ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ ನೀಡುವ ವಿದ್ಯಾರ್ಥಿವೇತನವನ್ನು ಶೀಘ್ರವೇ ಬಿಡುಗಡೆ ಮಾಡಡುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ವತಿಯಿಂದ ಕಲಬುರಗಿ ಗ್ರಾಮೀಣ ವಿಧಾನಸಭಾ ಮತಕ್ಷೇತ್ರದ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೂಡ ಅವರ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿದರು.
ಕಲಬುರಗಿ ಜಿಲ್ಲೆಯ ಶಹಾಬಾದ್ ತಾಲೂಕು ಸಮಿತಿ ಅಧ್ಯಕ್ಷ ರಾಮು ಜಾಧವ್ ಮಾತನಾಡಿ, “ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಪೆಡರೇಷನ್ ಕರೆಯ ಮೇರೆಗೆ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ನೋಂದಾಯಿತರಾದ ಕಟ್ಟಡ ಕಾರ್ಮಿಕರ ಮಕ್ಕಳಿಗೆ ಪ್ರತಿ ವರ್ಷ ಶೈಕ್ಷಣಿಕ ಧನಸಹಾಯವನ್ನು ನೀಡುತ್ತಿದ್ದು, ಕಳೆದ ಎರಡ್ಮೂರು ವರ್ಷಗಳಿಂದ ಯಾವುದೇ ರೀತಿಯ ವಿದ್ಯಾರ್ಥಿವೇತನ ನೀಡಿರುವುದಿಲ್ಲ” ಎಂದರು.
“ಕಟ್ಟಡ ಕಾರ್ಮಿಕರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕಲ್ಯಾಣ ಮಂಡಳಿಯಿಂದ ವಿದ್ಯಾರ್ಥಿವೇತನ ಧನಸಹಾಯವನ್ನು ಪಡೆಯಲು ಸೇವಾಸಿಂಧು ಹಾಗೂ ರಾಜ್ಯ ವಿದ್ಯಾರ್ಥಿವೇತನ ತಂತ್ರಾಂಶದದ ಮೂಲಕ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಕಾರ್ಮಿಕ ಇಲಾಖೆ ಸದರಿ ಅರ್ಜಿಗಳನ್ನು ಪರಿಶೀಲಿಸಿ ಮಂಜೂರು ಮಾಡಿದ್ದು, ಕಲ್ಯಾಣ ಮಂಡಳಿಯು ಬೋಗಸ್ ಕಾರ್ಮಿಕರ ಸಂಖ್ಯೆ ಹೆಚ್ಚಳ ಎನ್ನುವ ಕಾರಣದ ನೆಪವೊಡ್ಡಿ, ನೈಜ ಕಟ್ಟಡ್ಡ ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ಧನಸಹಾಯ ಮೊತ್ತವನ್ನು ಬಿಡುಗಡೆ ಮಾಡದೇ ವಿಳಂಬ ನೀತಿ ಅನುಸರಿಸಿ ಬಡ ಕಟ್ಟಡ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ ಉಂಟಾಗಿದೆ” ಎಂದು ಆರೋಪಿಸಿದರು.
“ಈ ಕುರಿತು ರಾಜ್ಯ ಫೆಡರೇಷ್ ಸಮಿತಿಯ ನೇತೃತ್ವದಲ್ಲಿ ಹಲವು ಬಾರಿ ಹೋರಾಟ-ಪ್ರತಿಭಟನೆಗಳನ್ನು ಮಾಡಿ, ಕಾರ್ಮಿಕ ಸಚಿವರೊಂದಿಗೆ ಸಭೆ, ಮಂಡಳಿಯ ಜಂಟಿ ಕಾರ್ಯದರ್ಶಿಯವರೊಂದಿಗೆ ಮಾತುಕತೆ ನಡೆಸಿದರೂ ಕೇವಲ ಆಶ್ವಾಸನೆ ನೀಡಿದ್ದಾರೆಯೇ ಹೊರತು, ಈವರೆಗೂ ಕಲ್ಯಾಣ ಮಂಡಳಿಯಿಂದ ಶೈಕ್ಷಣಿಕ ಧನಸಹಾಯ ಮೊತ್ತವನ್ನು ಬಹಳ ಮಂದಿ ಕಾರ್ಮಿಕರ ಖಾತೆಗೆ ಜಮಾ ಮಾಡದೆ ಬಾಕಿ ಉಳಿದಿರುತ್ತದೆ” ಎಂದರು.
