಬಂದ ಬಾಲಕಿ ತಾಯಿಯ ಬಳಿ ಯಡಿಯೂರಪ್ಪ ಅವರು ತನ್ನ ಟೀಶರ್ಟಿನ ಒಳಗೆ ಕೈ ಹಾಕಿ ಎದೆ ಭಾಗ ಮುಟ್ಟಿರುವುದಾಗಿ ಹೇಳಿಕೊಂಡಿದ್ದಳು. ಇದನ್ನು ಯಡಿಯೂರಪ್ಪ ಅವರ ಬಳಿ ಮಹಿಳೆ ಪ್ರಶ್ನಿಸುತ್ತಿರುವ ವಿಡಿಯೊ ಮಾರ್ಚ್‌ನಲ್ಲಿ ವೈರಲ್ ಆಗಿತ್ತು. ನಂತರ ಪೋಕ್ಸೋ ಪ್ರಕರಣ ದಾಖಲಾಗಿತ್ತು. ಪ್ರಕರಣವನ್ನು ಸಿಐಡಿಗೆ ವಹಿಸಲಾಗಿತ್ತು. ಅದಾಗಿ ಮೂರು ತಿಂಗಳಲ್ಲಿ ಪೊಲೀಸರು ವಿಚಾರಣೆ ಮುಂದುವರಿಸಿರಲಿಲ್ಲ.
ಲೋಕಸಭಾ ಚುನಾವಣೆ ಮುಗಿದ ನಂತರ ಜೂನ್‌ನಲ್ಲಿ ದೂರುದಾರ ಮಹಿಳೆ ನಿಧನರಾಗಿದ್ದು, ಆನಂತರ ಬಾಲಕಿಯ ಸೋದರ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಯಡಿಯೂರಪ್ಪ ಅವರ ವಿರುದ್ಧ ಬಂಧನ ವಾರಂಟ್ ಜಾರಿಯಾಗಿತ್ತು. ಮೂರು ದಿನ ದೆಹಲಿಯಲ್ಲಿ ಬೀಡುಬಿಟ್ಟಿದ್ದ ಯಡಿಯೂರಪ್ಪ ಅವರು ನಿರೀಕ್ಷಣಾ ಜಾಮೀನು ಸಿಕ್ಕ ನಂತರ ಸಿಐಡಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದರು. ಪ್ರಕರಣದ ಸಂಬಂಧ ಮಹಿಳೆ ಸಲ್ಲಿಸಿದ್ದ ವಿಡಿಯೋ ಮತ್ತು ಅದರಲ್ಲಿರುವ ಆಡಿಯೋ ಯಡಿಯೂರಪ್ಪ ಅವರದ್ದೇ ಎಂದು ಸಾಬೀತಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಯಡಿಯೂರಪ್ಪ ಬಂಧನಕ್ಕಿದ್ದ ತಡೆಯನ್ನು ತೆರವುಗೊಳಿಸುವಂತೆ ಸರ್ಕಾರ ಅರ್ಜಿ ಸಲ್ಲಿಸಿತ್ತು. ಇದೀಗ ಪ್ರಕರಣ ರದ್ದುಪಡಿಸುವಂತೆ ಆರೋಪಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆ ಇಂದು ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ಪೋಕ್ಸೊ ಪ್ರಕರಣದ ಆರೋಪಿ ಶಿವಮೂರ್ತಿ ಸ್ವಾಮಿ ಚಿತ್ರದುರ್ಗದ ಕೋರ್ಟ್‌ಗೆ ಹಾಜರ್
ಎರಡು ವರ್ಷಗಳ ಹಿಂದೆ ದೇಶದ ಗಮನವನ್ನು ಸೆಳೆದ ಮತ್ತೊಂದು ಹೈ ಪ್ರೊಫೈಲ್ ಪ್ರಕರಣ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮಿ ವಿರುದ್ಧದ ಪೋಕ್ಸೊ ಪ್ರಕರಣ. ಮಠದ ಹಾಸ್ಟೆಲ್‌ನ ಇಬ್ಬರು ಬಾಲಕಿಯರು ಸ್ವಾಮಿಯ ವಿರುದ್ಧ ಲೈಂಗಿಕ ದೌರ್ಜನ್ಯದ ದೂರು ನೀಡಿದ್ದರು. ಈ ಪ್ರಕರಣದಲ್ಲಿ ಬಂಧನಕ್ಕೊಳಗಾದ ಸ್ವಾಮೀಜಿ ಜಾಮೀನಿನಲ್ಲಿ ಬಿಡುಗಡೆಯಾಗಿದ್ದರು. ಈ ಜಾಮೀನನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ನಂತರ ಮತ್ತೆ ಚಿತ್ರದುರ್ಗದ ಜೈಲಿನಲ್ಲಿ ವಿಚಾರಣಾಧೀನ ಕೈದಿಯಾಗಿದ್ದಾರೆ. ಇಂದು ಚಿತ್ರದುರ್ಗದ 2ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ವಿಚಾರಣೆಗಾಗಿ ಪೊಲೀಸರು ಹಾಜರುಪಡಿಸಿದ್ದಾರೆ.
