ಡಾ. ಶಿವಣ್ಣ ಕೆಂಪಿ ಅವರ ʼತೆರೆದ ನೋಟʼ ಕೃತಿ ಸೆ.13ರಂದು ಸಂಜೆ 5ಕ್ಕೆ ಬಸವನಗುಡಿಯ ನ್ಯಾಷನಲ್ ಕಾಲೇಜಿನಲ್ಲಿ ಬಿಡುಗಡೆಯಾಗಲಿದೆ. ಹಿರಿಯ ಬರಹಗಾರರಾದ ಬಂಜಗೆರೆ ಜಯಪ್ರಕಾಶ್, ಡಾ ಕೆ ಷರೀಫಾ, ಚ ಹ ರಘುನಾಥ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪುಸ್ತಕಕ್ಕೆ ಕೇಶವ ಮಳಗಿ ಬರೆದ ಮುನ್ನುಡಿ ಇಲ್ಲಿದೆ
ಕನ್ನಡ ಅಧ್ಯಾಪಕರಾದ ಶಿವಣ್ಣ ಅವರು ದಶಕಗಳ ಕಾಲ ನಡೆಸಿದ ಸಾಹಿತ್ಯ ಚಿಂತನೆ ಮತ್ತು ಬೋಧನೆಯ ದೆಸೆಯಿಂದ ಹರಳುಗಟ್ಟಿದ ವಿಚಾರಗಳನ್ನು ಇದೀಗ ಕೃತಿ ರೂಪದಲ್ಲಿ ಪ್ರಕಟಿಸುತ್ತಿದ್ದಾರೆ. ಪುಸ್ತಕದ ಪ್ರತಿ ಬರಹದಲ್ಲೂ ಅವರ ಸಾಹಿತ್ಯ ಕುರಿತ ಪ್ರೀತಿ, ಗಾಢ ಅಧ್ಯಯನದ ಶಿಸ್ತು, ಕೃತಿಯೊಂದನ್ನು ಹೊಸ ವಿಧಾನದಲ್ಲಿ ಪ್ರವೇಶಿಸುವುದು ಹೇಗೆಂಬ ಪ್ರಾಮಾಣಿಕ ಕಳಕಳಿ ತುಂಬಿದ ಪ್ರಶ್ನೆಗಳಿರುವುದರಿಂದ ಓದುಗರಲ್ಲಿ ಒಂದು ಬಗೆಯ ನಿರುಮ್ಮಳತೆಯನ್ನು ನೀಡಬಲ್ಲವು. ಸ್ವತಃ ಸಹನಶೀಲ ಸಹೃದಯ ಓದುಗರಾಗಿರುವ ಶಿವಣ್ಣ ಅವರ ಬರಹಗಳ ಮೂಲ ಗುಣಗಳು ಉದಾತ್ತತೆ, ಮುಕ್ತ ದೃಷ್ಟಿಕೋನ ಹಾಗೂ ನೈತಿಕ ಔಚಿತ್ಯಗಳೇ ಆಗಿರುವುದು ಸಹಜವೇ ಆಗಿದೆ.
ಶಿವಣ್ಣ ಅವರು ಕೃತಿಯನ್ನು ವಿಶಾಲವಾಗಿ ಎರಡು ಭಾಗಗಳನ್ನಾಗಿ ಮಾಡಿದ್ದಾರೆ. ಮೊದಲ ಭಾಗವನ್ನು ಕೃತಿ ಪ್ರವೇಶ ಮತ್ತು ಪರೀಕ್ಷೆ ಎಂದು ತೆಗೆದುಕೊಳ್ಳಬಹುದಾದರೆ, ಇನ್ನೊಂದು ಭಾಗವು ಸಾಂಸ್ಕೃತಿಕ ವಿಷಯಗಳಿಗೆ ಮೀಸಲಾಗಿದೆ. ಈ ವರ್ಗೀಕರಣವು ಅವರ ಮನೋಧರ್ಮ ಮತ್ತು ನಿಲುವುಗಳನ್ನು ಎತ್ತಿ ತೋರಿಸುತ್ತದೆ. ಮೊದಲ ಭಾಗದಲ್ಲಿ ಸೃಜನಶೀಲತೆಯ ವಿವಿಧ ಮುಖಗಳನ್ನು ಅರಿತುಕೊಳ್ಳಲು ಯತ್ನಿಸಿದರೆ, ಎರಡನೆಯ ಭಾಗದಲ್ಲಿ ಕ್ರಿಯಾಶೀಲತೆ ಹಾಗೂ ಕ್ರಿಯಾಶೀಲತೆಯನ್ನು ರೂಪಿಸುವ ಭಾಷೆ, ಸಮಾಜ, ಕುಲಕಸುಬು, ಮಾತುಕತೆಗಳು ಇತ್ಯಾದಿಗಳು ಒಳಗೊಂಡಿವೆ.
