ಮದ್ದೂರು ಹೊಳೆಯ ತಗ್ಗಳ್ಳಿ ಅಣೆಕಟ್ಟಿನ ಎಡದಂಡೆ ಮತ್ತು ಬಲದಂಡೆ ನಾಲೆಗಳಲ್ಲಿ ಬೆಳೆದಿರುವ ಗಿಡಗಂಟೆಗಳು ಹಾಗೂ ಹೂಳನ್ನು ತಕ್ಷಣವೇ ತೆಗೆಯಬೇಕು. ಆ ಕಾಲುವೆಗಳಲ್ಲಿ ನೀರು ತಕ್ಷಣ ಹರಿಸುವ ಮೂಲಕ ಜನ ಹಾಗೂ ಜಾನುವಾರುಗಳನ್ನು ರಕ್ಷಿಸಲು ಕ್ರಮ ಕೈಗೊಳ್ಳಬೇಕು ಎಂದು ಮಂಡ್ಯ ಜಿಲ್ಲಾ ರೈತ ಸಂಘದ ಆಧ್ಯಕ್ಷರಾದ ಎ ಎಲ್ ಕೆಂಪೂಗೌಡ ಆಗ್ರಹಿಸಿದರು.
ಮದ್ದೂರು ತಾಲೂಕು ಕಚೇರಿ ಎದುರು ತಾಲೂಕು ರೈತ ಸಂಘದ ವತಿಯಿಂದ ನಡೆದ ಧರಣಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ಈಗಾಗಲೇ ಒಂದು ಬಾರಿಯಷ್ಟು ಮಾತ್ರ ನೀರು ಬಿಡಲಾಗಿದೆ. ಹಾಲಿ ಬೆಳೆಗಳು ಒಣಗುತ್ತಿರುವುದರಿಂದ, ಭತ್ತದ ಸಸಿ ಮಡಿಗಳನ್ನು ಕಾಪಾಡಲು ಕೂಡಲೇ ನೀರು ಬಿಡಬೇಕು ಎಂದು ಒತ್ತಾಯಿಸಿದರು.

ರೈತ ಸಂಘದ ಬೋರಾಪುರ ಶಂಕರೇಗೌಡ ಮಾತನಾಡಿ, ಮದ್ದೂರು ಹೊಳೆಯ ಎಡ ದಂಡೆ ಹಾಗೂ ಬಲದಂಡೆ ನಾಲೆಯ ಎಲ್ಲ ಕೆರೆ-ಕಟ್ಟೆಗಳಿಗೆ ನೀರು ತುಂಬಿಸುವ ವ್ಯವಸ್ಥೆಯನ್ನು ಮಾಡಬೇಕು. ಅದಕ್ಕಾಗಿ ತಗ್ಗಳ್ಳಿ ಅಣೆಕಟ್ಟಿಗೆ ವಿ.ಸಿ. ನಾಲೆಯ ಮುಖಾಂತರ ಕೊಪ್ಪ ಕೆರೆಗೆ ನೀರು ತುಂಬಿಸಿ, ಅಲ್ಲಿಂದ ಶಿಂಷಾ ಅಣೆಕಟ್ಟಿಗೆ ನೀರು ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಬೇಕು. ಜೊತೆಗೆ, ತಗ್ಗಳ್ಳಿ ಅಣೆಕಟ್ಟನ್ನು ಕೆ.ಆರ್.ಎಸ್. ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಗೆ ಸೇರಿಸಿ, ಆ ಭಾಗದ ರೈತರನ್ನು ರಕ್ಷಿಸಬೇಕು ಎಂದು ಒತ್ತಾಯಿಸಿದರು.
ರೈತ ಸಂಘದ ವಿನೋದ್ ಬಾಬು ಟಿ ಎಲ್ ಮಾತನಾಡಿ, ಕನ್ನಂಬಾಡಿ ಅಚ್ಚುಕಟ್ಟಿನಲ್ಲಿ ಎರಡು ಬೆಳೆ ಬೆಳೆಯುತ್ತಾರೆ. ತಗ್ಗಳ್ಳಿ ಅಣೆ ಅಚ್ಚುಕಟ್ಟಿನಲ್ಲಿ ಮಳೆಗಾಲದಲ್ಲಿ ಒಂದೇ ಬೆಳೆ ಬೆಳೆಯುವುದು. ಕಳೆದ ವರ್ಷ ನೀರು ಇದ್ದು ಕೊಡದೆ ಕೃತಕ ಬರ ಸೃಷ್ಟಿ ಮಾಡಿದ್ದರು. ಈ ಸಾಲಿನಲ್ಲೂ ನಾಟಿ ಹೊತ್ತು ಮೀರುತ್ತಿದೆ. ಆದರೂ ನೀರು ಕೊಟ್ಟಿಲ್ಲ. ಹಾಕಿರುವ ಭತ್ತದ ಒಟ್ಲು ಒಣಗುತ್ತಿದೆ. ರೈತರಿಗೆ ಯಾವುದೇ ಮುನ್ಸೂಚನೆಯಲ್ಲ, ಮಾಹಿತಿ ಇಲ್ಲ. ಬೆಳೆದು ನಿಂತಿರುವ ತೆಂಗು, ಕಬ್ಬು, ಹಾಕಬೇಕಾಗಿರುವ ಭತ್ತಕ್ಕೆ ನೀರು ಕೊಡುತ್ತೇವೆ ಎಂದು ಖಾತ್ರಿಪಡಿಸಬೇಕು ಎಂದರು.
ರೈತರ ಮನವಿ ಸ್ವೀಕರಿಸಿ ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಇಂಜಿನಿಯರ್ ನಂಜುಂಡೇಗೌಡ ಮಾತನಾಡಿ, ತಗ್ಗಳ್ಳಿ ಅಣೆ ಮಳೆ ಆಶ್ರಿತ ಅಣೆಕಟ್ಟು. ಈ ಸಾಲಿನಲ್ಲಿ ಕಾರಾವಳಿ ಹಾಗೂ ಮಲೆನಾಡಿನಲ್ಲಿ ಮಾತ್ರ ಮಳೆ ಬಿದ್ದಿದೆ. ಮಂಡ್ಯ ಜಿಲ್ಲೆಯಲ್ಲಿ ಮಳೆ ಬಿದ್ದಿಲ್ಲದ ಕಾರಣದಿಂದ ಅಣೆ ತುಂಬಿಲ್ಲ. ಮಾರ್ಕೋನಳ್ಳಿ ಅಣೆ ಕೂಡ ತುಂಬಿಲ್ಲ. ಕೊಪ್ಪ ಹಾಗೂ ಕೆರಗೋಡು ಕೆರೆಗಳಿಂದ ಆಭಾಗದ ರೈತರಿಗೆ ತೊಂದರೆ ಆಗದ ರೀತಿಯಲ್ಲಿ ನೀರು ಕೊಡಲು ಪ್ರಯತ್ನಿಸಲಾಗುವುದು ಎಂದು ಹಾರಿಕೆಯ ಬದಲು ಹೇಳಿದರು.
ಧರಣಿಯಲ್ಲಿ ರಾಜ್ಯ ರೈತ ಸಂಘದ ಗೆಜ್ಜಲಗೆರೆ ಶಂಕರಯ್ಯ, ಕೆರೆಮೇಗಳದೊಡ್ಡಿ ವರದಪ್ಪ, ಸಾದೊಳಲು ಎಸ್ ಎಂ ಸಿದ್ದೇಗೌಡ, ಪಾಂಡು ಶ್ರೀರಂಗಪಟ್ಟಣ, ಎಚ್ ಎಂ ಶಿವಣ್ಣ, ಟಿ ಕೆ ಸುರೇಶ್, ಶೆಟ್ಟಿಹಳ್ಳಿ ರವಿಕುಮಾರ್, ಗೊಲ್ಲರದೊಡ್ಡಿ ಅಶೋಕ್, ಎಣ್ಣೆಹೊಳೆ ರಘು, ಪಾಂಡವಪುರ ಮಂಜು, ಶ್ರೀರಂಗಪಟ್ಟಣದ ಕೃಷ್ಣೇಗೌಡ, ಬಾಲಕೃಷ್ಣ, ಕೇಶವ, ಮಾರಸಿಂಗನಹಳ್ಳಿ ರಾಮಚಂದ್ರು, ಅಪ್ಪಾಜಿ, ಗೂಳಿಗೌಡ, ರವಿ, ವರಗರಹಳ್ಳಿ ಉಮೇಶ್, ಮೂಡ್ಯ ಮಂಜು ಹಾಗೂ ಜಿಲ್ಲೆಯ ಎಲ್ಲ ತಾಲೂಕುಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
