ಇಂದಿನ ಆಧುನಿಕ ಯುಗದಲ್ಲಿ ಕೃಷಿಯಲ್ಲಿ ಲಾಭವಿಲ್ಲ ಎಂದು ಹಳ್ಳಿಯಲ್ಲಿರುವ ಹೊಲ ಮಾರಿ ನಗರಕ್ಕೆ ಸೇರುವವರೇ ಹೆಚ್ಚು. ಅದರಲ್ಲೂ ಬರದ ನಾಡಿನಲ್ಲಿ ಕೃಷಿ ಮಾಡಲು ಬಹುತೇಕರು ಹಿಂದೇಟು ಹಾಕುತ್ತಾರೆ. ಆದರೆ ಅದಕ್ಕೆ ಅಪವಾದ ಎಂಬಂತೆ ಇಲ್ಲೊಬ್ಬ ರೈತ ಕೇವಲ 35 ಗುಂಟೆ ಜಮೀನಿನಲ್ಲಿ ಡ್ರ್ಯಾಗನ್ ಹಣ್ಣು ಬೆಳೆದು ಯಶಸ್ಸು ಕಂಡಿದ್ದಾರೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಮೋರಂಬಿ ಗ್ರಾಮದ ರೈತ ಅನಂತರಾವ್ ಇತಾಪೆ ಅವರು ತಮ್ಮ 35 ಗುಂಟೆ ಜಮೀನಿನಲ್ಲಿ ವಿದೇಶಿ ಮೂಲದ ಡ್ರ್ಯಾಗನ್ ಹಣ್ಣು ಬೆಳೆಯುತ್ತಿದ್ದು, ಕಡಿಮೆ ಖರ್ಚಿನಲ್ಲಿ ವರ್ಷಕ್ಕೆ ಲಕ್ಷ ಲಕ್ಷ ಆದಾಯ ಗಳಿಸುತ್ತಿದ್ದಾರೆ.
ಕೃಷಿಕ ಅನಂತರಾವ್ 8-10 ಎಕರೆ ಜಮೀನಿನಲ್ಲಿ ಸಾಂಪ್ರದಾಯಿಕ ಬೆಳೆಗಳಾದ ಸೋಯಾಬಿನ್, ತೊಗರಿ, ಹೆಸರು, ಉದ್ದು ಬೆಳೆಯುತ್ತಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಮಗ, ಅನಂತರಾವ್ ಅವರಿಗೆ ಡ್ರ್ಯಾಗನ್ ಪ್ರೂಟ್ ಬೇಸಾಯದ ಕುರಿತು ತಿಳಿಸಿದ. ಆದರೆ, ತಂದೆಗೆ ಡ್ರ್ಯಾಗನ್ ಬೇಸಾಯ ಕುರಿತು ಆಸಕ್ತಿ ಇರದಿದ್ದರೂ ಮಗನ ಇಚ್ಛೆಯಂತೆ 35 ಗುಂಟೆಯ ಜಾಗದಲ್ಲಿ ಡ್ರ್ಯಾಗನ್ ಹಣ್ಣು ಸಸಿಗಳನ್ನು ನಾಟಿ ಮಾಡಿದ್ದರು.

ಮೊದಲ ಬಾರಿಗೆ 2021ರಲ್ಲಿ ತೆಲಂಗಾಣದ ಸಂಗಾರೆಡ್ಡಿಯಿಂದ ಒಂದು ಸಸಿಗೆ ತಲಾ 90 ರೂಪಾಯಿಯಂತೆ ಒಟ್ಟು 2000 ಡ್ರ್ಯಾಗನ್ ಸಸಿಗಳನ್ನು ಖರೀದಿಸಿ, ನಾಟಿ ಮಾಡಿದ್ದಾರೆ. ಗಿಡ ನೆಟ್ಟಗೆ ನಿಂತು ಹರಡಿಕೊಳ್ಳಲು ನಾಲ್ಕು ಸಸಿಗೆ ಒಂದರಂತೆ 500 ಸಿಮೆಂಟ್ ಕಂಬಗಳನ್ನು ಹಾಕಿದ್ದಾರೆ. ಗಿಡಕ್ಕೆ ಹನಿ ನೀರಾವರಿ ಪೈಪ್ ಹಾಕಿಸಿದ್ದಾರೆ. ಆರಂಭದಿಂದಲೂ ಸಂಪೂರ್ಣ ಸಾವಯವ ಗೊಬ್ಬರ ಬಳಸಿ ಕೃಷಿಯಲ್ಲಿ ಸೈ ಎನಿಸಿಕೊಂಡಿದ್ದಾರೆ.
