ಉತ್ತರಪ್ರದೇಶದಲ್ಲಿ ದಲಿತ ಯುವಕ ಕುದುರೆ ಮೇಲೆ ಸವಾರಿ ಮಾಡಿಕೊಂಡು ಊರೊಳಕ್ಕೆ ಬಂದ ಎಂದು ಹಿಡಿದು ಚಚ್ಚಿ ಹಾಕಿದ್ರು. ಅವರಿಗೆ ಸಂವಿಧಾನದ ಹಕ್ಕು ಇಲ್ಲವೇ? ಉತ್ತರಪ್ರದೇಶದ ದಲಿತ ಯುವತಿಯೊಬ್ಬಳು ಊರ ಪಕ್ಕದ ನದಿಯಲ್ಲಿ ಸ್ನಾನ ಮಾಡಿದ್ದಕ್ಕೆ ದೊಣ್ಣೆ ತೊಗೊಂಡು ಚಚ್ಚಿದ್ರು. ಅಂದ್ರೆ ನಮಗೆ ಸಂಸ್ಕೃತಿ, ನಾಗರಿಕತೆ, ಮೂಲಭೂತ ಹಕ್ಕುಗಳು ಇವೆಲ್ಲ ಎಷ್ಟು ಗೌಣವಾಗುತ್ತಿವೆ ಎಂಬುದರ ಸೂಚನೆಯಿದು.
“ನಮ್ಮ ದೇಶದಲ್ಲಿ ಸದ್ಯ ಪ್ರಚಲಿತವಾಗಿರುವ ಸಮಸ್ಯೆ ಎಂದರೆ ಸಂವಿಧಾನವನ್ನು ಹೇಗೆ ಪರಿಗಣಿಸಬೇಕು ಎಂಬುದು. ಕೆಲವು ತಿದ್ದುಪಡಿ ತರಬೇಕಾ? ಕೆಲವು ಸಂಗತಿ ಗಮನಿಸಿದರೆ, ಸ್ಪಷ್ಟವಾಗುತ್ತದೆ. ಒಂದೆರಡು ಉದಾಹರಣೆ ಗಮನಿಸೋಣ, ಗುಜರಾತಲ್ಲಿ ಒಂದು ಶಾಲೆ, ಅಲ್ಲಿ ಪರೀಕ್ಷೆ ಮಾಡಿದ್ದಾರೆ, ಪ್ರಥಮ ಸ್ಥಾನ ಮುಸ್ಲಿಂ ಹುಡುಗಿಗೆ ಬಂದಿದೆ. ಆಕೆಯ ಹೆಸರು ಓದಲು ಹೆಡ್ ಮಾಸ್ಟರಿಗೆ ಇಷ್ಟ ಇಲ್ವಂತೆ, ಹಾಗಾಗಿ ಎರಡನೇ ಸ್ಥಾನದಿಂದ ಪಟ್ಟಿ ಓದಿದ್ರಂತೆ. ಆ ಯುವತಿಯ ವೇದನೆ ಯಾವ ರೀತಿ ಇದ್ದಿರಬಹುದು ಎಂದು ಕಲ್ಪಿಸಿಕೊಳ್ಳಬಹುದು. ನೀವು ನಮ್ಮ ಜೊತೆಯವರಲ್ಲ, ಅನ್ಯರು ಎಂಬ ಭಾವನೆ ತುಂಬಲಾಗುತ್ತಿದೆ. ಇದಕ್ಕೆ ವ್ಯತಿರಿಕ್ತವಾಗಿ ಮೊನ್ನೆ ಮೊನ್ನೆ ತುಂಗಭದ್ರ ಡ್ಯಾಂ ದುರಸ್ತಿ ಕೆಲಸದಲ್ಲಿ ಯಾರೆಲ್ಲ ಇದ್ರು, ಅವರ ಹೆಸರು ನೋಡಿದ್ರೆ ಗೊತ್ತಾಗುತ್ತೆ. ಕನ್ನಡಿಗರು, ತಮಿಳರು, ಹಿಂದೂಗಳು, ಮುಸ್ಲಿಮರು ಎಲ್ರೂ ಇದ್ದರು. ಇಂತಹದ್ದನ್ನು ಕಾಣಲು ಜಾಣ ಕುರುಡು ಪ್ರದರ್ಶಿಸುತ್ತಿರುವುದು ಬಹಳ ಆಘಾತಕಾರಿಯಾಗಿದೆ ಎಂದು ಹಿರಿಯ ಚಿಂತಕ ಡಾ. ಜಿ ರಾಮಕೃಷ್ಣ ಹೇಳಿದರು.
