ನೆರೆಯ ರಾಜ್ಯ ತೆಲಂಗಾಣದ ಹೈದರಾಬಾದ್ಗೆ ಸಂಪರ್ಕ ಕಲ್ಪಿಸುವ ಯಾದಗಿರಿ ಜಿಲ್ಲೆಯ ದೋರನಹಳ್ಳಿಯ ರಾಜ್ಯ ಹೆದ್ದಾರಿಯ ಮುಖ್ಯ ರಸ್ತೆಯಲ್ಲಿ ದೊಡ್ಡ ದೊಡ್ಡ ರಸ್ತೆ ಗುಂಡಿಗಳು ಬಿದ್ದಿದೆ. ರಸ್ತೆ ಉದ್ದಕ್ಕೂ ತಗ್ಗು ಗುಂಡಿಗಳು ಬಿದ್ದಿರುವುದರಿಂದ ಪ್ರಯಾಣಿಕರು, ವಾಹನ ಸವಾರರು ಸಂಚಾರ ನಡೆಸುವುದಕ್ಕೆ ಜೀವಭಯ ಉಂಟಾಗಿದೆ.
ರಸ್ತೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ, ಶಾಸಕ ಚನ್ನಾರೆಡ್ಡಿ ತುನ್ನೂರ ಪಾಟೀಲ, ಸಚಿವ ಶರಣ ಬಸಪ್ಪ ದರ್ಶನಾಪುರ ಜಿಲ್ಲೆಯವ ರಾಜ್ಯ ಹೆದ್ದಾರಿ ಕುರಿತು ಗಮನ ಹರಿಸುತ್ತಿಲ್ಲ. ಸುಮಾರು ವರ್ಷಗಳೆ ಕಳೆದಿವೆ ರಸ್ತೆ ದುರಸ್ತಿ ಕಂಡಿಲ್ಲ ಎಂದು ದೋರನಹಳ್ಳಿಯ ಗ್ರಾಮಸ್ಥರು ದೂರಿದ್ದಾರೆ.
ಸಾಮಾಜಿಕ ಹೋರಾಟಗಾರ ಸುರೇಶ್ ರೆಡ್ಡಿ ಈ ದಿನ.ಕಾಮ್ ಜೊತೆಗೆ ಮಾತನಾಡಿ, “ದೊರನಹಳ್ಳಿ ಮುಖ್ಯ ರಸ್ತೆ ಹದಗೆಟ್ಟಿದೆ. ರಸ್ತೆಯುದ್ದಕ್ಕೂ ದೊಡ್ಡ ದೊಡ್ಡ ಗುಂಡಿಗಳು ಬಿದ್ದಿದ್ದು, ನನ್ನ ವಾಹನ ಕೂಡ ಅಪಘಾತಕ್ಕೀಡಾಗಿತ್ತು. ಸಾಕಷ್ಟು ಜನರು ಕಷ್ಟ ನಷ್ಟ ಅನುಭವಿಸಿದ್ದಾರೆ. ಈ ಹಿಂದೆ ರಸ್ತೆ ಸಮಸ್ಯೆ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ದಿವ್ಯ ನಿರ್ಲಕ್ಷ ವಹಿಸುತ್ತಿದ್ದಾರೆ. ಶಾಸಕರು, ಸಚಿವರು ಮಲತಾಯಿ ಧೋರಣೆ ಮಾಡುತ್ತಿದ್ದಾರೆ. ಒಂದು ವೇಳೆ ದುರಸ್ತಿ ಮಾಡದೇ ಇದ್ದಲ್ಲಿ ಉಗ್ರವಾದ ಹೋರಾಟ ಹಮ್ಮಿಕೊಳ್ಳಲಾಗುವುದು” ಎಂದು ಎಚ್ಚರಿಕೆ ನೀಡಿದರು.

ದೋರನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಾವತಿ ಈ ದಿನ.ಕಾಮ್ನೊಂದಿಗೆ ಮಾತನಾಡಿ, “ಸಮಸ್ಯೆ ಕುರಿತು ಅಧಿಕಾರಿಗಳಿಗೆ ತಿಳಿಸಿ ದುರಸ್ತಿ ಮಾಡುವಂತೆ ನೋಡಿಕೊಳ್ಳುವೆ” ಎಂದು ತಿಳಿಸಿದರು.
ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ದೇವರಾಜ್ ಮೌರ್ಯ ಈದಿನ.ಕಾಮ್ ಜೊತೆಗೆ ಮಾತನಾಡಿ, “ರಸ್ತೆ ದುರಸ್ತಿ ನಡೆಯುತ್ತಿದೆ. ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ಮುಚ್ಚಲಾಗಿದೆ” ಎಂದು ತಿಳಿಸಿದರು. ಆದರೆ, ರಸ್ತೆಯನ್ನು ಗಮನಿಸಿದರೆ, ಅದು ದುರಸ್ತಿಯೋ ಅಥವಾ ಕಾಟಾಚಾರಕ್ಕೆ ಮಾಡಿದ ಕೆಲಸವೊ ಎಂಬಂತಿದೆ.

