13 ಅಸುರಕ್ಷಿತ ಸ್ಮಾರಕಗಳ ಸಂರಕ್ಷಣೆ ಮಾಡಲು ₹5 ಕೋಟಿ ವೆಚ್ಚದಲ್ಲಿ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭ ನಡೆದಿದ್ದು, ಜಗತ್ತಿನ ಸಾಂಸ್ಕೃತಿಕ ಸಂಪತ್ತಿಗೆ ಲಕ್ಕುಂಡಿ ಸೇರಿಸಲು ಎಲ್ಲರು ಪ್ರಾಮಾಣಿಕ ಪ್ರಯತ್ನ ಮಾಡೋಣ ಎಂದು ಗದಗ ಜಿಲ್ಲಾ ಉಸ್ತುವಾರಿ ಸಚಿವ ಎಚ್ ಕೆ ಪಾಟೀಲ ಅವರು ಕರೆ ನೀಡಿದರು.
ಗದಗ ತಾಲೂಕಿನ ಲಕ್ಕುಂಡಿಯ ಹಾಲಗುಂಡಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಮೈಸೂರಿನ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ನಡೆಯುತ್ತಿರುವ ₹5 ಕೋಟಿ ವೆಚ್ಚದಲ್ಲಿ ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ 13 ಆರಕ್ಷಿತ ಸ್ಮಾರಕಗಳ ಸಂರಕ್ಷಣೆ ಮತ್ತು ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
“ಲಕ್ಕುಂಡಿಗೆ ಹೋದವರು ಹಂಪಿಗೆ ಹೊಗುತ್ತಾರೆ. ಹಂಪಿಗೆ ಹೋದವರು ಲಕ್ಕುಂಡಿಗೆ ಬಂದೇ ಬರ್ತಾರೆ ಎನ್ನುವಂತಾಗಬೇಕು. ಕಟ್ಟೆಯ ಕೆಳಗೆ ಅವಿತಿರುವ ಕಲೆ, ಶಿಲ್ಪಕಲೆಗಳು ಅದ್ಬುತ ಕಲಾಕೃತಿಗಳ ಉತ್ಖನನವಾಗಬೇಕಾದರೆ ಗ್ರಾಮಸ್ಥರ ಪ್ರೀತಿ, ಸ್ನೇಹ, ವಿಶ್ವಾಸ, ತ್ಯಾಗ ಬೇಕಾಗುತ್ತದೆ” ಎಂದು ಕೋರಿದರು.
“ಕಲ್ಯಾಣ ಚಾಲುಕ್ಯ ಕಾಲದಲ್ಲಿ ಅದ್ಬುತ ಶಿಲ್ಪಕಲೆಗಳನ್ನು ಅಗೌರವದಿಂದ ನೋಡಲಾಗುತ್ತಿದೆ. ಇಂದಿನ ದಿನದಲ್ಲೂ ತಿಪ್ಪೆಯನ್ನು ಅಗೆದರೆ 20ಕ್ಕೂ ಹೆಚ್ಚು ಶಿಲ್ಪಕಲೆಗಳು ಸಿಗುತ್ತವೆ. ಕಟ್ಟೆಯನ್ನು ಅಗೆದರೂ ಮ್ಯೂಸಿಯಂ ಹಿಡಿಸಲಾಗದಷ್ಟು ಪಾರಂಪರಿಕ ಶಿಲ್ಪಕಲೆಗಳು ದೊರೆಯುತ್ತವೆ. ಆದ್ದರಿಂದ ಗ್ರಾಮಸ್ಥರು, ಯುವಕರು ಶಿಲ್ಪಕಲೆಗಳ ರಕ್ಷಣೆಗೆ ಮುಂದಾಗಬೇಕು” ಎಂದು ಹೇಳಿದರು.
