ಬೀದರ ಜಿಲ್ಲೆಯ ಬಸವಕಲ್ಯಾಣ ತಾಲ್ಲೂಕಿನ ಗುಣತೀರ್ಥವಾಡಿ ಗ್ರಾಮದ ಕೋಲಿ ಸಮಾಜದ ಭಾಗ್ಯಶ್ರೀ ಯುವತಿಯ ಕೊಲೆ ಪ್ರಕರಣದ ಆರೋಪಿಗಳನ್ನು ಕಠಿಣ ಶಿಕ್ಷೆ ವಿಧಿಸಬೇಕೆಂದು ಆಗ್ರಹಿಸಿ ಮನ್ನಾಏಖೇಳ್ಳಿಯಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಸಿದರು.
ಬೀದರ್ ದಕ್ಷಿಣ ಟೋಕರಿ ಕೋಲಿ ಸಮಾಜದಿಂದ ಚಿಟಗುಪ್ಪ ತಾಲ್ಲೂಕಿನ ಮನ್ನಾಏಖೇಳ್ಳಿಯ ಪ್ರವಾಸಿ ಮಂದಿರದಿಂದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ಸರ್ಕಾರ ಭಾಗ್ಯಶ್ರೀ ಕುಟುಂಬಕ್ಕೆ ನ್ಯಾಯ ಒದಗಿಸಬೇಕೆಂದು ಘೋಷಣೆ ಕೂಗಿದರು. ಬಳಿಕ ರಾಜ್ಯಪಾಲರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ತಹಸೀಲ್ ಕಚೇರಿ ಅಧಿಕಾರಿಗೆ ಸಲ್ಲಿಸಿದರು.
ʼಮಗಳ ಬಗ್ಗೆ ಹಲವು ಕನಸುಗಳನ್ನು ಕಂಡಿದ್ದ ಪೋಷಕರು ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ. ಮಗಳನ್ನು ಕಳೆದುಕೊಂಡ ಪೋಷಕರಿಗೆ ತುಂಬಲಾರದಷ್ಟು ನಷ್ಟವಾಗಿದೆ. ಕೂಡಲೇ ರಾಜ್ಯದ ಮುಖ್ಯಮಂತ್ರಿ, ಗೃಹ ಸಚಿವರು ಭಾಗ್ಯಶ್ರೀ ಪಾಲಕರಿಗೆ ಭೇಟಿ ನೀಡಿ ಸಾಂತ್ವನ ಹೇಳಬೇಕು. ಕುಟುಂಬಕ್ಕೆ 50 ಲಕ್ಷ ರೂಪಾಯಿ, ಮನೆ ಹಾಗೂ 5 ಎಕರೆ ಜಮೀನು ಹಾಗೂ ಸರ್ಕಾರಿ ಹುದ್ದೆ ಕೊಟ್ಟು ಸರ್ಕಾರ ಮಾನವೀಯತೆ ತೋರಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ʼಯುವತಿಯ ತಲೆ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಗಾಯಗಳಿದ್ದು, ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿರಬಹುದು ಎನ್ನುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೆಟ್ಟು ಹೋದ ಕಾರಣ ಇಂತಹ ಅಮಾನವೀಯ ಕೊಲೆ ರಾಜಾರೋಷವಾಗಿ ನಡೆಯುತ್ತವೆ. ಈಗಲಾದರೂ ಸರ್ಕಾರ ಎಚ್ಚೆತುಕೊಂಡ ಮಹಿಳೆಯರ ರಕ್ಷಣೆಗೆ ಕಠಿಣ ಕಾನೂನು ಜಾರಿಗೆ ತರಬೇಕು. ಭಾಗ್ಯಶ್ರೀ ಕೊಲೆಯನ್ನು ಉನ್ನತ ಮಟ್ಟದ ತನಿಖೆ ನಡೆಸಿ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕುʼ ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಟೋಕರಿ ಕೋಲಿ ಸಮಾಜದ ಅಧ್ಯಕ್ಷ ಸನ್ಮುಖಪ್ಪಾ ವಾಲೀಕರ್, ಪ್ರಧಾನ ಕಾರ್ಯದರ್ಶಿ ಗೋವಿಂದ ಜಾಲಿ, ದಲಿತ ಸೇನೆ ಸಂಘಟನೆಯ ಅನೀಲ ಮುದಾಳೆ, ಮುಖಂಡರಾದ ಪುಂಡಲಿಕಪ್ಪ ನಿಂಗನವಾಡ್, ಮಾರುತಿ ಮಾಸ್ಟರ್, ಶರಣಪ್ಪಾ ಅಣ್ಣಾಜಿ, ಅಶೋಕ ಕಾಗೆ, ಸಂತೋಷ ಹಳ್ಳಿಖೇಡಕರ್, ಶಕುಂತಲಾ ಬಿರಾದರ್ ಸಂತೋಷಿ ನಿಡವಂಚಾ ಸೇರಿದಂತೆ ವಿವಿಧ ಸಂಟಟನೆಗಳ ಪ್ರಮುಖರು, ಸ್ಥಳೀಯರು ಪಾಲ್ಗೊಂಡಿದ್ದರು.