ಪ್ರತಿಭಾಶಾಲಿಗಳಾದ, ಭವಿಷ್ಯದಲ್ಲಿ ತಾವು ನಿರತರಾಗಿರುವ ಕ್ಷೇತ್ರಗಳಲ್ಲಿ ಉತ್ತಮವಾದ ಕೆಲಸಗಳನ್ನೇ ಮಾಡಲಿರುವ ನನಗಿಂತ ಕಿರಿಯ ತಲೆಮಾರಿನ ಲೇಖಕರಿಗೆ ಒಂದೆರಡು ಮಾತುಗಳನ್ನು ಬರೆಯುವಾಗ ನನ್ನ ಕಣ್ಣೆದುರು ಯಾವಾಗಲೂ ವಿನಾಯಕ ಕೃಷ್ಣ ಗೋಕಾಕ, ದ.ರಾ.ಬೇಂದ್ರೆ, ಮಾಸ್ತಿ ವೆಂಕಟೇಶ ಅಯ್ಯಂಗಾರ ಮತ್ತು ಗೋಪಾಲಕೃಷ್ಣ ಅಡಿಗರಂಥ ಅನೇಕ ಹಿರಿಯರು ಹಾಕಿಕೊಟ್ಟಿರುವ ಪರಂಪರೆ ತೆರೆದುಕೊಳ್ಳುವುದು. ಇಂತಹ ಲೇಖಕರು ಕಿರಿಯ ತಲೆಮಾರನ್ನು ನಡೆಸಿಕೊಂಡ ರೀತಿಯಿಂದಾಗಿಯೇ ಅವರ ನಂತರದಲ್ಲಿ ಕನ್ನಡ ಸಾಹಿತ್ಯ ಮತ್ತು ಸಾಹಿತ್ಯ ವಿಮರ್ಶೆಗಳು ಹಲವು ರೆಂಬೆಕೊಂಬೆಗಳಾಗಿ ಹರಡಿ ಹೂ ಬಿಟ್ಟಿವೆ. ಬೇಂದ್ರೆಯವರು ಸಂಗಪ್ಪ ಸಾಸನೂರು ಅವರ ‘ಆಧುನಿಕ ಕನ್ನಡ ಕವಿತೆ’ ವಿಮರ್ಶಾ ಕೃತಿಗೆ ಮುನ್ನುಡಿಯನ್ನು ಬರೆಯುತ್ತ “ನಿಜವಾದ ವಿಮರ್ಶಕನಿಗೆ ಸಹೃದಯತೆ ಬೇಕು. ದೂರದರ್ಶಕ ಯಂತ್ರವಿರದೆ ಜ್ಯೋತಿರ್ಮಂಡಲವನ್ನು ಹುಡುಕಾಡುವುದೂ, ಹೃದಯವಿರದೆ ಕಾವ್ಯಸಾಗರವನ್ನು ಕಲಕಾಡುವುದೂ ಒಂದೇ” ಎಂಬ ಮಾತುಗಳನ್ನು ಬರೆದರು. ಸದಾನಂದ ನಾಯಕರ ವಿಮರ್ಶಾ ಗ್ರಂಥಕ್ಕೆ ಮುನ್ನುಡಿ ಬರೆಯುತ್ತ “ಬೇಕು ಬೇಡ ಎಂಬ ರೇಖೆಯನ್ನೆಳೆಯುವುದು ಎಷ್ಟು ಸುಲಭವೋ ಅಷ್ಟು ಕಸರತ್ತಿನಿಂದ ತೂಕದ ವಿಮರ್ಶೆ ಮಾಡುವುದು ಸುಲಭವಲ್ಲ. . . ನಮ್ಮ ಸಾಮಾಜಿಕ ಪ್ರಜ್ಞೆಯ ನೆಲೆಬೆಲೆಗಳು ಬೇರೆ ಉತ್ತರವನ್ನು ಕಂಡರೆ ಮಾತ್ರ ಇದು ಸಾಧ್ಯ” ಎಂದರು. ಅಂದರೆ, ಕೃತಿ ಪ್ರವೇಶಕ್ಕೆ ಸಜ್ಜಾಗಿರುವ ವಿಮರ್ಶಕನೊಬ್ಬ ಹೃದಯವಂತನೂ, ತಾನು ಬದುಕುತ್ತಿರುವ ಸಮಾಜದಲ್ಲಿನ ಸ್ಥಿತ್ಯಂತರಗಳನ್ನು ಸದಾ ನಿರುಕಿಸುತ್ತಿರುವ ಪ್ರಜ್ಞಾವಂತ ವ್ಯಕ್ತಿಯೂ ಆಗಿರಬೇಕು ಎಂಬುದು ಈ ಮಾತುಗಳ ಇಂಗಿತಾರ್ಥವಾಗಿದೆ.
