ಸ್ಥಳೀಯ ಆಹಾರ ಪದ್ಧತಿ ಹಾಗೂ ಸಂಸ್ಕೃತಿಗೆ ತಕ್ಕಂತೆ ಪೌಷ್ಟಿಕ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಸೌಕರ್ಯ ಒದಗಿಸುವಂತೆ ಜನವೇದಿಕೆಯ ಪದಾಧಿಕಾರಿಗಳು ಆಗ್ರಹಿಸಿದರು.
ಅಂಗನವಾಡಿ ಕೇಂದ್ರಗಳಿಗೆ ಮೂಲ ಸೌಕರ್ಯ ಕಲ್ಪಿಸುವುದು ಸೇರಿದಂತೆ ನಾನಾ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಜಿಲ್ಲೆಯ ಜನವೇದಿಕೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವ ಲಕ್ಷ್ಮೀ ಹೆಬ್ಬಾಳಕರ್‌ಗೆ ಮನವಿ ಸಲ್ಲಿಸಿ, ಜನವೇದಿಕೆ ನಡೆಸಿದ ಸಮೀಕ್ಷೆ ಆಧಾರದ ಮೇಲೆ ಮಂಡಿಸಲಾದ ಹಕ್ಕೊತ್ತಾಯಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು.
ಅಂಗನವಾಡಿಗಳಿಗೆ ಹೊಸ ಕಟ್ಟಡ ನಿರ್ಮಾಣಕ್ಕೆ ಪ್ರತ್ಯೇಕ ಬಜೆಟ್ ಹಂಚಿಕೆ ಮಾಡಬೇಕು, ಕಟ್ಟಡಗಳ ತೀವ್ರ ಕೊರತೆ ಹೊಂದಿರುವ ನಗರ ಪ್ರದೇಶಗಳಲ್ಲಿರುವ ಅಂಗನವಾಡಿಗಳಿಗೆ ಮೊದಲ ಆದ್ಯತೆ ನೀಡಬೇಕು, ಶುದ್ಧ ನೀರು, ಶೌಚಾಲಯ, ಪ್ರತ್ಯೇಕ ಅಡುಗೆ ಮನೆ, ಸ್ಟೋರ್ ರೂಂ ಒದಗಿಸಬೇಕು, ಖಾಲಿ ಇರುವ ಕಾರ್ಯಕರ್ತೆಯರ ಹಾಗೂ ಸಹಾಯಕಿಯರ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಬೇಕು, ತೂಕದ ಯಂತ್ರ ಹಾಗೂ ಸ್ಟೆಡಿಯೋಮೀಟರ್ ಪೂರೈಸಬೇಕು. ಸ್ಥಳೀಯ ಆಹಾರ ಪದ್ಧತಿ ಹಾಗೂ ಸಂಸ್ಕೃತಿಗೆ ತಕ್ಕಂತೆ ಪೌಷ್ಟಿಕ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಬೇಕು ಎಂದು ಸಚಿವೆಗೆ ಸಲ್ಲಿಸಿದ ಮನವಿಯಲ್ಲಿ ಆಗ್ರಹಿಸಿದ್ದಾರೆ.
ಅಂಗನವಾಡಿ ಕೇಂದ್ರಗಳು ಬೆಳಗ್ಗೆ 9 ರಿಂದ ಮಧ್ಯಾಹ್ನ 1 ರವರೆಗೆ ಕಾರ್ಯನಿರ್ವಹಿಸುತ್ತಿವೆ. ಈ ಸಮಯ ಬದಲಿಗೆ, ಬೆಳಗ್ಗೆ 9 ರಿಂದ ಸಂಜೆ 4 ಗಂಟೆವರೆಗೆ ಕಾರ್ಯನಿರ್ವಹಿಸಲು ಅವಕಾಶ ಕಲ್ಪಿಸಬೇಕು. ಉತ್ತರ ಕನ್ನಡ ಹಾಗೂ ವಿಜಯಪುರ ಜಿಲ್ಲೆಗಳಲ್ಲಿ ಮಾತೃಪೂರ್ಣ ಯೋಜನೆ ಮಾರ್ಗ ಸೂಚಿಗಳನ್ನು ಉಲ್ಲಂಘನೆ ಮಾಡಲಾಗಿದೆ. ಇಲ್ಲಿ ಅಂಗನವಾಡಿ ಕಾರ್ಯಕರ್ತೆಯರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಆಗ್ರಹಿಸಿದರು.
ಮನವಿ ಸಲ್ಲಿಸುವ ವೇಳೆ ಅಕ್ರಂ ಮಾಶ್ಯಾಳಕರ, ಹಮೀದಾ ಪಟೇಲ್, ಮುತ್ತು ಭೋವಿ, ನಿರ್ಮಲಾ ಹೊಸಮನಿ, ಮಡಿವಾಳಪ್ಪ ಎಡ್ರಾಮಿ, ಲಕ್ಷ್ಮೀ ಮಾದರ, ಲಕ್ಷ್ಮೀ ಸನಪ, ರಮೇಶ ರಾಠೋಡ, ದೀಪಾ ರಾಠೋಡ, ಮಹಾನಂದಾ ಹೊಸ ಮನಿ, ಇಮಾಮ ಮುಲ್ಲಾ ಮೋಟಾ ಬಾಯಿ ರಾಠೋಡ, ರಾಮನಗೌಡ ಬಿರಾದಾರ, ಬಸವರಾಜ ಕುಂಟೋಜಿ, ಸುಮಂಗಲಾ ಬಬಲಾದ, ಶಾಂತಾಬಾಯಿ ನಾಟೀಕಾರ, ಶ್ರೀಧರ ಕೊಣ್ಣೂರ ಇದ್ದರು.