ಕಲಬುರಗಿ : ಯುವತಿ ಕೊಲೆ ಖಂಡಿಸಿ ಚಿಂಚೋಳಿಯಲ್ಲಿ ಪ್ರತಿಭಟನೆ :
ಬಸವಕಲ್ಯಾಣ ತಾಲ್ಲೂಕಿನ ಗುಣತೀರ್ಥವಾಡಿ ಗ್ರಾಮದ ಯುವತಿ ಭಾಗ್ಯಶ್ರೀಯ ಕೊಲೆ ಕೃತ್ಯ ಖಂಡಿಸಿ ಕಿಡಗೇಡಿಗಳನ್ನು ಗಲ್ಲಿಗೇರಿಸಿ, ರಾಜ್ಯ ಸರ್ಕಾರವು ಮಹಿಳಾ ರಕ್ಷಣಾ ಯೋಜನೆಯನ್ನು ಜಾರಿಗೆ ತರಲು ಒತ್ತಾಯಿಸಿ ಚಿಂಚೋಳಿ ತಾಲ್ಲೂಕಿನ ಚಂದಾಪುರ ಪಟ್ಟಣದ ತಾಂಡೂರ ಕ್ರಾಸ್‌ನಿಂದ ತಹಸೀಲ್ ಕಚೇರಿವರೆಗೆ ಪ್ರತಿಭಟಿನಾ ಮೆರವಣಿಗೆ ನಡೆಸಲಾಯಿತು.
ತಾಲ್ಲೂಕು ಕೋಲಿ ಸಮಾಜ ಹಾಗೂ ವಿವಿಧ ಸಂಘಟನೆಗಳ ಒಕ್ಕೂಟದ ವತಿಯಿಂದ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳಿಗೆ ಬೇಡಿಕೆ ಪತ್ರವನ್ನು ಸಲ್ಲಿಸಿದರು.

ʼಶರಣರ ನಾಡಿನಲ್ಲಿ ಇಂತಹ ಹೇಯ ಕೃತ್ಯ ನಡೆದಿರುವುದು ಇಡೀ ಮನುಕುಲಕ್ಕೆ ನಾಚಿಕೆಯಾಗುವಂತದ್ದು, ಮೃತ ಬಾಲಕಿಯ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು, ಕುಟುಂಬಸ್ಥರಿಗೆ ಸರ್ಕಾರಿ ನೌಕರಿ, ಹಾಗೂ ಮೃತ ಬಾಲಕಿಯ ಕುಟುಂಬಸ್ಥರಿಗೆ ಸೂಕ್ತ ರಕ್ಷಣೆಯನ್ನು ಒದಗಿಸಬೇಕುʼ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ವಿದ್ಯಾರ್ಥಿಗಳೊಂದಿಗೆ ಅನುಚಿತ ವರ್ತನೆ ಆರೋಪ; ಪ್ರಾಚಾರ್ಯ ವಜಾ
ಪ್ರತಿಭಟನೆಯಲ್ಲಿ ಪ್ರಮುಖರಾದ ಗೋಪಾಲರಾವ ಕಟ್ಟಿಮನಿ, ಲಕ್ಷ್ಮಣ ಆವುಂಟಿ, ಹಣಮಂತ ಪೂಜಾರಿ, ಮಾರುತಿ ಗಂಜಗಿರಿ, ಶರಣು ಪಾಟೀಲ ಮೊತಕಪಳ್ಳಿ,ರೇವಣಸಿದ್ದಪ್ಪ ಅಣಕಲ್, ಗಣಪತರಾವ, ಗುಂಡಪ್ಪ ಅವರಾದಿ, ಶರಣು ನಾಟಿಕಾರ, ಗೋಪಾಲ ಗಾರಂಪಳ್ಳಿ, ಸುರೇಶ ದೇಶಪಾಂಡೆ, ಆನಂದ ಹಿತ್ತಲ, ರಾಜು ತೋಡಿ, ಮೌನೇಶ ಮುಸ್ತರಿ ಸೇರಿದಂತೆ ಇತರರಿದ್ದರು.