ಗೂಗಲ್ ಮ್ಯಾಪ್ಸ್ ಸೂಚಿಸಿದ ಶಾರ್ಟ್‌ಕಟ್ ರಸ್ತೆಯನ್ನು ಫಾಲೋ ಮಾಡಿದ್ದ ಕುಟುಂಬವೊಂದು ಕಾರು ಸಮೇತ ನಾಲೆಗೆ ಬಿದ್ದರುವ ಘಟನೆ ಕೇರಳದಲ್ಲಿ ನಡೆದಿದೆ. ಅದೃಷ್ಟವಶಾತ್, ಕಾರಿನಲ್ಲಿದ್ದ ಎಲ್ಲರೂ ಪಾರಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಕೇರಳದ ವಯನಾಡ್‌ನಿಂದ ಅಲಪ್ಪುಳಕ್ಕೆ ಕುಟುಂಬವೊಂದು ಕಾರಿನಲ್ಲಿ ಪ್ರಯಾಣಿಸುತ್ತಿತ್ತು. ಈ ವೇಳೆ, ಮಲಪ್ಪುರಂನ ಪೂಂಗೋಡ್ ಬಳಿ ಘಟನೆ ನಡೆದಿದೆ.
ಕಾರಿನಲ್ಲಿದ್ದವರು ರಸ್ತೆ ತಿಳಿಯದ ಕಾರಣ, ಗೂಗಲ್ ಮ್ಯಾಪ್ ಹಾಕಿಕೊಂಡು, ಅದರ ಸೂಚನೆಯಂತೆ ಪ್ರಯಾಣಿಸುತ್ತಿದ್ದರು. ಈ ವೇಳೆ, ಗೂಗಲ್ ಮ್ಯಾಪ್ ಶಾರ್ಟ್ ಕಟ್ ರಸ್ತೆಯನ್ನು ಸೂಚಿಸಿದೆ. ಅದರಂತೆ, ಕಾರು ಚಾಲಕ ಕಾರನ್ನು ಚಾಲನೆ ಮಾಡಿದ್ದಾರೆ. ಆದರೆ, ಸರಿಯಾದ ರಸ್ತೆಯಿಲ್ಲದೆ, ಕಾರು ಕಾಲುವೆಗೆ ಉರುಳಿ ಬಿದ್ದಿದೆ.
ಸ್ಥಳೀಯರು ಕಾರಿನಲ್ಲಿದ್ದ ಎಲ್ಲರನ್ನೂ ರಕ್ಷಿಸಿದ್ದಾರೆ. ಕ್ರೇನ್ ಬಳಸಿ ಕಾರನ್ನು ಕಾಲುವೆಯಿಂದ ಮೇಲಕ್ಕೆತ್ತಿದ್ದಾರೆ.
ಕುನ್ನಂಕುಲಂ-ವರವೂರ್ ರಸ್ತೆಯು ತೀಕ್ಷ್ಣವಾದ ತಿರುವುಗಳನ್ನು ಹೊಂದಿದೆ. ಆಗಾಗ್ಗೆ ಅಪಘಾತಗಳು ಸಂಭವಿಸಿದ್ದು, ಕುಖ್ಯಾತಿ ಪಡೆದಿದೆ. ಹೀಗಾಗಿ, ವಾಹನ ಸವಾರರು ಸಾಮಾನ್ಯವಾಗಿ ಕುನ್ನಂಕುಲಂ ರಸ್ತೆಯ ಬದಲಿಗೆ, ವರವೂರ್ ಮಾರ್ಗದಲ್ಲಿ ಪ್ರಯಾಣಿಸುತ್ತಾರೆ. ಆದರೆ, ಕಾರಿನಲ್ಲಿ ತೆರಳುತ್ತಿದ್ದ ಕುಟುಂಬಕ್ಕೆ ಗೂಗಲ್ ಮ್ಯಾಪ್ ಕುನ್ನಂಕುಲಂ-ವರವೂರ್ ರಸ್ತೆಯನ್ನು ಸೂಚಿಸಿದ್ದು, ಆ ರಸ್ತೆಯಲ್ಲಿ ತೆರಳಿದ ಕುಟುಂಬಕ್ಕೆ ನೀರಿಗೆ ಬಿದ್ದಿದೆ.