ಈ ದಿನಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಒಕ್ಕೂಟ ವ್ಯವಸ್ಥೆಯ ಮೇಲಾಗುತ್ತಿರುವ ಪ್ರಭುತ್ವದ ದಾಳಿಯ ಕುರಿತು ಆತಂಕ ವ್ಯಕ್ತಪಡಿಸಿದರು. ಅವರ ಮಾತಿನ ಪೂರ್ಣಪಾಠ ಇಲ್ಲಿದೆ.
“ತರ್ಕ ಶಾಸ್ತ್ರದಲ್ಲಿ ಜಡ್ಡು ಅಭಿಪ್ರಾಯಗಳನ್ನು ಸೂಚಿಸುವುದಕ್ಕೆ ಸಂಸ್ಕೃತದಲ್ಲಿ ಕಂದುಕ ಮುದ್ಗ ಎಂಬ ಮಾತಿದೆ. ಎಷ್ಟು ಬೇಯಿಸಿದರೂ ಅದು ಬೇಯುವುದಿಲ್ಲ. ನಮ್ಮ ಚಿಂತನೆಯು ಈ ರೀತಿಯಾಗಿಬಿಟ್ಟಿದೆ. ನಮ್ಮ ಶಿಕ್ಷಣ ಪದ್ದತಿಯ ಕಲಿಕೆ ಕೂಡಾ ಇದೇ ರೀತಿ ಆಗಿದೆ. ನಾವು ಸ್ವಲ್ಪ ಯೋಚನೆ ಮಾಡಿದ್ರೆ, ನಮ್ಮ ಸಾಹಿತಿಗಳಿದ್ದಾರೆ, ಇತಿಹಾಸಕಾರರಿದ್ದಾರೆ. ನಮ್ಮ ಪ್ರಾಚೀನ ಕಾವ್ಯ ಓದಿ ಅರ್ಥೈಸುವ ಕೆಲಸ ಮಾಡುವವರಿದ್ದಾರೆ. ಆದರೆ, ಹರಿತವಾದ ವಿಶ್ಲೇಷಣಾ ವಿಧಾನಗಳೇ ಇಲ್ಲವಾಗಿರುವುದು ಇಂದಿನ ದುರಂತ ಎಂದು ಭಾವಿಸುತ್ತೇನೆ.
ಇನ್ನೊಂದು ವಿದ್ಯಮಾನ ನೋಡಿ; ಅದೆಷ್ಟೋ ಲಕ್ಷ ಕೋಟಿ ಬ್ಯಾಂಕ್ ಸಾಲ ಮನ್ನಾ ಮಾಡಲಾಗುತ್ತಿದೆ. ಸಾಮಾನ್ಯರದ್ದಲ್ಲ, ಸಂಪತ್ತು ಲೂಟಿ ಮಾಡುತ್ತಿರುವವರ ವಿಚಾರ ಇದು. ನಮ್ಮ ದೇಶದಲ್ಲಿ ಜಿಎಸ್‌ಟಿ ಅಂತ ಒಂದಿದೆ. ಅದು ನಮಗೆ ಎಷ್ಟು ಸಲ್ಲಬೇಕೋ ಅಷ್ಟು ಸಲ್ಲುತ್ತಿಲ್ಲ ಎಷ್ಟೋ ವರ್ಷಗಳಿಂದ. ಆರ್ಥಿಕ ತಜ್ಞರು ನಮ್ಮ ಆರ್ಥಿಕ ವ್ಯವಸ್ಥೆ ಹದಗೆಟ್ಟಿದೆ ಅಂತಾರೆ. ಅದಕ್ಕೆ ಪ್ರತಿಸ್ಪಂದನೆಯೇ ಇರೋದಿಲ್ಲ. ಆ ಸೆಬಿ ಹಗರಣ ನೋಡಿದ್ರೆ ಏನೇನು ನಡಿತಿದೆ ಅಂತ ಗೊತ್ತಾಗುತ್ತದೆ. ಯಾರು ಏನು ಬೇಕಾದ್ರು ಮಾಡಬಹುದು, ಮತ್ತೆ ಮುಚ್ಚಿ ಹಾಕೋದು ಕಲಿತುಕೋಬೇಕು ಅಷ್ಟೇ. ನಮ್ಮ ಸಂವಿಧಾನದಲ್ಲಿ ನಿರ್ದೇಶಕ ಸೂತ್ರಗಳು