ಈ ದಿನ ಸಂಪಾದಕೀಯ | ಖಾಲಿ ಇಲ್ಲದ ಸಿಎಂ ಸ್ಥಾನ ಮತ್ತು ವ್ಯರ್ಥ ಕಾಲಹರಣ

Date:

Advertisements
ನಾಡಿನ ಜನ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಪಕ್ಷ ಅವರನ್ನು ಗುರುತಿಸಿ ಸಚಿವರನ್ನಾಗಿ ಮಾಡಿ, ಮಹತ್ವದ ಜವಾಬ್ದಾರಿ ಹೊರಿಸಿದೆ. ಸಿಕ್ಕ ಅಪೂರ್ವ ಅವಕಾಶವನ್ನು ಬಳಸಿಕೊಂಡು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ತಮ್ಮ ಕೆಲಸಗಳ ಮೂಲಕ ಜನಮಾನಸದಲ್ಲಿ ನೆಲೆಯೂರಬೇಕು. ಅದನ್ನು ಬಿಟ್ಟು, ಖಾಲಿ ಇಲ್ಲದ ಸಿಎಂ ಕುರ್ಚಿಗಾಗಿ ಕ್ಷುಲ್ಲಕ ರಾಜಕಾರಣದಲ್ಲಿ ಮುಳುಗೇಳುವುದು, ವ್ಯರ್ಥ ಹೇಳಿಕೆಗಳಲ್ಲಿ ಕಾಲಹರಣ ಮಾಡುವುದು ಅಕ್ಷಮ್ಯ ಅಪರಾಧ.

‘ಮುಂದಿನ ಮುಖ್ಯಮಂತ್ರಿ ಸತೀಶ್ ಜಾರಕಿಹೊಳಿ’ ಎಂಬ ಅಭಿಯಾನ ಆರಂಭವಾಗಿದೆ. ಸತೀಶ್ ಜಾರಕಿಹೊಳಿಯವರ ಅಭಿಮಾನಿಗಳು, ಬೆಂಬಲಿಗರು, ಜಾತಿಜನರು ಈ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ನಾಗಾಲೋಟದಲ್ಲಿ ಓಡಿಸುತ್ತಿದ್ದಾರೆ.

ಸಾಮಾಜಿಕ ಮಾಧ್ಯಮಗಳ ಮೂಲಕ ಓಡಿಸುವುದೇನು ಹೊಸದಲ್ಲ. ಇತ್ತೀಚಿನ ದಿನಗಳಲ್ಲಿ ಶಾಸಕರಿಗೆ, ಸಚಿವರಿಗೆ, ಡಿಸಿಎಂ, ಸಿಎಂಗಳಿಗೆ ಪ್ರತ್ಯೇಕವಾದ ಸೋಷಿಯಲ್ ಮೀಡಿಯಾ ಮ್ಯಾನೇಜ್ ಮಾಡುವ ತಂಡಗಳುಂಟು. ಅವರೇ ನಿಯೋಜಿಸಿಕೊಂಡ ತಂಡದಿಂದ ಅವರದೇ ಅಭಿಯಾನ ಬಿಟ್ಟು ಬೇರೆಯವರದನ್ನು ಮಾಡಲಾಗುತ್ತದೆಯೇ? ಹಾಗಾಗಿ ‘ಸಿದ್ದರಾಮಯ್ಯ ರಾಜೀನಾಮೆ ಕೊಟ್ಟರೆ ಸತೀಶ್ ಜಾರಕಿಹೊಳಿ ಅವರು ಮುಖ್ಯಮಂತ್ರಿ ಆಗಲಿ’ ಎಂದು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಇದು ಮುಖ್ಯಮಂತ್ರಿ ಸಿದ್ದರಾಮಯ್ಯನವರಲ್ಲಿ ಯಾವುದೇ ರೀತಿಯ ಆತಂಕ, ತಳಮಳ ಉಂಟು ಮಾಡಿಲ್ಲ. ಆದರೆ, ಮುಖ್ಯಮಂತ್ರಿಯಾಗಬೇಕೆಂಬ ಕನಸು ಕಂಡವರಲ್ಲಿ ಕಸಿವಿಸಿ ಉಂಟು ಮಾಡುತ್ತದೆ. ಈಗ ನಾವು ಸುಮ್ಮನೆ ಕೂರುವುದು ಸರಿಯಲ್ಲ ಎನಿಸುತ್ತದೆ. ನಮ್ಮದೂ ಒಂದಿರಲಿ ಎಂದು ಹೇಳಿಕೆ ಕೊಟ್ಟು, ಕಾಯ್ದಿರಿಸುವ ಕೆಲಸಕ್ಕೆ ಪ್ರೇರೇಪಿಸುತ್ತದೆ. ದೆಹಲಿ ನಾಯಕರನ್ನು-ಗಾಡ್‌ಫಾದರ್‍‌ಗಳನ್ನು ಸಂಪರ್ಕಿಸುವ, ಸಾಧ್ಯವಾದರೆ ಹೋಗಿ ಭೇಟಿ ಮಾಡಿ ಬರುವ, ಕೊಡು-ಕೊಳ್ಳುವ ವ್ಯವಹಾರಗಳ ಭರಾಟೆ ಜೋರಾಗುತ್ತದೆ.