ಈ ಬಗ್ಗೆ ಲೋಕೋಪಯೋಗಿ ಇಲಾಖೆ ಅಧಿಕಾರಿ ಸುಗಾ ರೆಡ್ಡಿ ಮಾತನಾಡಿ, ರಸ್ತೆ ನಿರ್ಮಾಣ ಮಾಡಿ ಬಹಳ ವರ್ಷವಾಗಿರುವುದರಿಂದ ಈ ರಸ್ತೆ ಹೀಗಿರುವುದಕ್ಕೆ ಕಾರಣ. ಕ್ರಿಯಾ ಯೋಜನೆಯ ಬಳಿಕ ಬಜೆಟ್ ಇಲ್ಲ. ಹಾಗಾಗಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ಅವರು ಕೆಕೆಆರ್ಡಿಬಿಯ ಅಡಿಯಲ್ಲಿ ಬೇಡಿಕೆ ಇಟ್ಟಿದ್ದಾರೆ. ಆದರೆ ಶಾಸಕರು ಯಾದಗಿರಿಯಲ್ಲಿಲ್ಲ. ಅವರು ಬಂದ ಬಳಿಕ ಕೆಕೆಆರ್ಡಿಬಿಯ ಆದೇಶ ಸಿಕ್ಕ ತಕ್ಷಣವೇ ರಸ್ತೆ ದುರಸ್ತಿ ಕಾಮಗಾರಿ ನಡೆಸಲಾಗುವುದು” ಎಂದು ತಿಳಿಸಿದರು.
ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ ಅವರು, ಯಾದಗಿರಿ ನಗರ ಠಾಣೆಯ ಪಿಎಸ್ಐ ಪರಶುರಾಮ ಆತ್ಮಹತ್ಯೆ ಪ್ರಕರಣದಲ್ಲಿ ಸಿಲುಕೊಂಡಿರುವುದರಿಂದ ತಲೆಮರೆಸಿಕೊಂಡು ಓಡಾಡುತ್ತಿದ್ದಾರೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಸೇರಿದಂತೆ ಇನ್ನಿತರ ಕೆಲಸಗಳು ನೆನೆಗುದಿಗೆ ಬಿದ್ದಿದೆ. ಇದರಿಂದಾಗಿ ಯಾದಗಿರಿ ಜಿಲ್ಲೆಯ ಜನರು ನರಕಯಾತನೆ ಅನುಭವಿಸುತ್ತಿದ್ದಾರೆ.
ಇದನ್ನು ಓದಿದ್ದೀರಾ? ಬೆಂಗಳೂರು ವಿಭಜನೆಗೆ ಬಿಜೆಪಿ-ಜೆಡಿಎಸ್ ಬಿಡಲ್ಲ, ತಿದ್ದುಪಡಿಗೆ ಒಪ್ಪದಿದ್ದರೆ ಹೋರಾಟ: ಆರ್ ಅಶೋಕ್
ಅಧಿಕಾರಿಗಳು, ರಾಜ್ಯ ಹೆದ್ದಾರಿ ದೋರನಹಳ್ಳಿ ಮುಖ್ಯ ರಸ್ತೆ ದುರಸ್ತಿ ಮಾಡಿ, ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡುವರೇ? ಜಿಲ್ಲಾ ಉಸ್ತುವಾರಿ ಸಚಿವರಾದ ಶರಣಬಸಪ್ಪ ದರ್ಶನಾಪುರ ಈ ಬಗ್ಗೆ ಕ್ರಮ ಕೈಗೊಳ್ಳುವರೇ ಎಂಬುದನ್ನು ಕಾದು ನೋಡಬೇಕಿದೆ.

ಗೀತಾ ಹೊಸಮನಿ
ಯಾದಗಿರಿ, ಕಲಬುರಗಿ ಜಿಲ್ಲಾ ಸಂಯೋಜಕರು, NCCಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ(NRAI ಫೈರಿಂಗ್ ವಿಭಾಗ) ವಿಜೇತೆ.