ಅಂತಿವೆ. ಅದಕ್ಕೆ ಏನೋ ರಿಯಾಯಿತಿ ಕೊಡೋದು. ಮೂಲಭೂತ ಹಕ್ಕುಗಳನ್ನು ಮೊಟಕು ಮಾಡಿ ಈ ನಿರ್ದೇಶಕ ಸೂತ್ರಗಳನ್ನು ಅಸಂಗತವಾಗುವಂತೆ ಮಾಡುವುದು ನಡೆಯುತ್ತಿದೆ. ಇದು ಮೂಲಭೂತ ಹಕ್ಕುಗಳು ಲುಪ್ತವಾಗುತ್ತಿರುವ ಸಂದರ್ಭ ಎಂದು ಕಾಣುತ್ತದೆ. ಇದು ಬಹಳ ಗಹನವಾದ ಸಂದರ್ಭ.
ಅಸ್ಸಾಂ ಮುಖ್ಯಮಂತ್ರಿಯೊಬ್ಬರಿದ್ದಾರೆ, ಅವರು ಬಾಯಿ ಬಿಟ್ಟರೆ ಬೆಂಕಿನೇ ಕಾರೋದು. ಅವರು ಮುಸ್ಲಿಮರನ್ನು ಹಂಗಿಸೋದಕ್ಕೆ ಮಿತಿಯೇ ಇಲ್ಲ. ಅವರನ್ನು ಮಿಯಾ ಮುಸ್ಲೀಮರು ಎಂದು ಕರೆಯುತ್ತಾರೆ. ಈ ರೀತಿ ವ್ಯವಹಾರ ಮಾಡೋದು ಟೈರೈಡ್ ಮಾಡೋದು ಎಂದು ಹೇಳುತ್ತೇವೆ. ಇನ್ನು ಕೆಲವು ಪ್ರಸಂಗಗಳು ನೋಡಿ, ಕೊಪ್ಪಳದಲ್ಲಿ ದಲಿತರಿಗೆ ಹೇರ್ ಕಟ್ ಮಾಡುವ ಬದಲು ಕೊಲೆನೇ ಮಾಡಿದ್ರು. ಸರ್ಕಾರ ಏನು ಮಾಡಿದೆ ಎಂದು ಹೇಳುವುದಲ್ಲ. ಪ್ರಜ್ಞಾವಂತಿಕೆ ಯಾವ ಮಟ್ಟಿಗೆ ಇಳಿದಿದೆ ಎಂಬದು ಪ್ರಶ್ನೆ. ಮೂಲಭೂತ ಹಕ್ಕುಗಳನ್ನು ಗೌಣಗೊಳಿಸುತ್ತಿದ್ದೇವೆ. ಇಡೀ ದೇಶ ಯಾವ ದಿಕ್ಕಿನಲ್ಲಿ ಹೋಗುವುದು ಎಂದು ಗೊತ್ತಾಗದೇ ತಡಬಡಯಿಸ್ತಿದೆ. ನಮ್ಮ ಸ್ಥಿತಿ ಹಾಗಾಗಿದೆ. ಮಣಿಪುರ, ಅಸ್ಸಾಂ, ಕೇರಳ, ತಮಿಳುನಾಡು, ಕರ್ನಾಟಕ ಎಲ್ಲಾ ಕಡೆ ಕಾನೂನಾತ್ಮಕವಾಗಿ ಬರಬೇಕಾದ್ದೇನನ್ನೂ ನೀಡದೇ ಸತಾಯಿಸಲಾಗುತ್ತಿದೆ. ಹೀಗೆ ಮಾಡಿದ್ರೆ ಒಕ್ಕೂಟ ಹೇಗೆ ಉಳಿಯುತ್ತೆ? ನಮ್ಮಲ್ಲಿ ಕೇಂದ್ರ ಸರ್ಕಾರ ಎಂದಿಲ್ಲ. ಒಕ್ಕೂಟ ಸರ್ಕಾರ ಇರೋದು. ತಪ್ಪಾಗಿ ಕೇಂದ್ರ, ಕೇಂದ್ರ ಎನ್ನುತ್ತಾ ಬಂದಿದ್ದೇವೆ. ಕಾನೂನಾತ್ಮಕವಾಗಿ ಸಿಗಬೇಕಾದ್ದನ್ನು ನಿಯಮಿತವಾಗಿ ನೀಡದಿದ್ರೆ ಒಕ್ಕೂಟ ಹೇಗೆ ಜೀರ್ಣಿಸಿಕೊಳ್ಳಲು ಸಾಧ್ಯ.