Advertisements

ಆ ದಿಸೆಯಲ್ಲಿ, ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಈಗ ಮುಖ್ಯಮಂತ್ರಿ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ. ನಾಯಕರ ನಡುವೆ ಹೇಳಿಕೆಗಳು, ಸಮರ್ಥನೆಗಳು, ಪ್ರಭಾವಗಳ ಕುರಿತು ಮಾತುಕತೆಗಳು ಜೋರಾಗಿವೆ.

2023ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿದಾಗ, ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವೆ ಮುಖ್ಯಮಂತ್ರಿ ಕುರ್ಚಿಗಾಗಿ ಪೈಪೋಟಿ ನಡೆದದ್ದು ನಿಜ. ಕೆಪಿಸಿಸಿ ಅಧ್ಯಕ್ಷರಾಗಿದ್ದು, ಪಕ್ಷ ಬಹುಮತ ಗಳಿಸಿದಾಗಲೂ ಮುಖ್ಯಮಂತ್ರಿ ಪಟ್ಟ ಸಿಗದೆ ಡಿಸಿಎಂ ಸ್ಥಾನಕ್ಕೆ ತಾತ್ಕಾಲಿಕವಾಗಿ ತೃಪ್ತಿಪಟ್ಟುಕೊಂಡಿರುವ ಡಿ.ಕೆ. ಶಿವಕುಮಾರ್, ಈಗಲೂ ಪ್ರಯತ್ನದ ಹಾದಿಯಲ್ಲೇ ಇದ್ದಾರೆ. ಡಿಕೆ ಮೊದಲ್ಗೊಂಡು ಹಿರಿಯ ನಾಯಕ ಆರ್.ವಿ. ದೇಶಪಾಂಡೆ, ಡಾ. ಜಿ. ಪರಮೇಶ್ವರ್, ಸತೀಶ್ ಜಾರಕಿಹೊಳಿ, ಎಂ.ಬಿ. ಪಾಟೀಲ್ ವರೆಗೆ ‘ನಾನೂ ಮುಖ್ಯಮಂತ್ರಿ ಅಭ್ಯರ್ಥಿ’ ಎನ್ನುವುದು ಸಾಮಾನ್ಯವಾಗಿದೆ. ಹೀಗೆ ಹೇಳಲು, ಆಸೆ ಹುಟ್ಟಿಸಲು ಕಾರಣವಾಗಿರುವುದು ಮುಡಾ ಹಗರಣ. ಅದು ಸೃಷ್ಟಿಸಿರುವ ಅವಕಾಶ.

ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾದ ರಿಟ್‌ ಅರ್ಜಿ ವಿಚಾರಣೆ ಹೈಕೋರ್ಟ್‌ನಲ್ಲಿ ನಡೆಯುತ್ತಿದೆ. ಸೆ.12ರಂದು ಅಂತಿಮವಾಗಿ ಹೊರಬೀಳುವ ‘ತೀರ್ಪು’ ಮಹತ್ವಪೂರ್ಣದ್ದಾಗಿದೆ. ಈ ನಡುವೆ ಮುಖ್ಯಮಂತ್ರಿ ಪಟ್ಟದ ಚರ್ಚೆ ಚಾಲ್ತಿಗೆ ಬಂದಿದೆ.

ಇದನ್ನು ಓದಿದ್ದೀರಾ?: ಈ ದಿನ ಸಂಪಾದಕೀಯ| ವಿನೇಶ್‌ ಫೋಗಟ್‌ ಪಕ್ಷ ರಾಜಕಾರಣ ಮಾಡಿದರೆ ಆಕೆ ಎತ್ತಿದ ಪ್ರಶ್ನೆಗಳು ಸುಳ್ಳಾಗವು

ಇದೇನು ಹೊಸದಲ್ಲ. ಕಾಂಗ್ರೆಸ್ ಪಕ್ಷಕ್ಕಷ್ಟೇ ಸೀಮಿತವಾದ ಬೆಳವಣಿಗೆಯೂ ಅಲ್ಲ.  

1972ರಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದ ದೇವರಾಜ ಅರಸು ನಾಯಕತ್ವದಲ್ಲಿ ಪಕ್ಷ ಬಹುಮತ ಗಳಿಸಿದಾಗಲೂ, ಕೆಂಗಲ್ ಹನುಮಂತಯ್ಯ, ಸಿದ್ದವೀರಪ್ಪ, ಕೆ.ಎಚ್. ಪಾಟೀಲ್ ಮುಖ್ಯಮಂತ್ರಿಗಳಾಗುವ ರೇಸ್‌ನಲ್ಲಿದ್ದರು. ಅಂತಿಮವಾಗಿ ಹೈಕಮಾಂಡ್ ಅರಸು ಪರವಾಗಿತ್ತು, ಮುಖ್ಯಮಂತ್ರಿಗಳಾದರು. ಆದರೆ ಅವಧಿಯುದ್ದಕ್ಕೂ ಕೆ.ಎಚ್.ಪಾಟೀಲ್ ಅವರಿಂದ ಪೈಪೋಟಿ ಇದ್ದೇ ಇತ್ತು.

1983ರಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಅಧಿಕಾರದ ಗದ್ದುಗೆಗೇರುವ ಸಂದರ್ಭ ಸೃಷ್ಟಿಯಾದಾಗ, ಜನರ ಆಯ್ಕೆಯಾಗಿ ಅಬ್ದುಲ್ ನಜೀರ್ ಸಾಬ್, ಬಂಗಾರಪ್ಪನವರಿದ್ದರೆ; ಪಕ್ಷದ ವತಿಯಿಂದ ದೇವೇಗೌಡ ಮತ್ತು ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ರೇಸ್‌ನಲ್ಲಿದ್ದರು. ಅಂತಿಮವಾಗಿ ಹೆಗಡೆ ಮುಖ್ಯಮಂತ್ರಿಗಳಾದರು, ದೇವೇಗೌಡರು ಹಿನ್ನೆಲೆಗೆ ಸರಿದರು. ಆದರೆ ಇಬ್ಬರ ನಡುವಿನ ಒಳಜಗಳ, ಪಕ್ಷವನ್ನೇ ಇಬ್ಭಾಗ ಮಾಡಿತು.

