ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಘೋಷಿತ ಅನುದಾನ ಬಿಡುಗಡೆ ಮಾಡದಿದ್ದರೆ ಕೇಂದ್ರ ಸರ್ಕಾರದ ಕ್ರಮ ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ಪಡೆಯಲು ರಾಜ್ಯ ಸರ್ಕಾರ ಗಂಭೀರ ಚಿಂತನೆ ನಡೆಸಿದೆ. ಈ ಕುರಿತು ಮುಂದಿನ ಸಚಿವ ಸಂಪುಟ ಸಭೆಯ ಗಮನಕ್ಕೆ ತಂದು ಚರ್ಚಿಸುತ್ತೇವೆ ಎಂದು ಕಾನೂನು ಸಚಿವ ಎಚ್ ಕೆ ಪಾಟೀಲ ತಿಳಿಸಿದರು.
ವಿಧಾನಸೌಧದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕೇಂದ್ರ ಸರ್ಕಾರವು 20.03.2023 ರಂದು ರಾಜ್ಯಸಭೆಯ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರ ನೀಡಿ, ‘ಭದ್ರಾ ಮೇಲ್ದಂಡೆ ಯೋಜನೆಗೆ ಸಂಬಂಧಪಟ್ಟ ಎಲ್ಲ ಹಂತದ ಮಂಜೂರಾತಿಗಳು ದೊರೆತಿದ್ದು, ಇದು ರಾಷ್ಟ್ರೀಯ ಯೋಜನೆಗಾಗಿ ಘೋಷಣೆ ಮಾಡಲು ಎಲ್ಲ ಅರ್ಹತೆ ಪಡೆದಿದೆ’ ಎಂದು ತಿಳಿಸಿರುತ್ತಾರೆ” ಎಂದರು.
“2023-24ನೇ ಸಾಲಿನ ಮುಂಗಡ ಪತ್ರದಲ್ಲಿ ಕೇಂದ್ರ ಸರ್ಕಾರ ಘೋಷಿಸಿರುವಂತೆ ಬರ ಸಂಭವನೀಯ ನೀರುಣಿಸುವ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ. ಅನುದಾನವನ್ನು ತಕ್ಷಣವೇ ಬಿಡುಗಡೆ ಮಾಡಬೇಕು” ಎಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
“ಅನುಮೋದನೆಗೊಂಡಿರುವ ರಾಷ್ಟ್ರೀಯ ಯೋಜನೆಗೆ ರಾಜಕೀಯ ಉದ್ದೇಶದಿಂದ 2023ರ ಸಾರ್ವತ್ರಿಕ ಚುನಾವಣೆಯ ನಂತರ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಮೇಲೆ ಮುಂಗಡ ಪತ್ರದ ಭಾಷಣದಲ್ಲಿ ತಾವೇ ಘೋಷಿಸಿದ ಘೋಷಣೆಯನ್ನು ಅನುಷ್ಠಾನಗೊಳಿಸಲು ಕೇಂದ್ರ ಸರ್ಕಾರ ಹಿಂದೆಟು ಹಾಕುತ್ತಿದೆ” ಎಂದರು.
ರಾಜ್ಯ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರು 03.08.2024, 9.06.2024 ಹಾಗೂ 16.08.2023 ರಂದು ಬರೆದ ಪತ್ರಕ್ಕೆ ಉತ್ತರ ಬರೆದ ಕೇಂದ್ರ ಸರ್ಕಾರದ ಜಲಶಕ್ತಿ ಸಚಿವಾಲಯ ಅನುದಾನ ನೀಡಲು ನಿರಾಕರಿಸಿದೆ.
ಷರತ್ತುಗಳಂತೆ ಎಲ್ಲ ಹಂತಗಳಲ್ಲೂ ಅನುಮೋದನೆಗೊಂಡು ಮುಂಗಡ ಪತ್ರದಲ್ಲಿ ಘೋಷಣೆಯಾಗಿರುವ ಯೋಜನೆಗೆ ಈಗ ನಿರಾಕರಿಸುತ್ತಿರುವುದು ಒಕ್ಕೂಟ ವ್ಯವಸ್ಥೆಯ ಉನ್ನತ ಸಂಪ್ರದಾಯಗಳಿಗೆ ಮತ್ತು ನಿಯಮಗಳಿಗೆ ತದ್ವಿರುದ್ಧವಾಗಿದೆ” ಎಂದು ಹೇಳಿದರು.
“ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಸರ್ಕಾರಗಳು ಯಾವ ಪಕ್ಷದ್ದೇ ಆಗಿರಲಿ ಪಕ್ಷಪಾತ ರಹಿತವಾಗಿ ಜನಹಿತ ಕಾಪಾಡುವ ಮೌಲ್ಯಗಳಿಗೆ ಕೇಂದ್ರದ ಬಿಜೆಪಿ ಸರ್ಕಾರ ತಿಲಾಂಜಲಿ ಇಡುತ್ತಿದೆ” ಎಂದು ಟೀಕಿಸಿದರು.
ಮಹಾದಾಯಿ ಯೋಜನೆ ಕುರಿತು ಬೊಮ್ಮಾಯಿ ಹೇಳಿಕೆಗೆ ಪ್ರತಿಕ್ರಿಯಿಸಿ, “ಬಿಜೆಪಿ ಅವಧಿಯಲ್ಲಿಯೇ ಮಹಾದಾಯಿ ಜಲ ವಿವಾದ ಕುರಿತು ಟ್ರಿಬ್ಯೂನಲ್ ರಚಿಸಲು ಕೋರಿಕೆ ಸಲ್ಲಿಸಲಾಗಿತ್ತು. ಆದರೆ ಟ್ರಿಬ್ಯೂನಲ್ ಅವಶ್ಯತೆ ಇಲ್ಲದಿದ್ದರೂ ಕಾಂಗ್ರೆಸ್‌ನವರು ಟ್ರಿಬ್ಯೂನಲ್ ರಚಿಸಿದರು ಎಂದು ಟೀಕಿಸಿರುವುದು ಅವರ ನಿರ್ಲಕ್ಷ್ಯವನ್ನು ತೋರುತ್ತದೆ” ಎಂದರು.
“ಕೇಂದ್ರ ಸರ್ಕಾರದ ವನ್ಯಜೀವಿ ಮಂಡಳಿ ರಾಜ್ಯದ ಪ್ರತಿಷ್ಠಿತ ಈ ಮಹತ್ವದ ಯೋಜನೆಗೆ ಅಡ್ಡಗಾಲು ಹಾಕುವುದನ್ನು ಬಿಟ್ಟು ಮಂಜೂರಾತಿ ನೀಡಬೇಕು” ಎಂದು ಆಗ್ರಹಿಸಿದರು.