ನಮ್ಮ ಅರ್ಥ ಸಚಿವೆ ನಿರ್ಮಲಮ್ಮ ನಮ್ಮ ರಾಜ್ಯದಿಂದ ರಾಜ್ಯಸಭೆಗೆ ಚುನಾಯಿತರಾದವರು. ಆದರೆ ಅವರು ನಮ್ಮ ರಾಜ್ಯವನ್ನು ಪರಿಗಣಿಸಲು ಸಿದ್ಧವೇ ಇಲ್ಲ. ರಾಜಕೀಯ ಯಾವ ಮಟ್ಟಕ್ಕೆ ಬಂದಿದೆ ಎಂದರೆ ಬೆಂಗಳೂರಿನಲ್ಲಿ ಈ ತರ ಹೇಳಿಕೆ ಕೊಡಿ, ಮನೆಗೆ ಮುತ್ತಿಗೆ ಹಾಕಿ ಎಂದು ದೆಹಲಿಯಲ್ಲಿ ನಿರ್ಧಾರವಾಗುತ್ತದೆ. ಕೋಲ್ಕತ್ತ ಪ್ರಕರಣ ಅದಕ್ಕೊಂದು ನಿದರ್ಶನ. ಹೇಗಾದರೂ ಮಾಡಿ ರಾಜೀನಾಮೆ ಕೊಡಿಸಬೇಕು ಎಂಬುದು ಉದ್ದೇಶ. ಅದಕ್ಕೆ ವಿರುದ್ಧವಾಗಿ ಒಂದು ಮೆರವಣಿಗೆ ಬೆಂಗಳೂರಿನಲ್ಲಿ ನಡೆಯಲು ಅವಕಾಶವಾಯ್ತು.
ಮೂಲಭೂತ ಹಕ್ಕು ಹೇಗೆ ಗೌಣವಾಗುತ್ತಿದೆ ಎಂಬುದು ನಾವು ಗಮನಿಸಬೇಕಾದ ಅಂಶ. ಸಂವಿಧಾನದತ್ತವಾದ ಹಕ್ಕುಗಳನ್ನು ಚಲಾಯಿಸಲು ಸಾಧ್ಯವಿಲ್ಲವಾದ ಸನ್ನಿವೇಶ ರಚನೆಯಾಗ್ತಿದೆ, ಆಗಿದೆ. ನಮ್ಮದು ಬುಲ್ಡೋಜರ್ ಕಾರ್ಯಾಚರಣೆ ಹೆಚ್ಚುತ್ತಿರುವ ಸಂದರ್ಭ. ಇದು ಸಂವಿಧಾನ ಬಾಹಿರ ಎಂದು ಸರ್ವೋಚ್ಛ ನ್ಯಾಯಾಲಯ ಹೇಳಬೇಕಿತ್ತಾ? ನಮಗೆ ಗೊತ್ತಾಗುತ್ತಿರಲಿಲ್ಲವಾ? ಆದರೂ ನಡೆಯುತ್ತಿದೆ.