“ಅತ್ಯಂತ ಪ್ರಾಮುಖ್ಯತೆ ಹೊಂದಿರುವ ಲಕ್ಕುಂಡಿಯನ್ನು ಚಾಲುಕ್ಯರು ಠಂಕ ಶಾಲೆಯನ್ನಾಗಿಸಿಕೊಂಡಿದ್ದರು. ಆ ಕಾಲದ ಇತಿಹಾಸ ಸಂಸ್ಕೃತಿ, ವೈಭವದ ಮೆರಗು, ಸಂಭ್ರಮ ಮರುಕಳಿಸುವಂತೆ ಆಂದೋಲನ ಪ್ರಾರಂಭಿಸಿ ಅದಕ್ಕೆ ಎಲ್ಲರೂ ಪ್ರಾಮಾಣಿಕ ಪ್ರಯತ್ನ ಮಾಡುವ ಕೆಲಸವಾಗಬೇಕು” ಎಂದರು.
“ಕರ್ನಾಟಕದಲ್ಲಿ ಸುಮಾರು 25 ಸಾವಿರ ಸ್ಮಾರಕಗಳಿವೆ. ಅವೆಲ್ಲವನ್ನೂ ಸರ್ಕಾರದಿಂದ ಅಭಿವೃದ್ಧಿಗೊಳಿಸುವುದರ ಜತೆಗೆ ಊರಿನ ಮತ್ತು ಸ್ಮಾರಕಗಳ ಬಗ್ಗೆ ಅಭಿಮಾನ ಹೊಂದಿ ಅಮೇರಿಕದಲ್ಲಿರುವ ಕನ್ನಡಿಗರು ಮುಂದೆಬಂದು ದತ್ತು ತೆಗೆದುಕೊಳ್ಳುತ್ತಿರುವುದು ಗರ್ವ ಮತ್ತು ಹೆಮ್ಮೆಯ ವಿಷಯವಾಗಿದೆ” ಎಂದು ನುಡಿದರು.
ನರಗುಂದ ಶಾಸಕ ಸಿ ಸಿ ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, “ಲಕ್ಕುಂಡಿಗೆ ತನ್ನದೇ ಆದ ಐತಿಹಾಸಿಕ ಸ್ಥಾನವಿದೆ. ಪಾರಂಪರಿಕ ಸ್ಮಾರಕಗಳಿಗೆ ಹೆಸರುವಾಸಿಯಾಗಿರುವ ಲಕ್ಕುಂಡಿಯಲ್ಲಿ 101 ದೇವಾಲಯ, 101 ಬಾವಿಗಳಿವೆ ಎಂಬುದು ಇತಿಹಾಸದಿಂದ ತಿಳಿದುಬಂದರೂ ಸಧ್ಯ 30 ದೇವಾಲಯಗಳು, 30 ಬಾವಿಗಳು ಮಾತ್ರ ಕಂಡುಬರುತ್ತಿವೆ. ಅವುಗಳ ರಕ್ಷಣೆ ಹಾಗೂ ಅಭಿವೃದ್ಧಿ ಅವಶ್ಯಕವಾಗಿದೆ” ಎಂದರು.
“ಸರ್ಕಾರ ಯಾವುದೇ ಇರಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುವುದು ಗ್ರಾಮಸ್ಥರ ಜಾವಾಬ್ದಾರಿಯಾಗಿದೆ. ಲೋಕೋಪಯೋಗಿ ಸಚಿವನಾಗಿದ್ದ ಸಂದರ್ಭದಲ್ಲಿ ಈ ಭಾಗದಲ್ಲಿ 43 ಕೋಟಿ ರೂ. ಅಭಿವೃದ್ಧಿ ಕಾರ್ಯಕ್ರಮಗಳನ್ನು ಮಾಡಲಾಗಿದೆ. ಸಚಿವ ಎಚ್ ಕೆ ಪಾಟೀಲ ಅವರು 5 ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಆರಂಭಿಕವಾಗಿ ಚಾಲನೆ ನೀಡಿರುವುದು ಸಂತಸದ ವಿಷಯ” ಎಂದರು.