ಶಿವಣ್ಣ ಇವೆರಡನ್ನೂ ಪಡೆದಿದ್ದಾರೆ ಎಂದು ನಾನು ಆರಂಭದಲ್ಲಿಯೇ ಹೇಳಿದೆ. ಇಲ್ಲಿನ ಒಟ್ಟು ಬರಹಗಳಲ್ಲಿ ಕಾಣುವ ಸಾಮಾನ್ಯ ಅಂಶವೆಂದರೆ, ಕೃತಿ-ವಸ್ತುವೊಂದನ್ನು ಸಮಾಧಾನದ ಮನಸ್ಸಿನಿಂದ ಅರಿತುಕೊಳ್ಳುವುದೇ ಹೊರತು, ಅವುಗಳ ಕೊರತೆ, ಮಿತಿಗಳನ್ನು ಮುನ್ನೆಲೆಗೆ ತಂದು ಭಿನ್ನವನ್ನು ಸೃಷ್ಟಿಸುವುದಲ್ಲ. ಹಾಗೆಂದು, ವಿಮರ್ಶಾತ್ಮಕ ದೃಷ್ಟಿಕೋನವನ್ನು ಸಾದರಪಡಿಸುವ, ಕಟುಸತ್ಯವನ್ನು ಅರಹುವ ಕೃತಿ ವಿಮರ್ಶೆಗಳು ಅಸಹನೀಯವೆಂದಲ್ಲ. ಅಂಥವುಗಳ ಅಗತ್ಯ ಮತ್ತು ಜರೂರಿ ಇದ್ದೇ ಇರುತ್ತದೆ. ಆದರೆ, ವಿಮರ್ಶೆಯು ವ್ಯಕ್ತಿಗತ ನಿಂದನೆ, ಹಿಯಾಳಿಕೆ, ಅಸಮಾಧಾನ ಸೂಸುವ ದಾರಿಯಾಗಬಾರದು. ಬದಲಿಗೆ, ವಿನಯವನ್ನು ಒಳಗೊಂಡು ಭಿನ್ನಾಭಿಪ್ರಾಯವನ್ನು ಒಪ್ಪಿತ, ಸಾಹಿತ್ಯ-ಸಾಮಾಜಿಕ ಶಿಷ್ಟಾಚಾರದ ಚೌಕಟ್ಟಿನಲ್ಲಿಯೇ ಪ್ರಸ್ತುತ ಪಡಿಸುವಂತಿರಬೇಕು. ಧ್ರುವೀಕರಣವೇ ಮುಖ್ಯ ಲಕ್ಷಣವಾದ ಇಂದಿನ ಅಭಿವ್ಯಕ್ತಿಯ ಕಾಲದಲ್ಲಿ ಶಿವಣ್ಣರಂಥವರು ಅಂಥದ್ದಕ್ಕೆ ಪಕ್ಕಾಗಿಲ್ಲ ಎಂಬುದನ್ನು ಈ ಮಾತುಗಳಲ್ಲಿ ವಿವರಿಸಬೇಕಾಯಿತು.