“ನೋಂದಾಯಿತ ಕಟ್ಟಡ ನಿರ್ಮಾಣ ಕಾರ್ಮಿಕರ ಮಕ್ಕಳಿಗೆ 2021-22 ಹಾಗೂ 2022-23 ನೇ ಸಾಲಿನ ಕಲ್ಯಾಣ ಮಂಡಳಿಯಲ್ಲಿ ಬಾಕಿಯಿರುವ ವಿದ್ಯಾರ್ಥಿವೇತನ ಮೋತ್ತವನ್ನು ಶೀಘ್ರವೆ ಬಿಡುಗಡೆ ಮಾಡಿಸಿ ಕಟ್ಟಡ ಕಾರ್ಮಿಕರ ಖಾತೆಗೆ ಜಮೆ ಮಾಡಬೇಕು” ಎಂದು ಒತ್ತಾಯಿಸಿದರು.
“ಕಲ್ಯಾಣ ಮಂಡಳಿಯಲ್ಲಿ ಸಾವಿರಾರು ಕೋಟಿ ರೂಪಾಯಿ ಸಂಗ್ರಹವಿದ್ದರೂ ಬಡ ಕಾರ್ಮಿಕರ ಮಕ್ಕಳಿಗೆ ಕೊಡುತ್ತಿರುವ ಶೈಕ್ಷಣಿಕ ಧನಸಹಾಯ ಮೊತ್ತವನ್ನು ಕಡಿತಗೊಳಿಸಲಾಗಿದೆ. ಮಾತ್ರವಲ್ಲ ಕಡಿತಗೊಳಿಸರುವ ಮೊತ್ತವನ್ನು ಕಾರ್ಮಿಕರ ಖಾತೆಗೆ ಜಮೆ ಮಾಡುತ್ತಿಲ್ಲ. ಈ ಹಿಂದೆ 2020-21ರ ಮಾರ್ಗಸೂಚಿಯಂತೆ ಶೈಕ್ಷಣಿಕ ಧನಸಹಾಯ ಮೊತ್ತವನ್ನು ನೀಡಬೇಕು ಹಾಗೂ 1ನೇ ತರಗತಿಂದ 10ನೇ ತರಗತಿವರೆಗೆ ಈ ಹಿಂದೆ ನೀಡುತ್ತಿದ್ದಂತೆ ಶೈಕ್ಷಣಿಕ ಧನಸಹಾಯ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು” ಎಂದು ಆಗ್ರಹಿಸಿದರು.
“ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರದ ಶಾಸಕರ ಮೂಲಕ ಮುಖ್ಯಮಂತ್ರಿ ಗಮನ ಸೆಳೆಯಲು ಕಟ್ಟಡ ಕಾರ್ಮಿಕರ ಮಕ್ಕಳಾದ ನಾವು ನಮ್ಮ ಪೋಷಕರ ಸಂಘದ ಪರವಾಗಿ ಮನವಿ ನೀಡುತ್ತಿದ್ದು, ತಾವು ಕಾರ್ಮಿಕರ ಪರವಾಗಿ ಕಲ್ಯಾಣ ಮಂಡಳಿಗೆ ಶೀಘ್ರ ಪಾವತಿಗೆ ಕ್ರಮ ವಹಿಸಲು ಆದೇಶಿಸಬೇಕು” ಎಂದು ಮನವಿ ಮಾಡಿದರು.
ಈ ಸುದ್ದಿ ಓದಿದ್ದೀರಾ? ಗುಬ್ಬಿ | ಬಡ್ಡಿ ದಂಧೆಗೆ ಮತ್ತೋರ್ವ ಬಲಿ : ನಿಟ್ಟೂರು ವಾಸಿ ನೇಣಿಗೆ ಶರಣು; ಆತಂಕದಲ್ಲಿ ಜನತೆ
ಈ ಸಂದರ್ಭದಲ್ಲಿ ಪ್ರಧಾನ ಕಾರ್ಯದರ್ಶಿ ನಾಗಪ್ಪ ರಾಯಚೂರಕರ್, ಪ್ರಕಾಶ ಕುಸಾಳೆ, ಶಿವರಾಮ್ ಚಹ್ವಾಣ್, ರವಿ ಬೆಳಮಗಿ, ಲಕ್ಷ್ಮೀಕಾಂತ, ಶಿವಶರಣಪ್ಪ, ರಾಜು, ಕಮಲಬಾಯಿ, ನಾಮದೇವ ಸೇರಿದಂತೆ ಇತರರು ಇದ್ದರು.