1989ರಲ್ಲಿ ಕಾಂಗ್ರೆಸ್ಸಿನ ವೀರೇಂದ್ರ ಪಾಟೀಲ್ ಮುಖ್ಯಮಂತ್ರಿಯಾದರು. ದಕ್ಷತೆ, ಪ್ರಾಮಾಣಿಕತೆಗೆ ಹೆಸರಾದ ಪಾಟೀಲರು ಉತ್ತಮ ಆಡಳಿತ ಕೊಡುವ ಬಗ್ಗೆ ಯೋಚಿಸುತ್ತಿದ್ದಾಗ, ಕಾಂಗ್ರೆಸ್ಸಿಗರೇ ಚನ್ನಪಟ್ಟಣದಲ್ಲಿ ಕ್ಷುಲ್ಲಕ ಗಲಭೆ ಎಬ್ಬಿಸಿ ಮುಖ್ಯಮಂತ್ರಿ ಕುರ್ಚಿಯಿಂದ ಕೆಳಗಿಳಿಸಿದರು. ಬಂಗಾರಪ್ಪನವರು ಮುಖ್ಯಮಂತ್ರಿಯಾದರು. ಆ ನಂತರ ವೀರಪ್ಪ ಮೊಯ್ಲಿಯವರು ಸಿಎಂ ಆದರು. ಒಂದೇ ಅವಧಿಯಲ್ಲಿ ಕಾಂಗ್ರೆಸ್ ಪಕ್ಷ ಮೂವರು ಮುಖ್ಯಮಂತ್ರಿಗಳನ್ನು ಕಾಣುವಂತಾಯಿತು.

1994ರಲ್ಲಿ, ಜನತಾದಳ ಬಹುಮತ ಗಳಿಸಿ ದೇವೇಗೌಡರು ಮುಖ್ಯಮಂತ್ರಿಯಾದರು. ಆದರೆ, ಪಕ್ಷ ಅಧಿಕಾರಕ್ಕೇರಲು ಕಾರಣವಾಗಿದ್ದ ಜೆ.ಎಚ್. ಪಟೇಲ್ ಮತ್ತು ಹೆಗಡೆಯವರನ್ನು ಕಡೆಗಣಿಸಲಾಯಿತು. ಮುಂದೆ ಅದು ಪಕ್ಷ ಇಬ್ಬಾಗವಾಗಲು ಕಾರಣವಾಯಿತು.

1999ರಲ್ಲಿ ಎಸ್.ಎಂ.ಕೃಷ್ಣ ಕೆಪಿಸಿಸಿ ಅಧ್ಯಕ್ಷರಾಗಿದ್ದಾಗ, ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿ ಅಧಿಕಾರಕ್ಕೇರಿತು. ಕೃಷ್ಣ ಸಿಎಂ ಆದರು. ಆದರೆ, ಪಕ್ಷದೊಳಗಿನ ಹಿರಿಯರಾದ ಕೆ.ಎಚ್.ರಂಗನಾಥ್, ಕಾಗೋಡು ತಿಮ್ಮಪ್ಪ, ಡಿ.ಬಿ. ಚಂದ್ರೇಗೌಡ, ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ. ಪಾಟೀಲರನ್ನು ವ್ಯವಸ್ಥಿತವಾಗಿ ಹಿನ್ನೆಲೆಗೆ ಸರಿಸಲಾಯಿತು.

2004ರಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಸಿಗದೇ ಇದ್ದಾಗ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಂಡಾಗ, ಕಾಂಗ್ರೆಸ್ಸಿನಿಂದ ಮಲ್ಲಿಕಾರ್ಜುನ ಖರ್ಗೆ ಹಾಗೂ ಜೆಡಿಎಸ್‌ನಿಂದ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗುವ ರೇಸ್‌ನಲ್ಲಿದ್ದರು. ಆದರೆ ಗೌಡರ ಆಣತಿಯಂತೆ ಧರಂಸಿಂಗ್ ಮುಖ್ಯಮಂತ್ರಿಯಾದರು. ಖರ್ಗೆ ಹಿನ್ನೆಲೆಗೆ ಸರಿದರು, ಸಿದ್ದರಾಮಯ್ಯ ಡಿಸಿಎಂ ಆದರು.