ಈ ಪುಸ್ತಕದ ಮೊದಲ ಭಾಗದಲ್ಲಿ ಕೃತಿ ಕುರಿತು ಲೇಖನಗಳಿವೆ ಎಂದು ಹೇಳಿದೆ. ಶಿವಣ್ಣ ಅವರಿಗೆ ಕಾಡಿದ ಕೃತಿಗಳ ವಿಶ್ಲೇಷಣೆಯನ್ನು ಈ ವಿಭಾಗದಲ್ಲಿ ಓದಬಹುದು. ಎಲ್ಲ ಕೃತಿಗಳ ಬರಹಗಳನ್ನು ವಿವರಿಸುವುದು ನನ್ನ ಉದ್ದೇಶವಲ್ಲ, ಓದುಗರು ಪುಸ್ತಕದ ಪುಟಗಳನ್ನು ತೆರೆದಾಗ ತಾವೇ ಆ ಅನುಭವಕ್ಕೆ ಪಕ್ಕಾಗಬಲ್ಲರು. ಕುತೂಹಲಕ್ಕಾಗಿ ಹೇಳುವುದಾದರೆ, ತೇಜಸ್ವಿ, ಚಂಪಾ, ಬರಗೂರು, ಹನೂರು, ಕಾಡನಕುಪ್ಪೆ ಅವರಂಥ ಹಿರಿಯ ಲೇಖಕರ ಕೃತಿಗಳು; ನಾಗಲಮಡಿಕೆ ಮತ್ತು ಚೀಮನಹಳ್ಳಿಯವರಂಥ ಹೊಸ ತಲೆಮಾರಿನ ಲೇಖಕರ ಕೃತಿಗಳು ಅವರನ್ನು ಕಾಡಿವೆ ಎಂಬುದನ್ನು ಗಮನಿಸಬೇಕು. ಕೃತಿ ಯಾವುದೇ ಆದರೂ ಶಿವಣ್ಣ ಅವರು ಅಕೆಡೆಮಿಕ್ ಮಾದರಿಯನ್ನು ಬಳಸದೇ, ಸರಳ ಸಹೃದಯ ವಿಧಾನವನ್ನು ಬಳಸಿರುವುದು ಸಾಹಿತ್ಯವನ್ನು ಅರಿತುಕೊಳ್ಳಲು ಪ್ರಯತ್ನಿಸುವ ಸಾಮಾನ್ಯ ಓದುಗರಿಗೂ, ಸಾಹಿತ್ಯ ವಿದ್ಯಾರ್ಥಿಗಳಿಗೂ ಈ ಲೇಖನಗಳು ಹಿತಕರವಾದ ಓದಿನ ಅನುಭವ ನೀಡುವಂತಿವೆ.
ಈಗಾಗಲೇ ಹೇಳಿರುವಂತೆ ಇದು ಕೃತಿ ವಿಶ್ಲೇಷಣಾ ವಿಧಾನವನ್ನು ಅನುಸರಿಸಿರುವ ಲೇಖನಗಳ ಪುಸ್ತಕ. ಹೊಸ ಓದುಗರಿಗೆ ಕೃತಿ ಸಾರಾಂಶದ ಜತೆಗೆ ಸಹಜ ಒಳನೋಟ, ಕೃತಿಯನ್ನು ನೋಡಬೇಕಾದ ಬಗೆ, ಗ್ರಹಿಸಬೇಕಾದ ಅಂಶಗಳತ್ತ ಕೊಂಡೊಯ್ಯುತ್ತದೆ. ಉದಾಹರಣೆಗೆ, ತೇಜಸ್ವಿಯವರ ಚಿದಂಬರ ರಹಸ್ಯ' ಕೃತಿಯು ಹೇಗೆ ಸಮಸ್ಯೆ ಯಾವಾಗಲೂ ಏಕವಾಗಿದ್ದು ಸ್ವತಂತ್ರವಾಗಿರದೆ, ಹಲವು ಸಮಸ್ಯೆಗಳಿಗೆ ಬೆಸೆದುಕೊಂಡಿದ್ದು ಸಂಕೀರ್ಣವಾಗಿರುತ್ತದೆ, ಎಂದು ಕಾದಂಬರಿಯಲ್ಲಿ ನಡೆಯುವ ಸಂಗತಿಗಳನ್ನು ಸಾವಧಾನದಿಂದ ವಿಶ್ಲೇಷಿಸುವ ವಿಧಾನ. ಹೊಸ ಓದುಗರಿಗೆ ಕೃತಿಯೊಂದನ್ನು ಅರಿತುಕೊಳ್ಳುವ ಇಂತಹ
