ನಗರಸಭಾ ಚುನಾವಣೆಗೆ ಸಂಬಂಧಿಸಿದಂತೆ ವಿಧಾನ ಪರಿಷತ್ ಸದಸ್ಯರು ಮುಚ್ಚಿದ ಲಕೋಟೆಯಲ್ಲಿ ಮತದಾನ ಮಾಡಲು ಅವಕಾಶ ಕಲ್ಪಿಸುವಂತೆ ಹೈಕೋರ್ಟ್ ಬುಧವಾರ ಆದೇಶಿಸಿದ್ದು, ಬಿಜೆಪಿಗರಿಗೆ ಹರ್ಷ ತಂದಿದೆ.
ಚಿಕ್ಕಬಳ್ಳಾಪುರ ನಗರಸಭೆ ಚುನಾವಣೆ ಹಿನ್ನೆಲೆ ವಿ.ಪ ಸದಸ್ಯರನ್ನು ಮತದಾರರ ಪಟ್ಟಿಗೆ ಸೇರಿಸಿರುವುದನ್ನು ಪ್ರಶ್ನಿಸಿ ಬಿಜೆಪಿ ಸದಸ್ಯರು ಕೋರ್ಟ್ ಮೆಟ್ಟಿಲೇರಿದ್ದರು.
ಇದೀಗ ಬೆಂಗಳೂರು ಉಚ್ಚ ನ್ಯಾಯಾಲಯವು ಸದರಿ ಆದೇಶ ಹೊರಡಿಸಿ ಚುನಾವಣಾಧಿಕಾರಿಗಳಿಗೆ ಸೂಚನೆ ನೀಡಿದ್ದು, ವಿ.ಪ ಸದಸ್ಯರ ಮತಗಳು ರಿಟ್ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತವೆ ಎಂದು ಅಭಿಪ್ರಾಯಪಟ್ಟಿದೆ.
ಈ ಹಿನ್ನೆಲೆ ಬುಧವಾರ ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಮುಖಂಡ ನವೀನ್ ಕಿರಣ್, ಕಾಂಗ್ರೆಸ್‌ನವರು ಅಧಿಕಾರಿಗಳ ಮೇಲೆ ಒತ್ತಡ ಹೇರಿ ವಿಧಾನ ಪರಿಷತ್ ಸದಸ್ಯರನ್ನು ಅಕ್ರಮವಾಗಿ ಮತದಾರರ ಪಟ್ಟಿಗೆ ಸೇರಿಸಿದ್ದಾರೆ. ಇದೀಗ ನ್ಯಾಯಾಲಯವು ನಮ್ಮ ಮನವಿಯನ್ನು ಪುರಸ್ಕರಿಸಿದ್ದು, ಮುಚ್ಚಿದ ಲಕೋಟೆಯಲ್ಲಿ ಮತ ಹಾಕಲು ಅವರಿಗೆ ಸೂಚಿಸಿದೆ. ಇದು ನಮಗೆ ಸಿಕ್ಕಿರುವ ತಾತ್ಕಾಲಿಕ ಜಯ ಎಂದು ಹರ್ಷ ವ್ಯಕ್ತಪಡಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಡಿ.ಎಸ್.ಆನಂದ ರೆಡ್ಡಿ ಮಾತನಾಡಿ, ವಿ.ಪ ಸದಸ್ಯರಾದ ಅನಿಲ್ ಕುಮಾರ್ ಮತ್ತು ಸೀತಾರಾಮ್ ಅವರು ಮತದಾರರ ಪಟ್ಟಿಗೆ ಸೇರಲು ಹಕ್ಕಿಲ್ಲ. ಅವರಿಬ್ಬರೂ ಚಿಕ್ಕಬಳ್ಳಾಪುರ ನಿವಾಸಿಗಳಲ್ಲ. ಆದರೂ ಸಹ ಅವರನ್ನು ಪಟ್ಟಿಗೆ ಸೇರಿಸಲಾಗಿದೆ. ಅವರು ನಾಮನಿರ್ದೇಶಿತ ಸದಸ್ಯರಾಗಿದ್ದು, ಸಂವಿಧಾನದ 243-R-(2)(a)(1)ನೇ ವಿಧಿ ಅನುಸಾರ ಇವರಿಬ್ಬರಿಗೂ ಮತ ಹಾಕಲು ಹಕ್ಕಿಲ್ಲ. ಇದು ಕರ್ನಾಟಕ ಮುನ್ಸಿಪಾಲಿಟೀಸ್ ಕಾಯ್ದೆಯ ಉಲ್ಲಂಘನೆ ಎಂದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಮುಕ್ತ ಮುನಿಯಪ್ಪ ಮಾತನಾಡಿ, ವಿಧಾನ ಪರಿಷತ್ ಸದಸ್ಯರಿಗೆ ನಾಚಿಕೆ ಆಗಬೇಕು. ಅವರು ಯಾವ ಮುಖ ಇಟ್ಟುಕೊಂಡು ಮತಹಾಕಲು ಬರುತ್ತಿದ್ದಾರೆ. ಇದು ಅಕ್ರಮ ಎಂದು ಗುಡುಗಿದರು.
ಈ ಸುದ್ದಿ ಓದಿದ್ದೀರಾ? ಚಿಕ್ಕಬಳ್ಳಾಪುರ | ನಾಳೆ ನಗರಸಭಾ ಚುನಾವಣೆ: ಜೆಡಿಎಸ್ ಸದಸ್ಯರು ನಾಪತ್ತೆ; ಆತಂಕದಲ್ಲಿ ಮುಖಂಡರು
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಕೆ.ವಿ.ನಾಗರಾಜು, ಶಿವಾನಂದ್, ಕಿಸಾನ್ ಕೃಷ್ಣಪ್ಪ, ಲೀಲಾವತಿ ಶ್ರೀನಿವಾಸ್, ಕೃಷ್ಣಮೂರ್ತಿ ಹಾಗೂ ಇತರರಿದ್ದರು.
