ಪರಿಶಿಷ್ಟರ ಕಾಲೇಜು ಶಿಕ್ಷಣ | ಡಾ ಅಂಬೇಡ್ಕರ್ ಆಶಯ ಇನ್ನೂ ಈಡೇರಿಲ್ಲ

Date:

Advertisements

ಈಗಲೂ ಪದವಿ, ಸ್ನಾತಕೋತ್ತರ ಪದವಿ ಶಿಕ್ಷಣ ದಲಿತರಿಗೆ ಗಗನ ಕುಸುಮವಾಗುತ್ತಿದೆ. ಶಿಕ್ಷಣ ಖಾಸಗೀಕರಣಗೊಂಡು, ತಾಂತ್ರಿಕ ಮತ್ತು ಮೆಡಿಕಲ್ ಕಾಲೇಜುಗಳ ಶೈಕ್ಷಣಿಕ ಶುಲ್ಕ ದುಬಾರಿಯಾಗಿ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಪ್ರವೇಶ ಈಗ ಮತ್ತಷ್ಟು ಕ್ಲಿಷ್ಟಕರವಾಗುತ್ತಿದೆ

ಪರಿಶಿಷ್ಟ ಜಾತಿ ಅಥವಾ ಶೋಷಿತ ಸಮುದಾಯ ಅಥವಾ ದಲಿತ ಸಮುದಾಯದ ಶಿಕ್ಷಣದ ಬಗ್ಗೆ ಬಾಬಾಸಾಹೇಬ್ ಅಂಬೇಡ್ಕರರಿಗೆ ಅಪಾರವಾದ ಕಾಳಜಿ ಇತ್ತು. ನಿಜ ಹೇಳಬೇಕೆಂದರೆ Educate Agitate Organise ’ಶಿಕ್ಷಣ ಪಡೆಯಿರಿ, ಹೋರಾಡಿ, ಸಂಘಟಿತರಾಗಿ’ ಎಂಬ ಅವರ ಆ ಅದ್ಭುತ ಘೋಷಣೆಯಲ್ಲಿಯೇ ಶಿಕ್ಷಣಕ್ಕೆ ಅವರು ನೀಡಿದ್ದ ಮಹತ್ವ ಏನು ಎಂಬುದು ಅರ್ಥವಾಗುತ್ತದೆ. ಸ್ವತಃ ಡಾ ಅಂಬೇಡ್ಕರ್ ಕೂಡ ಆ ಕಾಲದಲ್ಲಿ ಇಡೀ ದೇಶದಲ್ಲಿಯೇ ಅತ್ಯುತ್ಕೃಷ್ಟ ಪದವಿಗಳನ್ನು ಪಡೆದ ಕೆಲವೇ ಕೆಲವು ಭಾರತೀಯರಲ್ಲಿ ಒಬ್ಬರಾಗಿದ್ದರು. ಆದ್ದರಿಂದ ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಶಿಕ್ಷಣದ ಮಹತ್ವ ಚೆನ್ನಾಗಿ ಗೊತ್ತಿತ್ತು.

