ಮುಡಾ ಪ್ರಕರಣದಲ್ಲಿ ತನ್ನ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅನುಮತಿ ನೀಡಿರುವುದನ್ನು ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್ ಮತ್ತೆ ಮುಂದೂಡಿದೆ. ಸೆಪ್ಟೆಂಬರ್ 12ರಂದು ವಿಚಾರಣೆಯನ್ನು ನಡೆಸಲಾಗುವುದು ಎಂದು ಕೋರ್ಟ್ ಹೇಳಿದೆ.
ಅಡ್ವೊಕೇಟ್ ಜನರಲ್ ಕೆ ಶಶಿಕಿರಣ್ ಶೆಟ್ಟಿ ಅವರು ವಾದ ಮಂಡಿಸಿದ್ದಾರೆ. “ಲೋಕಾಯುಕ್ತರಿಗೆ ದೂರು ನೀಡಿದ ಬಳಿಕ ನಿರ್ದಿಷ್ಟ ಕಾಲದವರಗೆ ದೂರುದಾರರು ಕಾಯ್ದಿಲ್ಲ. ಆದರೆ, ತಕ್ಷಣ ಅವರು ಭ್ರಷ್ಟಾಚಾರ ನಿರೋಧಕ ಕಾಯಿದೆ ಸೆಕ್ಷನ್ 17ಎ ಅಡಿ ರಾಜ್ಯಪಾಲರಿಂದ ಪೂರ್ವಾನುಮತಿ ಕೋರಿದ್ದಾರೆ” ಎಂದು ಹೇಳಿದ್ದಾರೆ.
ದೂರುದಾರ ಸ್ನೇಹಮಯಿ ಕೃಷ್ಣ ಪರವಾಗಿ ವಕೀಲೆ ಲಕ್ಷ್ಮಿ ಐಯ್ಯಂಗಾರ್ ವಾದ ಮಂಡಿಸಿದ್ದಾರೆ. ಅರ್ಜಿದಾರರ ಸೂಚನೆಯಂತೆ ಇಡೀ ಪ್ರಕ್ರಿಯೆ ನಡೆದಿದೆ ಎಂದು ಸಿಎಂ ಅಧಿಕಾರವಧಿಯ ಇಸವಿಗಳನ್ನು ಉಲ್ಲೇಖಿಸಿ ವಿವರಿಸಿದ್ದಾರೆ.
ಇದನ್ನು ಓದಿದ್ದೀರಾ? ಸಿಎಂ ಸ್ಥಾನಕ್ಕೆ ಚ್ಯುತಿ ಬಂದಿಲ್ಲ, ಸಿದ್ದರಾಮಯ್ಯ ಅವರೇ ಐದು ವರ್ಷ ಮುಖ್ಯಮಂತ್ರಿ: ಡಿ ಕೆ ಸುರೇಶ್ ಸ್ಪಷ್ಟನೆ
ಏನೇ ಇದ್ದರೂ ಸೆಪ್ಟೆಂಬರ್ 12ರಂದೇ ವಾದ ಮಂಡಿಸಿ ಕೊನೆಗೊಳಿಸಬೇಕು ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ತಿಳಿಸಿದ್ದಾರೆ. ಅಂದೇ ನ್ಯಾಯಮೂರ್ತಿ ತೀರ್ಪು ನೀಡುವ ಸಾಧ್ಯತೆಯಿದೆ. ಸೆಪ್ಟೆಂಬರ್ 12ರಂದು ಮಧ್ಯಾಹ್ನ 12 ಗಂಟೆಗೆ ವಿಚಾರಣೆ ನಡೆಯಲಿದೆ.
ಪ್ರತಿವಾದಿಗಳ ವಾದ ಪೂರ್ಣಗೊಂಡಿದ್ದು, ಅರ್ಜಿದಾರರ ಪರವಾಗಿ ಹಿರಿಯ ವಕೀಲ ಡಾ. ಅಭಿಷೇಕ್ ಮನು ಸಿಂಘ್ವಿ ಮತ್ತು ಪ್ರೊ. ರವಿವರ್ಮ ಕುಮಾರ್ ಅವರು ಸೆಪ್ಟೆಂಬರ್ 12ರಂದು ವಾದಿಸಲಿದ್ದಾರೆ.