ಎಷ್ಟು ವರ್ಷವಾದರೂ ಮಣಿಪುರದಲ್ಲಿ ಬೆಳಕು ಕಾಣುತ್ತಿಲ್ಲ. ಗುಜರಾತ್‌ನಲ್ಲಿ ಆಗಿದ್ರೆ ತಕ್ಷಣ ಬೆಳಕು ಕಾಣುತ್ತೆ. ಉತ್ತರಪ್ರದೇಶದಲ್ಲಿ ಒಂದು ಕಾನೂನು ಮಾಡಬೇಕು ಅಂತಿದ್ದಾರೆ, ಸರ್ಕಾರದ ನೀತಿಯನ್ನು ಏನಾದರೂ ಟೀಕಿಸಿದ್ರೆ ಶಿಕ್ಷೆಯಾಗುತ್ತೆ ಅಂತ. ಇದು ಎಂಥ ಪ್ರಜಾಪ್ರಭುತ್ವ ನಾ ಕಾಣೆ. ಕಾಶ್ಮೀರದ ಚುನಾವಣೆಯ ಸಂದರ್ಭದಲ್ಲಿ ಇದನ್ನೇ ಅಳವಡಿಸಿಕೊಂಡರೆ ಏನಾಗಬಹುದು? ಒಮ್ಮತದಿಂದ ರಚಿತವಾದ ಸಂವಿಧಾನವಿದು. ಸಂವಿಧಾನ ರಚನೆಯಾಗುವಾಗ ಅಲ್ಲಿದ್ದ ಧೀಮಂತರೆಲ್ಲ ಸೇರಿ ಎಷ್ಟೆಷ್ಟೋ ಭಿನ್ನಾಭಿಪ್ರಾಯ ವ್ಯಕ್ತವಾಗಿ, ಮುಖ್ಯವಾದ ವಿಷಯಗಳ ಬಗ್ಗೆ ತೀವ್ರ ವಿರೋಧಗಳೂ ವ್ಯಕ್ತವಾಗಿತ್ತು. ನಂತರ ಚರ್ಚೆ ಮಾಡಿ ಯಾವುದೋ ಒಂದು ಇತ್ಯರ್ಥಕ್ಕೆ ಬಂದಿದ್ದಾರೆ. ಇದು ಋಜು ಮಾರ್ಗ ಎಂದು ನಾವು ಸ್ವೀಕರಿಸಿದ್ದೇವೆ. ಸ್ವೀಕರಿಸಿದ್ದಾದ ಮೇಲೆ ಕಾರ್ಯಗತಗೊಳಿಸುವ ಜವಾಬ್ದಾರಿ ನಮ್ಮದು. ಯಾವುದೇ ರೀತಿಯಲ್ಲೂ ಹಿನ್ನಡೆಯಾಗದ ರೀತಿಯಲ್ಲಿ ನಾವು ಸಂವಿಧಾನ ಮಾನ್ಯ ಮಾಡತಕ್ಕಂಥ ಮೌಲ್ಯಗಳನ್ನು ಅನುಷ್ಠಾನಕ್ಕೆ ತರುತ್ತೇವೆ ಎಂಬ ಗಟ್ಟಿ ಮನಸ್ಸು ಮಾಡಿ ಮುಂದುವರಿಯಬೇಕು.
ಈಗ ಯಾವ ರೀತಿಯಲ್ಲಿ ನಡೆಯುತ್ತಿದೆ? ಉತ್ತರಪ್ರದೇಶದಲ್ಲಿ ದಲಿತ ಯುವಕ ಕುದುರೆ ಮೇಲೆ ಸವಾರಿ ಮಾಡಿಕೊಂಡು ಊರೊಳಕ್ಕೆ ಬಂದ, ಚೆನ್ನಾಗಿ ಹಿಡಿದು ಚಚ್ಚಿ ಹಾಕಿದ್ರು. ಅವರಿಗೆ ಸಂವಿಧಾನದ ಹಕ್ಕು ಇಲ್ಲವೇ? ಉತ್ತರಪ್ರದೇಶದ ದಲಿತ ಯುವತಿಯೊಬ್ಬಳು, ಊರ ಪಕ್ಕದ ನದಿಯಲ್ಲಿ ಸ್ನಾನ ಮಾಡಿದ್ದಕ್ಕೆ ದೊಣ್ಣೆ ತೊಗೊಂಡು ಚಚ್ಚಿದ್ರು. ಅಂದ್ರೆ ನಮಗೆ ಸಂಸ್ಕೃತಿ, ನಾಗರಿಕತೆ, ಮೂಲಭೂತ ಹಕ್ಕುಗಳು ಇವೆಲ್ಲ ಎಷ್ಟು ಗೌಣವಾಗುತ್ತಿದೆ ಎಂಬುದರ ಸೂಚನೆ. ಅದನ್ನು ಸರಿಪಡಿಸುವ ಕೆಲಸ ಜನ ಮಾಡಬೇಕಿದೆ. ಮಧ್ಯಪ್ರವೇಶ ಮಾಡಬೇಕು. ಇಂತಹ ಸಂದರ್ಭದಲ್ಲಿ ಒಂದು ಹೇಳಿಕೆ ಕೊಟ್ಟುಬಿಟ್ಟು ನನ್ನ ಜವಾಬ್ದಾರಿ ಮುಗಿಯಿತು ಎಂದು ಕೂತುಕೊಳ್ಳುವುದಲ್ಲ. ಸಾಮೂಹಿಕವಾಗಿ ಮಧ್ಯಪ್ರವೇಶ ಮಾಡಬೇಕು. ಯಾವ ಸೂತ್ರಗಳನ್ನು ಕೊಟ್ಟಿದ್ದರೋ ಅದನ್ನುಅನುಷ್ಠಾನಕ್ಕೆ ತರುವಂತೆ ಮಾಡಬೇಕು.
