ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ವತಿಯಿಂದ ವಕ್ಫ್ ತಿದ್ದುಪಡಿ ಮಸೂದೆ ಸಮಾಲೋಚನಾ ಸಭೆ ಉಡುಪಿಯ ಮಣಿಪಾಲ್ ಇನ್ ಹೊಟೇಲ್‌ನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ಮಾಜಿ ವಕ್ಫ್ ಬೋರ್ಡ್ ಸಿಇಓ ಮುಜೀಬುಲ್ಲಾ ಝಫರಿ ಮಾತನಾಡಿ, ಸುಮಾರು ಒಂದು ಲಕ್ಷದ ಹದಿನೇಳು ಸಾವಿರ ಎಕರೆ ನೋಟಿಫೈಡ್ ವಕ್ಫ್ ಆಸ್ತಿ ಇತ್ತು. ಭೂ ಸುಧಾರಣೆ ಕಾಯ್ದೆ, ಉಳುವವನೆ ಹೊಲದೊಡೆಯ ಇತರೇ ಹಲವು ಕಾಯ್ದೆಗಳು ಬಂದ ನಂತರ ಪ್ರಸ್ತುತ ಮೂವತ್ತು ಸಾವಿರ ಎಕರೆ ವಕ್ಫ್ ಆಸ್ತಿ ಇದ್ದು ಈಗ ಕೇಂದ್ರ ಸರ್ಕಾರ ತರಲು ಹೊರಟಿರುವ ನೂತನ ವಕ್ಫ್ ತಿದ್ದುಪಡಿ ಕಾಯ್ದೆ – 2024 ಜಾರಿಗೆ ಬಂದರೆ ಇನ್ನಷ್ಟು ವಕ್ಫ್ ಆಸ್ತಿಯನ್ನು ಕಳೆದುಕೊಳ್ಳುವ ಪರಿಸ್ಥಿತಿ ಬರಬಹುದು ಎಂದು ಹೇಳಿದರು.
ನೂತನ ವಕ್ಫ್ ತಿದ್ದುಪಡಿ ಕಾಯ್ದೆಯಲ್ಲಿ ಹಲವರು ತಿದ್ದುಪಡಿ ತಂದು ಮುಸ್ಲಿಮ್ ಸಮಾಜಕ್ಕೆ ಅನ್ಯಾಯ ಮಾಡಲು ಕೇಂದ್ರ ಸರ್ಕಾರ ಹೊರಟಿದೆ ಎಂದು ಹೇಳಿದರು. ಮುಖ್ಯವಾಗಿ ಸೆಕ್ಷನ್ 40ನ್ನು ಸಂಪೂರ್ಣ ತೆಗೆಯುವುದರ ಮೂಲಕ ಅನ್ಯಾಯ ಎಸುಗುತ್ತಿದ್ದಾರೆ ಎಂದು ದೂರಿದರು.
ಈ ಹಿಂದೆ ಸಾವಿನ ಸಮಯದಲ್ಲಿ ಯಾರಾದರೂ ಮೌಖಿಕವಾಗಿ ಆಸ್ತಿಯನ್ನು ವಕ್ಫ್ ಮಾಡಿದರೆ ಅದನ್ನು ಇಬ್ಬರ ಸಾಕ್ಷಿಯ ಮೂಲಕ ಪರಿಗಣಿಸಲಾಗುತ್ತಿತ್ತು. ಇದನ್ನು ಸುಪ್ರೀಂ ಕೋರ್ಟ್ ಸಹ ಅನುಮತಿಸಿತ್ತು. ಆದರೆ ಈಗಿನ ಕಾನೂನಿನ ಪ್ರಕಾರ ಡೀಡ್ ಮಾಡಬಹುದು. ಆದರೆ ರಿಜಿಸ್ಟರ್ ಮಾಡಲಾಗುವುದಿಲ್ಲ ಎಂದು ಹೇಳಿದರು.
ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಜಿಲ್ಲಾಧ್ಯಕ್ಷ ಯಾಸೀನ್ ಮಲ್ಪೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಯಾಸೀನ್ ಕೋಡಿಬೆಂಗ್ರೆ ಸಮಾರೋಪ ಭಾಷಣ ಮಾಡಿದರು.
ಸಲಾಹುದ್ದೀನ್ ಅಬ್ದುಲ್ಲಾ ಸ್ವಾಗತಿಸಿದರು. ಮಹಮ್ಮದ್ ಮೌಲಾ ಕಾರ್ಯಕ್ರಮ ನಿರೂಪಿಸಿದರು, ಇಸ್ಮಾಯಿಲ್ ಹುಸೇನ್ ಧನ್ಯವಿತ್ತರು. ಜಿಲ್ಲೆಯ ವಿವಿಧ ಸಂಘ ಸಂಸ್ಥೆ, ಮಸೀದಿ ಆಡಳಿತ ಸಮಿತಿಯ ಹೊಣೆಗಾರರು ಉಪಸ್ಥಿತರಿದ್ದರು.
