ಮಕ್ಕಳಿಗೆ ಸೂಕ್ತ ಪ್ರೇರಣೆ ದೊರೆತರೆ ಪ್ರತಿಭೆಗಳು ಅರಳುತ್ತವೆ ಮತ್ತು ಸಾಧಿಸುವ ಛಲ ಮೂಡುತ್ತದೆ ಎಂದು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಆರ್ ಕೆ ಭೈರಲಿಂಗಯ್ಯ ಅಭಿಮತ ವ್ಯಕ್ತಪಡಿಸಿದರು.
ರಾಮನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಹೋಲಿಕ್ರೆಸೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಾಧಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಮಕ್ಕಳಲ್ಲಿ ಪ್ರತಿಭೆಯನ್ನು ಗುರುತಿಸುವುದು ತಂದೆ-ತಾಯಿ ಹಾಗೂ ಶಿಕ್ಷಕರ ಪ್ರಮುಖ ಕರ್ತವ್ಯವಾಗಿದೆ. ಅಂಕಗಳಿಗಿಂತ ಸಂಸ್ಕಾರಗಳನ್ನು ಬೆಳೆಸುವುದು ಮುಖ್ಯ” ಎಂದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಟಿ ದಿನೇಶ್ ಬಿಳಗುಂಬ ಮಾತನಾಡಿ, “ಪ್ರತಿ ವರ್ಷ ಕನ್ನಡದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತಿದ್ದೇವೆ. ಕನ್ನಡ ಸಾಹಿತ್ಯ ಪರಿಷತ್ ಕನ್ನಡವನ್ನು ಅಜರಾಮರ ಮಾಡಲು ಶ್ರಮಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಗೌರವ ನೀಡಲು ಮುಂದಾಗಿದೆ” ಎಂದು ಹೇಳಿದರು.
ಪ್ರಧಾನ ಅತಿಥಿಯಾಗಿ ಆಗಮಿಸಿದ್ದ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ ಟಿ ನಾಗೇಶ್ ಮಾತನಾಡಿ, “ಸಂಸ್ಕೃತಿಯನ್ನು ಉಳಿಸುವ ಕೆಲಸ ಮುಂದಿನ ತಲೆಮಾರುಗಳಾದ ಇಂದಿನ ವಿದ್ಯಾರ್ಥಿಗಳಿಂದಲೇ ಸಾಧ್ಯ” ಎಂದು ಹೇಳಿದರು.

ಹೋಲಿಕ್ರೆಸೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಅಲ್ತಾಫ್ ಅಹಮದ್ ಮಾತನಾಡಿ, “ಖಾಸಗಿ ಶಾಲೆಗಳಲ್ಲಿ ಕನ್ನಡಕ್ಕೆ ಸೂಕ್ತ ಪ್ರಾಮುಖ್ಯತೆ ಕೊಡಲಾಗುತ್ತಿಲ್ಲ. ಕನ್ನಡವನ್ನು ಜೀವಂತವಾಗಿ ಉಳಿಸಲು ಕನ್ನಡಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹತ್ತು ಮಂದಿ ಫ್ರೌಡಶಾಲಾ ಕನ್ನಡ ಶಿಕ್ಷಕರನ್ನು, 14 ಮಂದಿ ದ್ವಿತೀಯ ಪಿಯುಸಿ ಕನ್ನಡ ವಿದ್ಯಾರ್ಥಿಗಳನ್ನು, 18 ಮಂದಿ ಎಸ್‌ಎಸ್‌ಎಲ್‌ಸಿ ಕನ್ನಡ ವಿದ್ಯಾರ್ಥಿಗಳನ್ನು ಮತ್ತು ಚಿನ್ನದ ಪದಕ ಪಡೆದ ಆರು ಸಾಧಕರನ್ನು ಸನ್ಮಾನಿಸಿದರು.
ಈ ಸುದ್ದಿ ಓದಿದ್ದೀರಾ? ಮಂಗಳೂರು | ಅಪಘಾತದ ವೇಳೆ ತಾಯಿಯನ್ನು ರಕ್ಷಿಸಿದ್ದ ಬಾಲಕಿಗೆ ಜಿಲ್ಲಾಧಿಕಾರಿ ಸನ್ಮಾನ
ಗೌರವ ಕಾರ್ಯದರ್ಶಿಗಳಾದ ಅರುಣ್ ಕವಣಾಪುರ, ಕಿರಣ್ ಎನ್, ಕೋಶಾಧ್ಯಕ್ಷ ನಂಜುಂಡಪ್ಪ ಬಿ ಕೆ, ಸಾಹಿತಿಗಳಾದ ಜಿ ಎಚ್ ರಾಮಯ್ಯ, ವನರಾಜು, ಕರೀಗೌಡರು, ರಾಮಕೃಷ್ಣ ಡಿ, ಸ್ಟ್ಯಾನ್ಲಿ ಪಾಲ್, ನಗರ ಘಟಕದ ಅಧ್ಯಕ್ಷ ಡೈರಿ ವೆಂಕಟೇಶ್, ಕಸಬಾ ಹೋಬಳಿ ಅಧ್ಯಕ್ಷ ಮಹಾದೇವು ಲಕ್ಕಸಂದ್ರ ದೇವರಾಜು ಕ್ಯಾಸಾಪುರ, ಬಿ ಟಿ ರಾಜೇಂದ್ರ, ಸಮಧ್, ಅರುಣ್ ಆನುಮಾನಹಳ್ಳಿ, ಡಾ ಕೃಷ್ಣ ಕೆ ಎಂ, ಮತ್ತಿಕೆರೆ ಚಲುವರಾಜು, ಲೋಕೇಶ್ ಬಿಡದಿ ಇದ್ದರು.