ಸಂವಿಧಾನ ಬದಲಾಯಿಸಲೇ ಬೇಕಾಗಿಲ್ಲ ಎಂದು ಹೇಳಬಾರದು, ಯಾಕೆಂದರೆ 1948ರ ಸುಮಾರಿನಲ್ಲಿ ಅಸ್ಥಿತ್ವಕ್ಕೆ ಬಂದ ಸಂವಿಧಾನದಲ್ಲಿ ಕೆಲವೆಲ್ಲ ಸ್ವಲ್ಪ ಪ್ರಶ್ನಾರ್ಹವಾದ್ದಂತದ್ದು ಇವೆ. 1970ರ ದಶಕದಲ್ಲಿ ಕೇಶವಾನಂದ ಭಾರತಿ ಮೊಕದ್ದಮೆ ಉದಾಹರಿಸಿ ಯಾವ ರೀತಿಯಲ್ಲಿ ಮಧ್ಯಪ್ರವೇಶಿಸಬೇಕು ಎಂದು ಚರ್ಚೆ ನಡೆಯುತ್ತಿತ್ತು. ಈಗ ಅಂಥ ಮಾತುಗಳೇ ಕೇಳಿಬರುತ್ತಿಲ್ಲ. ನಾವು ಈ ಒಂದು ವಿಷಯವನ್ನು ಕಡೆಗಣಿಸಿದ್ರೆ ಬಹಳ ಅಪಾಯ ಕಾದಿರುತ್ತದೆ. ಮೂಲಭೂತ ಸೂತ್ರಗಳನ್ನು ಅನುಷ್ಠಾನಕ್ಕೆ ತರಲು ಬದ್ಧರಾಗಬೇಕು, ಇಲ್ಲದಿದ್ದರೆ ದುರಂತ ಕಾದಿರುತ್ತೆ. ಈ ದೇಶದಲ್ಲಿ ಏನಾಗಬೇಕು ಎಂಬ ಕಲ್ಪನೆ ಇಲ್ವಾ? ಬೇರೆಯವರಿಗೆ ಅದರಲ್ಲಿ ಭಾಗವಹಿಸಬೇಕು ಎಂಬ ಆಸೆ ಇಲ್ವಾ? ಹೀಗಿರುವಾಗ ಎಲ್ಲನೂ ಹದಗೆಟ್ಟು ಹೋಗುವ ರೀತಿಯಲ್ಲಿ ನಡೆಸೋದು ತೀರಾ ಅಪಾಯಕರ, ಇದರ ವಿರುದ್ಧ ಪ್ರಜ್ಞಾಪೂರ್ವಕವಾಗಿ ಸೆಣಸುವ ಅಗತ್ಯವಿದೆ. ಪ್ರಜ್ಞಾಪೂರ್ವಕವಾಗಿ, ಸಾಮುದಾಯಿಕವಾಗಿ ಸೆಣಸಿದಾಗ ಮಾತ್ರವೇ , ಒಂದು ದೇಶದಲ್ಲಿ ಪ್ರಶ್ನಾರ್ಹವಾದಂತಹ ತೀರ್ಮಾನವನ್ನು ನಿರಾಕರಿಸಲು ಸಾಧ್ಯ. ಆ ಕೆಲಸವನ್ನು ನಾವು ಮಾಡಬೇಕಾಗಿದೆ”.