ಲಕ್ಕುಂಡಿ ಗ್ರಾಮದಲ್ಲಿ ಅಪೂರ್ಣಗೊಂಡಿರುವ ಹಾಲಗೊಂಡ ಬಸವೇಶ್ವರ ಸಮುದಾಯ ಭವನ ಕಾಮಗಾರಿಗೆ ಅನುದಾನ ಒದಗಿಸುವುದು ಸೇರಿ ಪ್ರಸಕ್ತ ಸಾಲಿನ ಲಕ್ಕುಂಡಿ ಉತ್ಸವಕ್ಕೂ ಚಾಲನೆ ನೀಡಬೇಕು ಎಂದು ಶಾಸಕ ಸಿ ಸಿ ಪಾಟೀಲ ಅವರು ಸಚಿವರಿಗೆ ಮನವಿ ಮಾಡಿದರು. ಜತೆಗೆ ಸ್ಮಾರಕಗಳ ರಕ್ಷಣೆ, ಸ್ಮಾರಕಗಳ ಅಭಿವೃದ್ಧಿ ಗ್ರಾಮಸ್ಥರ ಹೊಣೆಗಾರಿಕೆಯೂ ಆಗಿದೆ” ಎಂದು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಕೊಪ್ಪಳ | ಗಣೇಶ ಚತುರ್ಥಿಯ ಮರುದಿನ ಮುಸ್ಲಿಮರ ಈ ಮನೆಯಲ್ಲಿ ಇಲಿ ಪೂಜೆ!
ಹಾಲಗುಂಡಿ ಬಸವೇಶ್ವರ ದೇವಾಲಯ ಮತ್ತು ಮಜ್ಜನ ಬಾವಿ, ಈಶ್ವರ ದೇವಾಲಯ, ಕಲ್ಮಠ ದೇವಾಲಯ ಮತ್ತು ಕಲ್ಮಠ ಬಾವಿ, ಕಣ್ಣರ ಬಾವಿ, ಕೋಟೆ ವೀರಭದ್ರೇಶ್ವರ ದೇವಾಲಯ, ಲಕ್ಷ್ಮಿನಾರಾಯಣ ದೇವಾಲಯ, ಲೆಕ್ಕದ ವೀರಣ್ಣ ದೇವಾಲಯ, ಈಶ್ವರ ಗುಡಿ ಹತ್ತಿರದ ಮಾಳಿ ಬಾವಿ, ಮಲ್ಲಿಕಾರ್ಜುನ ದೇವಾಲಯ, ನೀಲಕಂಠೇಶ್ವರ ದೇವಾಲಯ, ಸಿದ್ದೇಶ್ವರ ದೇವಾಲಯ, ಸೋಮೇಶ್ವರ ದೇವಾಲಯ, ಕಪ್ಪಲಿ ಬಾವಿ, ವಿರೂಪಾಕ್ಷ ದೇವಾಲಯ ಸೇರಿದಂತೆ ಒಟ್ಟು 13 ಅಸುರಕ್ಷಿತ ಸ್ಮಾರಕಗಳ ಸಂರಕ್ಷಣೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಲಾಯಿತು.
ಲಕ್ಕುಂಡಿ ಗ್ರಾಪಂ ಅಧ್ಯಕ್ಷ ಕೆಂಚಪ್ಪ ಪೂಜಾರ, ಉಪಾಧ್ಯಕ್ಷೆ ಪುಷ್ಪಾ ಪಾಟೀಲ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್ ಸಾಬ ಬಬರ್ಚಿ, ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ ಬಿ ಸಂಕದ, ಲಕ್ಕುಂಡಿ ಪಾರಂಪರಿಕ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ರಾಜ್ಯ ಸಮಿತಿ ಸದಸ್ಯರಾದ ಸಿದ್ಧಲಿಂಗೇಶ್ವರ ಪಾಟೀಲ, ಅ ದ ಕಟ್ಟಿಮನಿ, ಮುಖಂಡರಾದ ವಿವೇಕ ಯಾವಗಲ್, ಅಶೋಕ ಮಂದಾಲಿ ಇದ್ದರು.