ಮನರೇಗಾ ನೆರವು :
ʼಜಮೀನಿನಲ್ಲಿ ಕೊಳವೆ ಬಾವಿ, ಪೈಪ್‌ಲೈನ್ ಸೇರಿದಂತೆ ಮೊದಲಿಗೆ ಒಂದು ಡ್ರ್ಯಾಗನ್ ಒಂದು ಸಸಿಗೆ ಕನಿಷ್ಠ ಒಟ್ಟು 600 ರೂ.ಗಿಂತ ಅಧಿಕ ಖರ್ಚಾಗಿದೆ. ಗ್ರಾಮ ಪಂಚಾಯಿತಿಯಿಂದ ಮನರೇಗಾ ಯೋಜನೆಯಡಿ ಆರ್ಥಿಕ ನೆರವು ನೀಡಿದ್ದರು. ಉಳಿದ ಸ್ವಂತ ಹಣ ಹೂಡಿ, ಆರಂಭದಲ್ಲಿ 8 ರಿಂದ 10 ಲಕ್ಷ ರೂಪಾಯಿ ಖರ್ಚು ಮಾಡಿದ್ದೇನೆ. ಕಳೆದ ಮೂರು ವರ್ಷಗಳಿಂದ ಶ್ರಮದಿಂದ ದುಡಿದು ಬೆಳೆದ ಬೆಳೆ ಕೊನೆಗೂ ಕೈ ಹಿಡಿದಿದ್ದು, ಬಂಡವಾಳ ಹಾಕಿದ ಅಷ್ಟೂ ಹಣ ವಾಪಸ್ ಬಂದಿದೆʼ ಎಂದು ಅನಂತರಾವ್ ಸಂತಸದಿಂದ ಮಾಹಿತಿ ಹಂಚಿಕೊಂಡರು.
ಒಮ್ಮೆ ನಾಟಿ ಮಾಡಿದರೆ 30 ವರ್ಷ ಆದಾಯ :
ʼಡ್ರ್ಯಾಗನ್ ಫ್ರೂಟ್ ಸಸಿ ಕಾಯಿ ಬಿಟ್ಟ 25 ದಿನಗಳ ನಂತರ ಕಟಾವು ಮಾಡಲಾಗುತ್ತದೆ. ಮಾರುಕಟ್ಟೆಯಲ್ಲಿ ಒಂದು ಕೆಜಿ ಹಣ್ಣಿನ ದರ 90 ರಿಂದ 100 ರೂಪಾಯಿ ಇದೆ. ಆದರೆ, ನನಗೆ ಮಾರಾಟದ ಬಗ್ಗೆ ಚಿಂತೆಯಿಲ್ಲ. ತೆಲಂಗಾಣದ ಹೈದ್ರಾಬಾದ್ ವ್ಯಾಪಾರಿಗಳು, ಸ್ಥಳೀಯರು ತೋಟಕ್ಕೆ ಖುದ್ದು ಬಂದು ಡ್ರ್ಯಾಗನ್ ಹಣ್ಣು ಖರೀದಿಸುತ್ತಾರೆ. ಇದೀಗ ಹಣ್ಣಿನ ತೋಟಗಾರಿಕೆ ಕೃಷಿಯಲ್ಲಿ ಲಕ್ಷಗಟ್ಟಲೇ ಆದಾಯ ಸಿಗುತ್ತಿದೆ. ಒಮ್ಮೆ ಡ್ರ್ಯಾಗನ್ ಫ್ರೂಟ್ ಕೃಷಿ ಮಾಡಿದರೆ ಸುಮಾರು 30 ವರ್ಷಗಳ ತನಕ ಇರುತ್ತದೆ. ವರ್ಷಗಳು ಕಳೆದಂತೆ ನಿರ್ವಹಣೆ ಖರ್ಚು ಕಡಿಮೆ, ಲಾಭ ದುಪ್ಪಟಾಗುತ್ತದೆʼ ಎಂದು ಹೇಳುತ್ತಾರೆ ಕೃಷಿಕ ಅನಂತರಾವ್.