ರೇಣುಕಾಸ್ವಾಮಿ ಕೊಲೆ ಆರೋಪಿ ನಟ ದರ್ಶನ್ ವಿಚಾರಣೆ ಇಂದು
ಎರಡು ತಿಂಗಳಿನಿಂದ ರಾಜ್ಯದಲ್ಲಿ ತಲ್ಲಣ ಸೃಷ್ಟಿಸಿದ್ದ ಮತ್ತೊಂದು ಪ್ರಕರಣ ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣ. ಈ ಪ್ರಕರಣದಲ್ಲಿ ನಟ ದರ್ಶನ್, ಆತನ ಗೆಳತಿ ಪವಿತ್ರಾ ಗೌಡ ಸೇರಿದಂತೆ ಹದಿನೇಳು ಆರೋಪಿಗಳ ನ್ಯಾಯಾಂಗ ಬಂಧನ ಅವಧಿ ಇಂದು ಮುಕ್ತಾಯಗೊಳ್ಳಲಿದ್ದು, ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ. ಪರಪ್ಪನ ಅಗ್ರಹಾರ ಜೈಲಿನಲ್ಲಿ ಸಿಗರೇಟು ಸೇದುತ್ತಾ ರೌಡಿಗಳ ಜೊತೆ ಆರಾಮವಾಗಿದ್ದ ದರ್ಶನ್ ಫೋಟೋ ವೈರಲ್ ಆದ ನಂತರ, ದರ್ಶನ್‌ಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗಿದೆ ಎಂದು ಚರ್ಚೆ ಶುರುವಾಗಿತ್ತು. ಎಚ್ಚೆತ್ತುಕೊಂಡ ಗೃಹ ಇಲಾಖೆ ದರ್ಶನ್‌ನನ್ನು ಬಳ್ಳಾರಿ ಜೈಲಿಗೆ ಸ್ಥಳಾಂತರಿಸಿ, ಮಿಕ್ಕ ಆರೋಪಿಗಳನ್ನು ರಾಜ್ಯದ ಬೇರೆ ಬೇರೆ ಜೈಲಿಗೆ ಕಳುಹಿಸಿದ್ದರು.
ನಟ ದರ್ಶನ್ ಸೇರಿ ಪ್ರಕರಣದ ಎಲ್ಲ ಆರೋಪಿಗಳು ಇಂದು ವಿವಿಧ ಜೈಲುಗಳಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನಗರದ 24ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರ ಮುಂದೆ ಹಾಜರಾಗಲಿದ್ದಾರೆ. ಇದೇ ವೇಳೆ ಪೊಲೀಸರು ಸಲ್ಲಿಸಿರುವ ಚಾರ್ಜ್‍ಶೀಟ್ ಎಲ್ಲಾ 17 ಆರೋಪಿಗಳ ಕೈ ಸೇರಲಿದ್ದು, ದರ್ಶನ್- ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳು ಜಾಮೀನಿಗೆ ಅರ್ಜಿ ಸಲ್ಲಿಸುವ ಸಾಧ್ಯತೆಯಿದೆ.
