ಕಳೆದ ನಾಲ್ಕೈದು ದಿನಗಳಿಂದ ಚಿಕ್ಕಬಳ್ಳಾಪುರ ನಗರಸಭಾ ಜೆಡಿಎಸ್ ಸದಸ್ಯರಾದ ವೀಣಾ ರಾಮು, ಮಟಮಪ್ಪ ಅವರು ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದಾರೆ. ಇದು ಜೆಡಿಎಸ್ ನಾಯಕರಲ್ಲಿ ಆತಂಕ ಮೂಡಿಸಿದ್ದು, ಚಿಕ್ಕಬಳ್ಳಾಪುರ ನಗರಸಭೆಯ ಅಧಿಕಾರ ಕೈತಪ್ಪುವ ಆತಂಕದಲ್ಲಿದ್ದಾರೆ.
ಜೆಡಿಎಸ್ ಬೆಂಬಲಿತ ಸದಸ್ಯರು ನಾಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬುಧವಾರ ಚಿಕ್ಕಬಳ್ಳಾಪುರದಲ್ಲಿ ದಿಢೀರ್ ಸುದ್ದಿಗೋಷ್ಠಿ ನಡೆಸಿರುವ ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ, ಜೆಡಿಎಸ್ ಸದಸ್ಯರು ಸಂಪರ್ಕಕ್ಕೆ ಲಭ್ಯರಾಗಿಲ್ಲ. ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿಯವರ ಆದೇಶದಂತೆ ವಿಪ್ ಜಾರಿಗೊಳಿಸಿ, ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
“ಮಟಮಪ್ಪ ಮತ್ತು ವೀಣಾ ರಾಮು ಅವರು ಇಷ್ಟು ದಿನಗಳಿಂದ ಪಕ್ಷದ ಎಲ್ಲ ಸಭೆಗಳಲ್ಲೂ ನಮ್ಮೊಂದಿಗಿದ್ದು, ಸಹಮತ ಸೂಚಿಸಿದ್ದರು. ಇದೀಗ ಇದ್ದಕ್ಕಿದ್ದಂತೆ ಸಂಪರ್ಕಕ್ಕೆ ಸಿಗದಂತಾಗಿದ್ದಾರೆ. ಇದಕ್ಕೆ ಕಾರಣ ತಿಳಿದಿಲ್ಲ. ಆದರೆ, ಅವರಿಬ್ಬರು ಎನ್‌ಡಿಎ ಒಕ್ಕೂಟ ಸೂಚಿಸುವ ಅಭ್ಯರ್ಥಿಗೆ ಮತ ನೀಡುತ್ತಾರೆ ಎಂಬ ಪೂರ್ಣ ವಿಶ್ವಾಸವಿದೆ ಎಂದು ನಂಬಿಕೆ ವ್ಯಕ್ತಪಡಿಸಿದ್ದಾರೆ.

ಜೆಡಿಎಸ್ ಪಕ್ಷದ ಸಹಕಾರದಿಂದ ಮಟಮಪ್ಪ, ವೀಣಾ ರಾಮು ಅವರು ಗೆದ್ದಿದ್ದಾರೆ. ಅದರಂತೆ ನಾಳೆ ನಡೆಯುವ ಅಧ್ಯಕ್ಷ-ಉಪಾಧ್ಯಕ್ಷರ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗೆ ಬೆಂಬಲ ಕೊಡಬೇಕು. ಒಂದು ವೇಳೆ ಅವರ ನಿರ್ಧಾರಗಳು ಬದಲಾದರೆ ಪಕ್ಷದ ಮುಖಂಡರೆಲ್ಲರೂ ಸಭೆ ಸೇರಿ ಮುಂದಿನ ತೀರ್ಮಾನ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ಶಿವಮೊಗ್ಗ | ರಾಗಿಗುಡ್ಡ ಬಡಾವಣೆಯಲ್ಲಿ ಹಿಂದೂ–ಮುಸ್ಲಿಮರ ಸೌಹಾರ್ದತೆಗೆ ಸಾಕ್ಷಿಯಾದ ಗಣೇಶೋತ್ಸವ
ಜಿಲ್ಲಾ ಕಾರ್ಯದರ್ಶಿ ಕೆ.ಆರ್.ರೆಡ್ಡಿ ಮಾತನಾಡಿ, ರಾಜ್ಯಾಧ್ಯಕ್ಷರು ಈಗಾಗಲೇ ವಿಪ್ ಜಾರಿಗೊಳಿಸಲು ಆದೇಶ ನೀಡಿದ್ದಾರೆ. ಅದರಂತೆ ವಿಪ್ ಜಾರಿಗೊಳಿಸುತ್ತೇವೆ. ಅವರ ತೀರ್ಮಾನ ಏನಿದೆ ಎಂಬುದನ್ನು ನಾಳೆಯವರೆಗೆ ಕಾದುನೋಡಬೇಕಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುನಿರಾಜು ಕೊಳವನಹಳ್ಳಿ, ಕಿಸಾನ್ ಕೃಷ್ಣಪ್ಪ, ಶಿಲ್ಪಾ ಗೌಡ ಹಾಗೂ ಇತರರಿದ್ದರು.
ಈ ಬಾರಿ ನಗರಸಭೆ ಅಧ್ಯಕ್ಷ ಸ್ಥಾನ ಸಾಮಾನ್ಯ ಅಭ್ಯರ್ಥಿಗೆ ಮೀಸಲಿರಿಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟರಿಗೆ ಮೀಸಲಾಗಿದೆ. ನಾಳೆಯೇ(ಸೆ.12ರಂದು) ನಗರಸಭೆ ಚುನಾವಣೆ ನಡೆಯಲಿದೆ.