ಕಡಿಮೆ ಖರ್ಚು ಆದಾಯ ದುಪ್ಪಟ್ಟು :
ʼಈ ಬೆಳೆಯಲ್ಲಿ ಅನಗತ್ಯ ಖರ್ಚು ಇಲ್ಲ. ಡ್ರ್ಯಾಗನ್ ಫ್ರೂಟ್ ಬೆಳೆಗೆ ರೋಗಬಾಧೆ ಕಡಿಮೆ, ನೀರಿನ ಬಳಕೆಯ ಪ್ರಮಾಣವೂ ಕಡಿಮೆ ಇದೆ. ಹೀಗಾಗಿ ಬರದ ನಾಡಿನಲ್ಲಿಯೂ ಬೆಳೆಯಬಹುದು. ಇನ್ನು ಹೆಚ್ಚು ಕೀಟನಾಶಕಗಳ ಬಳಕೆಯೂ ಅಗತ್ಯವಿಲ್ಲ. ನಮ್ಮ ಹೊಲದ ಕೊಟ್ಟಿಗೆಯಲ್ಲೇ ತಯಾರಾಗುವ ಸಗಣಿ ಗೊಬ್ಬರ ಬಳಸುತ್ತೇವೆ. ನಮ್ಮಲ್ಲಿ ಗುಲಾಬಿ ಬಣ್ಣದ ಹಣ್ಣು ಬೆಳೆಯುತ್ತೇವೆ. ಇದು ಆರೋಗ್ಯಕ್ಕೂ ಉತ್ತಮ ಎನ್ನುತ್ತಾರೆ. ಹೀಗಾಗಿ ಹೆಚ್ಚಿನ ಬೇಡಿಕೆಯಿದೆ. ತಿಂಗಳಿಗೊಮ್ಮೆ 2 ಟನ್‌ನಷ್ಟು ಫಸಲು ಬರುತ್ತದೆʼ ಎಂದು ಅನಂತರಾವ್ ವಿವರಿಸುತ್ತಾರೆ.
ವರ್ಷದಲ್ಲಿ ಐದು ಬಾರಿ ಫಸಲು :
ಈ ಹಣ್ಣಿನ ಗಿಡಗಳನ್ನು ನಾಟಿ ಮಾಡಿದ ವರ್ಷದೊಳಗೆ ಫಸಲು ಬಿಡಲು ಆರಂಭವಾಗಿತ್ತು. ಪ್ರತಿ ವರ್ಷ ಮೇ ತಿಂಗಳಿಂದ ಫಸಲು ಕೊಡಲು ಶುರುವಾದರೆ, ಅಕ್ಟೋಬರ್‌ವರೆಗೆ ಒಟ್ಟು ಐದು ಬಾರಿ ಫಸಲು ಬರುತ್ತದೆ. ಎರಡ್ಮೂರು ಹಣ್ಣು ಸೇರಿದರೆ 1ಕೆ.ಜಿ. ತೂಕ ಬರುತ್ತದೆ. ಒಂದು ಬಾರಿಯ ಫಸಲು ಸುಮಾರು 2 ಟನ್‌ನಷ್ಟು ಬರುತ್ತದೆ. ಈ ಕೃಷಿಯಿಂದ ವರ್ಷಕ್ಕೆ ಹತ್ತು ಲಕ್ಷದಷ್ಟು ಹಣ್ಣಿನ ಮಾರಾಟ ಆಗುತ್ತದೆ. ರೈತರು ಅಭಿರುಚಿ ಮತ್ತು ಆಸಕ್ತಿ ಮೂಲಕ ಪ್ರಯತ್ನದಿಂದ ಇಂತಹ ತೋಟಗಾರಿಕೆ ಬೆಳೆಗಳನ್ನು ಬೆಳೆದು ಯಶಸ್ಸು ಕಾಣಬಹುದುʼ ಎಂದು ತಮ್ಮ ಅನುಭವ ಹೇಳುತ್ತಾರೆ.
ಡ್ರ್ಯಾಗನ್ ಫ್ರೂಟ್ ಕೃಷಿ ಕುರಿತು ಹೆಚ್ಚಿನ ಮಾಹಿತಿಗಾಗಿ ಕೃಷಿಕ ಅನಂತರಾವ್ ಅವರನ್ನು ಸಂಪರ್ಕಿಸಬಹುದು. ಅವರ ಮೊಬೈಲ್ ಸಂಖ್ಯೆ : 6362139273

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.