ಗಡಿಯಲ್ಲಿ ಯೋಧರು ದೇಶವನ್ನು ರಕ್ಷಣೆ ಮಾಡಿದರೆ ದೇಶದ ಒಳಗಿರುವ ಅರಣ್ಯ ಸಂಪತ್ತನ್ನು ಸಂರಕ್ಷಿಸುವ ಮಹತ್ವದ ಕಾರ್ಯವನ್ನು ಅರಣ್ಯಯೋಧರಾದ ಅರಣ್ಯ ಇಲಾಖೆ ಸಿಬ್ಬಂದಿ ನಿರ್ವಹಿಸುತ್ತಿದ್ದಾರೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಜಿ.ಎ ಮಂಜುನಾಥ ಸ್ಮರಿಸಿದರು.
ಕೋಲಾರ ನಗರದ ಹೊರವಲಯದ ಗಾಜಲದಿನ್ನೆ ಅರಣ್ಯ ವಿಭಾಗ ಕಛೇರಿಯ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಹುತಾತ್ಮರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದ ಅವರು, ಇಂದಿನ ದಿನಗಳಲ್ಲಿ ಪ್ರಾಣಿ ಮತ್ತು ಮಾನವನ ನಡುವಿನ ಸಂಘರ್ಷಗಳ ನಡುವೆ ಅರಣ್ಯವನ್ನು ನಾಶ ಮಾಡಲು ಹೊರಟಿದ್ದಾರೆ. ಇದರೊಂದಿಗೆ ಪ್ರಕೃತಿ ವಿಕೋಪ ಮತ್ತು ದರೋಡೆಕೋರ ಮಧ್ಯೆ ಸೆಣಸಾಟದಿಂದ ಅರಣ್ಯ ಇಲಾಖೆಯ ಸಿಬ್ಬಂದಿ ಬಲಿಯಾಗುತ್ತಿದ್ದಾರೆ. ಅವರ ಪ್ರಾಣ ತ್ಯಾಗಕ್ಕೆ ಅವರ ಕುಟುಂಬಗಳಿಗೆ ಶಾಂತಿ ಮತ್ತು ಭವಿಷ್ಯ ರೂಪಿಸುವಂತಾಗಬೇಕು ಎಂದರು.
ಜಿಲ್ಲಾಧಿಕಾರಿ ಅಕ್ರಂ ಪಾಷ ಮಾತನಾಡಿ, ಅರಣ್ಯವನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಕರ್ತವ್ಯವಾಗಬೇಕು. ಅರಣ್ಯ ಸಂಪತ್ತು ದೇಶದ ಸಮೃದ್ಧಿಯ ಸಂಕೇತವಾಗಿದೆ. ಅರಣ್ಯವನ್ನು ಸಂರಕ್ಷಿಸುವುದರಿಂದ ಮಾತ್ರವೇ ಮುಂದಿನ ಜನಾಂಗಕ್ಕೆ ಉತ್ತಮ ಭವಿಷ್ಯವನ್ನು ನೀಡಲು ಸಾಧ್ಯವಾಗುತ್ತದೆ. ಅರಣ್ಯ ಸಂರಕ್ಷಣೆಗಾಗಿ ತಮ್ಮ ಪ್ರಾಣಗಳನ್ನು ಕೊಟ್ಟ ಮಹನೀಯರ ತ್ಯಾಗವು ವ್ಯರ್ಥವಾಗಬಾರದು ಎಂದರು.
ಕೋಲಾರ ಜಿಲ್ಲೆಯಲ್ಲಿ ಇತ್ತಿಚೆಗೆ ಸುಮಾರು 2850 ಎಕರೆಗಳಷ್ಟು ಅರಣ್ಯ ಭೂಮಿಯನ್ನು ಉಳಿಸಿದ್ದು ಭಾರತ ದೇಶದ ಇತಿಹಾಸದಲ್ಲೇ ದೊಡ್ಡ ಮಟ್ಟದ ದಾಖಲೆಯಾಗಿದೆ. ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು ಅವರ ಧೈರ್ಯವನ್ನು ಇತರೆ ಅಧಿಕಾರಿಗಳಿಗೆ ಸ್ಪೂರ್ತಿ ಮತ್ತು ಮಾದರಿಯಾಗಬೇಕು. ಇವರ ಸೇವೆಯನ್ನು ಸರಕಾರವು ಗುರುತಿಸಬೇಕಾಗಿದೆ. ಭಯ ಮತ್ತು ಒತ್ತಡಕ್ಕೆ ಮಣಿಯದೇ ತಮ್ಮ ಕೆಲಸವನ್ನು ಮುಂದುವರೆಸಲು ಜಿಲ್ಲಾಡಳಿತ ಸಂಪೂರ್ಣ ಸಹಕಾರ ನೀಡತ್ತದೆ ಎಂದರು.

ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಮಾತನಾಡಿ, ಅರಣ್ಯ ಇಲಾಖೆ ಹುತಾತ್ಮ ಸಿಬ್ಬಂದಿಯ ನೋವು ನಮ್ಮ ಪೋಲಿಸ್ ಇಲಾಖೆಯಲ್ಲಿ ಕೂಡ ಇದೆ. ಅರಣ್ಯ ಸಂರಕ್ಷಣೆಯು ನಮ್ಮೆಲ್ಲರ ಬದ್ದತೆಯನ್ನು ಹೆಚ್ಚಿಸುತ್ತದೆ. ಹುತಾತ್ಮರ ಕುಟುಂಬದೊಂದಿಗೆ ಇಲಾಖೆಗಳು ಸದಾ ಇರುತ್ತವೆ. ಒಗ್ಗಟ್ಟಿನಿಂದ ಕೆಲಸ ಮಾಡಿದಾಗ ಮಾತ್ರವೇ ಯಶಸ್ಸು ಗಳಿಸಲು ಸಾಧ್ಯವಾಗುತ್ತದೆ. ಅದಕ್ಕೆ ಕೋಲಾರದಲ್ಲಿ ಒತ್ತುವರಿ ತೆರೆವು ಉದಾಹರಣೆಯಾಗಿದೆ. ಅರಣ್ಯ ಇಲಾಖೆಯು ಒತ್ತುವರಿ ಭೂಮಿಯನ್ನು ಜಿಲ್ಲಾಡಳಿತಕ್ಕೆ ಕೊಡುಗೆಯಾಗಿ ನೀಡಿದ್ದಾರೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ.ಏಡುಕೊಂಡಲು, ಪ್ರತಿ ವರ್ಷವೂ ಅರಣ್ಯ ಇಲಾಖೆಯ ಸಿಬ್ಬಂದಿ ಕರ್ತವ್ಯದಲ್ಲಿದ್ದಾಗಲೇ ಮೃತಪಡುತ್ತಿದ್ದಾರೆ. ಅವರ ಸೇವೆಯನ್ನು ನಾವು ಸ್ಮರಿಸಬೇಕು. ಆ ಉದ್ದೇಶಕ್ಕಾಗಿ ರಾಷ್ಟ್ರೀಯವಾಗಿ ಹುತಾತ್ಮರ ದಿನ ಆಚರಿಸುತ್ತಿರುವುದು ಒಳ್ಳೆಯ ಕೆಲಸವಾಗಿದೆ. ಸುಮಾರು 61 ಸಿಬ್ಬಂದಿ ರಾಜ್ಯದಲ್ಲಿ ಹುತಾತ್ಮರಾಗಿದ್ದಾರೆ. ಅವರ ಸೇವೆ ಇನ್ನೂ ಇಲಾಖೆಗೆ ಅಗತ್ಯವಾಗಿತ್ತು ಎಂದು ಸ್ಮರಿಸಿದರು.
ಪೊಲೀಸ್ ತಂಡದಿಂದ ಹುತಾತ್ಮರ ಸ್ಮರಣಾರ್ಥ ಗಾಳಿಯಲ್ಲಿ ಮೂರು ಸುತ್ತು ಗುಂಡು ಹಾರಿಸಿ ಗೌರವ ಸಲ್ಲಿಸಲಾಯಿತು.
ಈ ಸುದ್ದಿ ಓದಿದ್ದೀರಾ?ಈ ದಿನ ಸಂಪಾದಕೀಯ | ‘ದ್ವೇಷ ಭಾಷಣ’ದ ಆಪಾದಿತರು ಹೈಕೋರ್ಟ್ ಜಡ್ಜ್ ಆಗಬಹುದೇ?
ಕಾರ್ಯಕ್ರಮದಲ್ಲಿ ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಶ್ರೀನಿವಾಸ್ ಎಸ್ ಪಾಟೀಲ್, ಒಂದನೇ ಅಧಿಕ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಚೇತನಾ ಅರಿಕಟ್ಟೆ, ಸಾಮಾಜಿಕ ಅರಣ್ಯಾಧಿಕಾರಿ ಆನಂದ್ ಕುಮಾರ್, ಕೋಲಾರ ಪ್ರಾದೇಶಿಕ ಉಪ ವಲಯ ಅರಣ್ಯಾಧಿಕಾರಿ ಬಿ.ಮಂಜುನಾಥ್ ಇದ್ದರು.