2008ರಲ್ಲಿ ಶಾಸಕರನ್ನು ಖರೀದಿಸಿ ಅಧಿಕಾರಕ್ಕೆ ಬಂದ ಬಿಜೆಪಿ, ಯಡಿಯೂರಪ್ಪನವರನ್ನು ಮುಖ್ಯಮಂತ್ರಿ ಮಾಡಿತು. ಆದರೆ ಡಿ ನೋಟಿಫಿಕೇಶನ್ ಹಗರಣದಲ್ಲಿ ಸಿಲುಕಿದ ಸಿಎಂ ಯಡಿಯೂರಪ್ಪನವರು ರಾಜೀನಾಮೆ ಕೊಡಬೇಕಾಗಿ ಬಂತು. ಆಗ ಅವರು ಸದಾನಂದಗೌಡರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದರು.

2011ರಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಎದುರಾದ ಸಂದಿಗ್ಧ ಸ್ಥಿತಿ ಈಗ ರಾಜ್ಯ ರಾಜಕಾರಣದಲ್ಲಿ ಸೃಷ್ಟಿಯಾಗಿದೆ. ಮುಡಾ ಹಗರಣದಲ್ಲಿ ಸಿಲುಕಿರುವ ಸಿದ್ದರಾಮಯ್ಯನವರು, ಹೈಕೋರ್ಟ್ ತೀರ್ಪು ಎದುರು ನೋಡುತ್ತಿದ್ದಾರೆ. ಅಲ್ಲಿಂದ ವ್ಯತಿರಿಕ್ತ ತೀರ್ಪು ಬಂದರೂ, ಸುಪ್ರೀಂ ಕೋರ್ಟಿಗೆ ಹೋಗುವ ಅವಕಾಶವಿದೆ.

ಆದರೆ, ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡುವ ಸಂದರ್ಭ ಸೃಷ್ಟಿಯಾದರೆ, ಮುಂದಿನ ಮುಖ್ಯಮಂತ್ರಿ ಯಾರು ಎನ್ನುವ ಪ್ರಶ್ನೆ ಎದುರಾಗುತ್ತದೆ. ಯಾವುದೇ ರಾಜಕೀಯ ಪಕ್ಷವಾಗಿರಲಿ, ನಾಯಕರ ನಡುವೆ ಪದವಿಗಾಗಿ ಪೈಪೋಟಿ ಸರ್ವೇ ಸಾಮಾನ್ಯ. ರಾಜಕಾರಣಿಗಳು ಸನ್ಯಾಸಿಗಳಲ್ಲ. ಅಧಿಕಾರಕ್ಕೇರುವುದು ಅವರ ಅಂತಿಮ ಗುರಿಯಾಗಿರುತ್ತದೆ. ಆದರೆ ಅದೇ ಮುಖ್ಯವಾಗಬಾರದು.

