2,200 ಕೋಟಿ ರೂಪಾಯಿಯ ಬೃಹತ್ ಆನ್‌ಲೈನ್ ಸ್ಟಾಕ್ ಟ್ರೇಡಿಂಗ್ ಹಗರಣದಲ್ಲಿ ಅಸ್ಸಾಂ ನಟಿ, ನೃತ್ಯ ಸಂಯೋಜಕಿ ಸುಮಿ ಬೋರಾ ಮತ್ತು ಅವರ ಪತಿ, ಛಾಯಾಗ್ರಾಹಕ ತಾರ್ಕಿಕ್ ಬೋರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಹಗರಣದಲ್ಲಿ ಈ ಇಬ್ಬರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ.
ಇತ್ತೀಚೆಗೆ, ಹಗರಣದ ಕಿಂಗ್‌ಪಿನ್ ಬಿಶಾಲ್ ಫುಕನ್ ಮತ್ತು ಆತನ ಸಹಚರ ಸ್ವಪ್ನನಿಲ್ ದಾಸ್, ಅಮ್ಲಾನ್ ಬೋರಾಹ್ ಸೇರಿದಂತೆ ಹಲವರನ್ನು ಪೊಲೀಸರು ಬಂಧಿಸಿದ್ದರು. ಅವರ ಬಂಧನದೊಂದಿಗೆ ಹಗರಣವನ್ನು ಬಯಲುಗೊಳಿಸಿದ್ದರು. ಇದೀಗ, ನಟಿ ಮತ್ತು ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣವನ್ನು ತ್ವರಿತವಾಗಿ ತನಿಖೆ ನಡೆಸುತ್ತಿರುವ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ತಂಡಕ್ಕೆ ಪೊಲೀಸ್ ಮಹಾನಿರ್ದೇಶಕ ಜಿಪಿ ಸಿಂಗ್ ಅಭಿನಂದನೆ ಸಲ್ಲಿಸಿದ್ದಾರೆ.
ಈ ಇಬ್ಬರೂ ದಂಪತಿಗಳು ಕಳೆದ 10 ದಿನಗಳಿಂದ ತಲೆ ಮರೆಸಿಕೊಂಡು ಓಡಾಡುತ್ತಿದ್ದರು. ಇದೀಗ, ಅವರು ದಿಬ್ರುಗಢದಲ್ಲಿ ಪೊಲೀಸರ ಮುಂದೆ ಶರಣಾಗಿದ್ದಾರೆ. ಅವರನ್ನು ಎಸ್‌ಟಿಎಫ್ ವಶಕ್ಕೆ ಪಡೆದುಕೊಂಡಿದೆ.
ರಾಜಸ್ಥಾನದಲ್ಲಿ ನಡೆದ ತನ್ನ ಅದ್ದೂರಿ ಮದುವೆಯಲ್ಲಿ ಸುಮಿ ಬೋರಾ ಅವರು ಫುಕನ್‌ನಿಂದ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ, ಅವರು ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿತ್ತು.
ಫುಕನ್ ಬಂಧನದ ಬಳಿಕ ಸುಮಿ ಬೋರಾ ಮತ್ತು ಅವರ ಪತಿ ತಾರ್ಕಿಕ್ ಬೋರಾ ತಲೆಮರೆಸಿಕೊಂಡಿದ್ದರು. ಬುಧವಾರ, ತಾವು ಪೊಲೀಸರಿಗೆ ಶರಣಾಗುವುದಾಗಿ ಸೋಷಿಯಲ್ ಮೀಡಿಯಾ ಮೂಲಕ ಸುಮಿ ಬೋರಾ ಘೋಷಿಸಿದ್ದರು. “ತಾವು ಯಾವುದೇ ಹಣಕಾಸಿನ ವಂಚನೆಯಲ್ಲಿ ಭಾಗಿಯಾಗಿಲ್ಲ. ಮಾಧ್ಯಮಗಳ ಪ್ರಯೋಗಕ್ಕೆ ತಾವು ಬಲಿಪಶುಗಳಾಗಿದ್ದೇವೆ” ಎಂದೂ ಸುಮಿ ಬೋರಾ ಹೇಳಿಕೊಂಡಿದ್ದಾರೆ.
“ಫುಕನ್ ಮತ್ತು ಆತನ ಸಹಚರರು 60 ದಿನಗಳಲ್ಲಿ 30% ಲಾಭ ಬರುವಂತೆ ಮಾಡಿಕೊಡುತ್ತೇವೆಂದು ಅಮಿಷವೊಡ್ಡಿ ತಮ್ಮ ನಕಲಿ ಷೇರು ಮಾರುಕಟ್ಟೆಯಲ್ಲಿ ಜನರು ಹೂಡಿಕೆ ಮಾಡುವಂತೆ ಮಾಡಿದ್ದರು. ಆರಮಭದಲ್ಲಿ ಸಣ್ಣ ಪ್ರಮಾಣದ ಹೂಡಿಕೆಗಳಿಗೆ ಲಾಭ ನೀಡುವ ಮೂಲಕ ಜನರ ವಿಶ್ವಾಸ ಗಳಿಸಿದ್ದರು. ದೊಡ್ಡ ಮೊತ್ತದ ಹೂಡಿಕೆಗಳನ್ನು ಪಡೆದಿಕೊಂಡು, ಸುಮಾರು 1,500ಕ್ಕೂ ಹೆಚ್ಚು ಜನರಿಗೆ ವಂಚಿಸಿದ್ದಾರೆ. ಅವರಾರಿಗೂ ಹಣವನ್ನು ಹಿಂದುರುಗಿಸಿಲ್ಲ. ಬರೋಬ್ಬರಿ 2,200 ಕೋಟಿ ರೂ. ಹಣವನ್ನು ವಂಚಿಸಲಾಗಿದೆ” ಎಂಬುದು ತನಿಖೆ ಸಮಯದಲ್ಲಿ ತಿಳಿದುಬಂದಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಫುಕನ್ ಮತ್ತು ದಾಸ್ ಇಬ್ಬರೂ ಐಷಾರಾಮಿ ಕಾರುಗಳನ್ನು ಖರೀದಿಸಿ, ಅದ್ದೂರಿ ಜೀವನ ನಡೆಸುತ್ತಿದ್ದರು. ಫುಕನ್ – ತನ್ನನ್ನು ತಾನು ಕೈಗಾರಿಕೋದ್ಯಮಿ, ಗಾಯಕ ಮತ್ತು ಸಂಗೀತ ಸಂಯೋಜಕ ಎಂದು ಬಿಂಬಿಸಿಕೊಂಡಿದ್ದರೆ, ದಾಸ್ – ತಾನು ವಾಣಿಜ್ಯೋದ್ಯಮಿ ಎಂದು ಹೇಳಿಕೊಂಡಿದ್ದರು.