ರೈತರ ಸಮಸ್ಯೆಗಳ ಬಗ್ಗೆ ನಿರ್ಲಕ್ಷ ಸಲ್ಲದು. ರೈತರ ನ್ಯಾಯಯುತ ಬೇಡಿಕೆಗಳ ಬಗ್ಗೆ ಸಭೆ ನಡೆಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಗ್ರಹಿಸಿದರು.
ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿಯವರನ್ನು ಮಂಗಳವಾರ ಭೇಟಿ ಮಾಡಿದ ರೈತಸಂಘ, ಕನ್ನಡಪರ ಸಂಘಟನೆ ಹಾಗೂ ದಲಿತಪರ ಸಂಘಟನೆಗಳ ನಿಯೋಗವು, ಜಿಲ್ಲಾಧಿಕಾರಿಯ 144 ಸೆಕ್ಷನ್ ಜಾರಿಯ ಅಸಾಂವಿಧಾನಿಕ ಆದೇಶವನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.
ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರ ಕುಮಾರಸ್ವಾಮಿ ಮಾತನಾಡಿ, ಚಳುವಳಿಗೆ ಬಹು ಪಾವಿತ್ರ್ಯಮಯ ಇತಿಹಾಸ ಇದೆ. ಅದನ್ನು ಹತ್ತಿಕ್ಕುವ ಮನಸ್ಥಿತಿ ಸಂವಿಧಾನಕ್ಕೆ ಮಾರಕ. ಅದನ್ನು ತಕ್ಷಣ ವಾಪಾಸ್ ಪಡೆಯುವಂತೆ ತಾವು ನಿರ್ದೇಶನ ನೀಡಬೇಕು ಎಂದರು.

ರಾಜ್ಯ ಗೌರವಾಧ್ಯಕ್ಷರಾದ ಚಾಮರಸ ಮಾಲಿ ಪಾಟೀಲ ಮಾತನಾಡಿ, ನೆನ್ನೆ ನಡೆದ ಹೋರಾಟದಲ್ಲಿ ರೈತ ಮಹಿಳೆಯರ ವಿರುದ್ಧ ಉದ್ದಟತನ ಪ್ರದರ್ಶಿಸಿದ, ಅವಹೇಳನಕಾರಿಯಾಗಿ ಮಾತನಾಡಿದ ಡಿವೈಎಸ್‌ಪಿ ದಿನಕರ್ ಶೆಟ್ಟಿಯನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿ ಎಂದು ಆಗ್ರಹಿಸಿದರು.
ರೈತ ನಿಯೋಗದ ಮನವಿ ಸ್ವೀಕರಿದ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ, ರಶ್ಮಿ, ಕಂದಾಯ ಇಲಾಖೆಯ ಕಾರ್ಯದರ್ಶಿ ರೈತರ 32 ಬೇಡಿಕೆಗಳ ರೈತ ನಾಯಕರ ಸಮ್ಮುಖದಲ್ಲಿ ಸಭೆ ನಡೆಸಿ ಸಾಧಕ ಭಾದಕಗಳ ಬಗ್ಗೆ ವರದಿ ಪಡೆದು ಪರಿಹಾರ ಒದಗಿಸುವ ನಿಟ್ಟಿನಲ್ಲಿ ಈಗಲೇ ಸೂಚಿಸುತ್ತೇನೆ. 144 ಸೆಕ್ಷನ್ ನಿಷೇದಾಗ್ನೆ ಬಗ್ಗೆ ಜಿಲ್ಲಾಧಿಕಾರಿಯ ಜೊತೆ ಚರ್ಚಿಸಿ ವಾಪಾಸ್ ಪಡೆಯುವಂತೆ ಸೂಕ್ತ ನಿರ್ದೇಶನ ನೀಡುತ್ತೇನೆ. 15 ದಿನಗಳ ಒಳಗಾಗಿ ಎಲ್ಲಾ ತೊಡಕುಗಳ ಬಗ್ಗೆ ಕಾನೂನು ತಜ್ಞರೊಡನೆ ಚರ್ಚಿಸಿ ಪರಿಹಾರ ಒದಗಿಸುವುದಾಗಿ ಭರವಸೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ಮದ್ದೂರು ಪುರಸಭೆಯಲ್ಲಿ 17 ವರ್ಷಗಳ ಬಳಿಕ ಗದ್ದುಗೆ ಏರಿದ ಕಾಂಗ್ರೆಸ್
ರೈತ ಸಂಘದ ವಿಭಾಗೀಯ ಉಪಾಧ್ಯಕ್ಷ ಮಲ್ಲಯ್ಯ, ಸಂಚಾಲಕ ಮುನಿರಾಜು, ರಾಮನಗರ ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಕರವೇ ಪ್ರವೀಣ್ ಶೆಟ್ಟಿ ಬಣ ಜಿಲ್ಲಾಧ್ಯಕ್ಷ ರಾಜು ಎಂ ಎನ್ ಆರ್, ಕರವೇ ಸ್ವಾಭಿಮಾನಿ ಬಣದ ರಾಜ್ಯ ಉಸ್ತುವಾರಿ ಶಿವುಗೌಡ, ಕೆಆರ್‌ಎಸ್ ಪಕ್ಷದ ಮುಖಂಡ ಪ್ರಶಾಂತ್ ಹೊಸದುರ್ಗ, ಸ್ವತಂತ್ರ ಕರ್ನಾಟಕ ಜಿಲ್ಲಾಧ್ಯಕ್ಷ ಕನ್ನಡ ಭಾಸ್ಕರ್, ಕರವೇ ಕಾರ್ಯಧ್ಯಕ್ಷ ಲೋಕೇಶ್ ಆರ್ ಬಿ ಎಲ್, ರೈತಸಂಘದ ಚಂದ್ರು ಉಪಸ್ಥಿತರಿದ್ದರು.