ಸೂಕ್ಷ್ಮ ತಿಳಿಸುವ’ ವಿಧಾನಗಳು ಅತ್ಯಂತ ಪ್ರಯೋಜನಕಾರಿ. ಅಂತೆಯೇ, ಚಂಪಾ ಅವರ ನಾಟಕಗಳಲ್ಲಿ ನೈತಿಕತೆ-ಅಸ್ತಿತ್ವಗಳ ನಡುವೆ ಜರುಗುವ ಸಂಘರ್ಷಗಳನ್ನು ಮುನ್ನೆಲೆಗೆ ತಂದು ವಿವರಿಸುವುದು. ಬರಗೂರರ ಭರತ ನಗರಿ' ಕಾದಂಬರಿಯು ಸ್ವಾತಂತ್ರ್ಯ ಮತ್ತು ಆ ಸ್ವಾತಂತ್ರ್ಯವನ್ನು ಖಾತರಿಪಡಿಸುವ ವ್ಯವಸ್ಥೆ ಕುಸಿದು ನೈತಿಕ ಪತನ ಆರಂಭವಾಗುವುದನ್ನು ವಿಡಂಬನೆಯ ಮೂಲಕ ಸಾಧಿಸುವುದು ವಿಶ್ಲೇಷಣೆಗೆ ಒಳಪಡಿಸುವುದು. ಸುರೇಶ ನಾಗಲಮಡಿಕೆಯವರ
ಹಾಡು ಕಲಿಸಿದ ಹರ’ ಕುರಿತ ವಿಶ್ಲೇಷಣೆ ಸಹ ಈ ದೃಷ್ಟಿಯಿಂದ ಗಮನಾರ್ಹ.
ಮೌಖಿಕ ಅಥವ ದೇಸಿ ಸಾಹಿತ್ಯವನ್ನು ಅರಿತುಕೊಳ್ಳಲು ಮಾಡಿರುವ ಟಿಪ್ಪಣಿಗಳು ಔಚಿತ್ಯಪೂರ್ಣವಾಗಿವೆ. ಈ ಅಂಶಗಳನ್ನು ಮೂಲ ಕೃತಿಯಿಂದಲೇ ಪಡೆದಿದ್ದರೂ ಅದನ್ನೊಂದು ಸನ್ನಿವೇಶದಲ್ಲಿ ಅರ್ಥೈಸಿರುವುದು ಸಮಂಜಸವಾಗಿದೆ. ದೇಸಿ ಅಥವ ಮೌಖಿಕ ಪರಂಪರೆಗಳು ಎಲ್ಲ ಲಿಖಿತ ಸಾಹಿತ್ಯಗಳ ಮೂಲ ನೆಲೆ, ಸತ್ವವಾಗಿದ್ದು,ಮಾರ್ಗ'ಸಾಹಿತ್ಯದ ಆಕರಗಳಾಗಿವೆ. ಈ ದೃಷ್ಟಿಯಿಂದ, ಸಾಮುದಾಯಿಕ ಕಾಣ್ಕೆಯಾಗಿ ಅಭಿವ್ಯಕ್ತಿಗೊಂಡ ದೇಸಿಯ ಪ್ರಭಾವ ಅಪರಿಮಿತ. ನಾವು ನಿಜಕ್ಕೂ ಗಮನಿಸಬೇಕಾದ ಅಂಶವೆಂದರೆ,
ದೇಸಿ’ ಪರಿಕಲ್ಪನೆ ಕೇವಲ ಆಕರ ಅಥವ ಸಂಚಯಿತ ಆರ್ಷೇಯ ಜ್ಞಾನ ಮಾತ್ರವಲ್ಲ ಎಂಬುದು. ಏಕೆಂದರೆ, ಮೌಖಿಕ ಪರಂಪರೆ ಸದಾ ಆಚರಣೆ ಮತ್ತು ಅನುಭವವನ್ನು ಬಯಸುವಂಥದ್ದು ಹಾಗೂ ಹಾಗಾಗುವಾಗ ಮತ್ತೆ ಮತ್ತೆ ಪರಿಷ್ಕರಣೆಗೆ ಒಳಗಾಗುವಂಥದ್ದು. ಚೋದ್ಯವೆಂದರೆ, ದೇಸಿಯನ್ನು ಆಕರವಾಗಿ ಪಡೆದಮಾರ್ಗ'ವು ಈ ಅಂಶವನ್ನು ಸಂಪೂರ್ಣವಾಗಿ ಮರೆತು ಅಹಂಕಾರ ಹಾಗೂ ಪ್ರತಿಭಟನೆಗಳಿಂದಾಗಿ ಶ್ರೇಷ್ಠತೆಯ ವ್ಯಸನ ಬೆಳೆಸಿಕೊಳ್ಳುವುದು. ದೇಸಿ ಲೋಕಕೇಂದ್ರಿತ, ಸಾಮುದಾಯಿಕ ಕಾಣ್ಕೆ ಕೇಂದ್ರಿತವಾಗಿರುತ್ತಲೇ ಕುಲಕಸುಬು, ಕುಲಪದ್ಧತಿಗಳ ಕುರಿತೂ ಗಮನ ಹರಿಸುತ್ತದೆ. ಆದರೆ, ವ್ಯಕ್ತಿಕೇಂದ್ರಿತವಾದ
ಮಾರ್ಗ’ವು ಈ ಸಾವಯವ ಸಮಗ್ರ ದೃಷ್ಟಿಕೋನ ಕಳೆದುಕೊಂಡು ಶ್ರೇಷ್ಠತೆಯ ವ್ಯಸನ ಬೆಳೆಸಿಕೊಳ್ಳುತ್ತದೆ. ಈ ಅಂಶಗಳು ಲೇಖನದಲ್ಲಿ ಚೆನ್ನಾಗಿ ಪ್ರತಿಫಲನಗೊಂಡಿವೆ. ಇದೇ ರೀತಿ ಚೀಮನಹಳ್ಳಿ ರಮೇಶಬಾಬು ಅವರ ಕಾದಂಬರಿ `ಮಂಪರು’ ವಿಶ್ಲೇಷಣಾ ವಿಧಾನವೂ ಓದುಗರು ಕಾದಂಬರಿಯನ್ನು ಪ್ರವೇಶಿಸಲು, ನಿಧಾನಗತಿಯಲ್ಲಿ ಅರಿತುಕೊಳ್ಳುವ ಬಗೆಯನ್ನು ತಿಳಿಸಿಕೊಡುತ್ತದೆ.
ಹಿಂದೆ ಹೇಳಿದಂತೆ ಪುಸ್ತಕದ ಎರಡನೆಯ ಭಾಗದಲ್ಲಿ ಸಂಸ್ಕೃತಿಯನ್ನು ಒಳಗೊಳ್ಳುವ ಅನೇಕ ವಿಷಯಗಳಿವೆ. ಕ್ಷೇತ್ರಾಧ್ಯಯನ, ಮಾತುಕತೆ ಮತ್ತು ಚಿಂತನೆಗಳನ್ನು ಆಧರಿಸಿರುವ ಈ ಬರಹಗಳು ಅಪರೂಪದ ಒಳನೋಟಗಳನ್ನು ಹೊಂದಿವೆ. ಮಳವಳ್ಳಿ ಪರಿಸರದ ಕುರಿತು ಮಾತನಾಡುವ ಮೂರು ಪ್ರಬಂಧಗಳು ಓದುಗರಿಗೆ ಅಲ್ಲಿನ ಭಾಷೆ, ನಂಬಿಕೆ ಮತ್ತು ಆಚರಣೆ, ಕುಲಕಸುಬುಗಳ ಬಗೆಗೆ ಹೊಸ ವಿಷಯಗಳನ್ನು ತಿಳಿಸಿಕೊಡುತ್ತವೆ.
ನಿಧಾನಗತಿಯ ಓದಿನ ಅಭಿರುಚಿಯನ್ನು ಸೂಚಿಸುವ ಮತ್ತು ಅಂತಹ ವಿಶ್ಲೇಷಣಾತ್ಮಕ ಓದಿನ ಪ್ರತಿಫಲವನ್ನು ಎತ್ತಿ ತೋರಿಸುವ ಶಿವಣ್ಣ ಅವರ ಈ ಹೊಸ ಪುಸ್ತಕ ಸಹೃದಯ ಓದುಗರ ಮನಸ್ಸನ್ನು ಅರಳಿಸಬಲ್ಲ ಶಕ್ತಿಯನ್ನು ಪಡೆದಿವೆ. ಹಾಗಾದಾಗ ಹೊಸ ಓದುಗರು, ಅದರಲ್ಲಿಯೂ ಸಾಹಿತ್ಯ ವಿದ್ಯಾರ್ಥಿಗಳು ಸಹೃದಯತೆಯಿಂದ ಕೃತಿ ಪ್ರವೇಶ ಮಾಡುವುದು ಹೇಗೆಂದು ಅರಿಯುವರು.
- ಕೇಶವ ಮಳಗಿ (ಮುನ್ನುಡಿ)