ಇವೆಲ್ಲದರ ನಡುವೆ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣದ ಚಾರ್ಜ್‌ಶೀಟ್ ಕೋರ್ಟ್‌ಗೆ ಇಂದೇ ಸಲ್ಲಿಕೆಯಾಗಲಿದೆ. ಮಾರ್ಚ್ 1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಪೋಟಿಸಿದ್ದ ಆರೋಪಿ ಮುಸಾಫಿರ್ ಹುಸೇನ್ ಸೇರಿದಂತೆ ಐವರು ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದೆ. NIA ಈ ಪ್ರಕರಣದ ತನಿಖೆ ನಡೆಸುತ್ತಿದೆ.
ಸರಣಿ ಅತ್ಯಾಚಾರದ ಆರೋಪಿ ಹಾಸನದ ಮಾಜಿ ಸಂಸದ, ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್ ರೇವಣ್ಣ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ಇಂದು ನಡೆದಿದ್ದು, ಸೆ. 12ಕ್ಕೆ ಮುಂದೂಡಲಾಗಿದೆ. ಪ್ರಕರಣದ ಆರೋಪ ಪಟ್ಟಿ ಇತ್ತೀಚೆಗೆ ಕೋರ್ಟ್‌ಗೆ ಸಲ್ಲಿಕೆಯಾಗಿತ್ತು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಚಾಚ್ಯವಾಗಿ ನಿಂದಿಸಿದ ಮತ್ತು ಕೋಮು ಉದ್ರೇಕ ಭಾಷಣ ಮಾಡಿದ ಆರೋಪದ ಸಂಬಂಧ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಮತ್ತು ಕುಮಟಾ ಠಾಣೆಗಳಲ್ಲಿ ಪ್ರತ್ಯೇಕವಾಗಿ ದಾಖಲಾಗಿರುವ ಎಫ್‌ಐಆರ್ ರದ್ದತಿ ಕೋರಿ ಬಿಜೆಪಿ ಮಾಜಿ ಸಂಸದ ಅನಂತ ಕುಮಾರ್ ಹೆಗ್ಡೆ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ಇಂದು ಹೈಕೋರ್ಟ್ ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠದಿಂದ ವಿಚಾರಣೆ ನಡೆಸಿತ್ತು. ಆರೋಪ ಪಟ್ಟಿ ಸಲ್ಲಿಕೆಯಾಗಿದೆ ಎಂದು ಸರ್ಕಾರ ತಿಳಿಸಿದ ಕಾರಣ ಅರ್ಜಿ ತಿದ್ದುಪಡಿ ಮಾಡಲು ಅನಂತಕುಮಾರ್ ಹೆಗ್ಡೆ ಪರ ವಕೀಲರಿಗೆ ತಿಳಿಸಿದ ನ್ಯಾಯಾಲಯ ವಿಚಾರಣೆಯನ್ನು ಸೆಪ್ಟೆಂಬರ್ 26ಕ್ಕೆ ಮುಂದೂಡಿದೆ.

ಹೇಮಾ ವೆಂಕಟ್
ʼಈ ದಿನ.ಕಾಮ್ʼನಲ್ಲಿ ಮುಖ್ಯ ವರದಿಗಾರ್ತಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಉದಯವಾಣಿ ಮತ್ತು ಪ್ರಜಾವಾಣಿ ಪತ್ರಿಕೆಯಲ್ಲಿ ಹತ್ತು ವರ್ಷಗಳ ಕಾಲ ಉಪಸಂಪಾದಕಿ/ವರದಿಗಾರ್ತಿಯಾಗಿ ಕಾರ್ಯನಿರ್ವಹಿಸಿದ್ದಾರೆ.