ನಾಡಿನ ಜನ ಶಾಸಕರನ್ನಾಗಿ ಆಯ್ಕೆ ಮಾಡಿದ್ದಾರೆ. ಪಕ್ಷ ಅವರನ್ನು ಗುರುತಿಸಿ ಸಚಿವರನ್ನಾಗಿ ಮಾಡಿ, ಮಹತ್ವದ ಜವಾಬ್ದಾರಿ ಹೊರಿಸಿದೆ. ಸಿಕ್ಕ ಅಪೂರ್ವ ಅವಕಾಶವನ್ನು ಬಳಸಿಕೊಂಡು ಜನರ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡಬೇಕು. ತಮ್ಮ ಕೆಲಸಗಳ ಮೂಲಕ ಜನಮಾನಸದಲ್ಲಿ ನೆಲೆಯೂರಬೇಕು. ನೆನಪಿನಲ್ಲುಳಿಯುವ ನಾಯಕನಾಗಬೇಕು. ಅದನ್ನು ಬಿಟ್ಟು, ಖಾಲಿ ಇಲ್ಲದ ಸಿಎಂ ಕುರ್ಚಿಗಾಗಿ ಕ್ಷುಲ್ಲಕ ರಾಜಕಾರಣದಲ್ಲಿ ಮುಳುಗೇಳುವುದು, ವ್ಯರ್ಥ ಹೇಳಿಕೆಗಳಲ್ಲಿ ಕಾಲಹರಣ ಮಾಡುವುದು ಅಕ್ಷಮ್ಯ ಅಪರಾಧ.

ಈದಿನ
ಈ ದಿನ ಸಂಪಾದಕೀಯ
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈ ದಿನ ಸಂಪಾದಕೀಯ| ಅಸ್ಪೃಶ್ಯತೆಯ ಆಚರಣೆ ದೇಶದ್ರೋಹ ಎನಿಸಿಕೊಳ್ಳುವುದು ಯಾವಾಗ?

ಆತ್ಮಸಾಕ್ಷಿ ಜೀವಂತ ಇದ್ದಿದ್ದರೆ ಇವರು ದಲಿತರಿಗೆ ಹೇಲು ತಿನ್ನಿಸುತ್ತಿರಲಿಲ್ಲ, ಅವರ ಹೆಣ್ಣುಮಕ್ಕಳ...

ಈ ದಿನ ಸಂಪಾದಕೀಯ | ಸಂಪುಟದಿಂದ ರಾಜಣ್ಣ ವಜಾ- ಕಾಂಗ್ರೆಸ್ಸಿಗರಿಗೆ ಪಾಠವಾಗುವುದೇ?

ಇನ್ನು ಮುಂದಾದರೂ ಕಾಂಗ್ರೆಸ್ಸಿಗರು, ಬಿಜೆಪಿಯ ಷಡ್ಯಂತ್ರಕ್ಕೆ ಮತ್ತು ಮಡಿಲ ಮಾಧ್ಯಮಗಳ ಕುಯುಕ್ತಿಗೆ...

ಈ ದಿನ ಸಂಪಾದಕೀಯ | ಧರ್ಮಸ್ಥಳ ಕೇಸ್‌ನಲ್ಲಿ ಮುಸ್ಲಿಂ, ಕಮ್ಯುನಿಸ್ಟರ ಹೆಸರು ತಂದು ದಿಕ್ಕು ತಪ್ಪಿಸುವುದು ಅಕ್ಷಮ್ಯ

ಒಂದು ಕಡೆ ಹಿಂದುತ್ವ ಸಂಘಟನೆಗಳು ಹೋರಾಡುತ್ತಿದ್ದರೆ, ಮತ್ತೊಂದೆಡೆ ಎಡಪಂಥೀಯ ಸಂಘಟನೆಗಳೂ ಧರ್ಮಸ್ಥಳ...

ಈ ದಿನ ಸಂಪಾದಕೀಯ | ಬಿಜೆಪಿ ಅಧ್ಯಕ್ಷರ ನೇಮಕದಲ್ಲಿ ಬಗೆಹರಿಯುವುದೇ ಮೋದಿ-ಆರ್‌ಎಸ್‌ಎಸ್‌ ಕಗ್ಗಂಟು?

ಆರ್‌ಎಸ್‌ಎಸ್‌ ಮತ್ತು ಬಿಜೆಪಿ ನಡುವಿನ ಭಿನ್ನಾಭಿಪ್ರಾಯಗಳು ಯಾವ ರೀತಿಯಲ್ಲಿವೆ ಎಂದರೆ, ನಡ್ಡಾ...

Download Eedina App Android / iOS

X