ಆದರೆ, ತಮ್ಮ ಶೈಕ್ಷಣಿಕ ಪಯಣದ ಅರಿವಿದ್ದ ಬಾಬಾಸಾಹೇಬ್ ಅಂಬೇಡ್ಕರ್‌ರವರಿಗೆ ಆ ಹಿನ್ನೆಲೆಯಲ್ಲಿ ತಾನು ಪಟ್ಟ ಕಷ್ಟದ ಕಾರಣ, ತನ್ನ ಹಾಗೆ ತನ್ನ ಇಡೀ ಶೋಷಿತ ಸಮಾಜದ ಜನರು ಶಿಕ್ಷಣ ಪಡೆಯಲು ಸಾಧ್ಯವಿಲ್ಲ ಎಂಬುದರ ಅರಿವು ಇತ್ತು. ಯಾಕೆಂದರೆ ಶಿಕ್ಷಣ ಪಡೆಯಲು ಇರುವ ಕಷ್ಟಗಳು, ಅದರಲ್ಲೂ ಉನ್ನತ ಶಿಕ್ಷಣಕ್ಕಾಗಿ ಕಾಲೇಜು ಶಿಕ್ಷಣ ಸಂಸ್ಥೆಗಳನ್ನು ಸೇರಲು ಪಡಬೇಕಾದ ಶ್ರಮ. ಅದು ಅವರಿಗೆ ಅನುಭವಜನ್ಯವಾಗಿತ್ತು. ಆದ ಕಾರಣ ತನ್ನ ಜನರು ತನ್ನ ಹಾಗೆ ಕಷ್ಟಪಡಬಾರದು ಎಂಬ ನಿಟ್ಟಿನಲ್ಲಿ, ಪರಿಶಿಷ್ಟ ಜಾತಿ ಜನರ ಕಾಲೇಜು ಶಿಕ್ಷಣದ ಹಾದಿಯನ್ನು ಸುಗಮಗೊಳಿಸಲು ತಾವೇ ಪರಿಶಿಷ್ಟರಿಗಾಗಿ ಒಂದು ಕಾಲೇಜು ತೆರೆಯಲು ನಿರ್ಧರಿಸುತ್ತಾರೆ. ಇದಕ್ಕಾಗಿ ಸರ್ಕಾರ 6 ಲಕ್ಷ ರೂ.ಗಳ ಸಹಾಯ ನೀಡಬೇಕೆಂದು ಅವರು 1945 ಫೆಬ್ರವರಿಯಲ್ಲಿ ಅಂದಿನ ಬ್ರಿಟಿಷ್ ಸರ್ಕಾರಕ್ಕೆ ಪತ್ರ ಬರೆಯುತ್ತಾರೆ. (ಡಾ.ಅಂಬೇಡ್ಕರ್ ಬರಹಗಳು, ಇಂಗ್ಲಿಷ್ ಸಂ.17, ಭಾಗ.2, ಪು.425) ಈ ಪತ್ರದಲ್ಲಿ ಪರಿಶಿಷ್ಟರ ಕಾಲೇಜು ಶಿಕ್ಷಣ ಪ್ರವೇಶದ ಕುರಿತ ಡಾ.ಅಂಬೇಡ್ಕರರ ವಿಚಾರಗಳು ನಮಗೆ ಸಿಗುತ್ತವೆ.

Advertisements

ಡಾ. ಅಂಬೇಡ್ಕರರು ಹೇಳುತ್ತಾರೆ, “ಕಾಲೇಜು ಹಂತ ತಲುಪಿದಾಗ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳು ಏಕೆ ಶಿಕ್ಷಣದಿಂದ ಹೊರ ಉಳಿಯುತ್ತಾರೆ ಎಂಬುದಕ್ಕೆ ಅನೇಕ ಕಾರಣಗಳಿವೆ. ಅದರಲ್ಲಿ ಮೊಟ್ಟ ಮೊದಲನೆಯದು ಮತ್ತು ಅತಿ ಮುಖ್ಯವಾದ ಕಾರಣ ಬಡತನ. ಎರಡನೆಯದು ಕಾಲೇಜಿಗೆ ಪ್ರವೇಶ ಪಡೆಯಲು ಇರುವ ತೊಂದರೆ. ಮೂರನೆಯದು ವಿದ್ಯಾರ್ಥಿವೇತನದ ಕೊರತೆ. ನಾಲ್ಕನೆಯದು ಹಾಸ್ಟೆಲ್‌ಗಳ ಕೊರತೆ. ಈ ನಿಟ್ಟಿನಲ್ಲಿ ಈ ಸಮಸ್ಯೆಗಳಲ್ಲಿ ಕೆಲವನ್ನು ಸರ್ಕಾರದಿಂದ ಹಣಕಾಸು ನೆರವು ಪಡೆಯುವುದರ ಮೂಲಕ ನಿವಾರಿಸಿಕೊಳ್ಳಬಹುದು. ಆದರೆ, ಒಂದು ಸಮಸ್ಯೆ, ಅದು ಹಣಕಾಸು ನೆರವಿನಿಂದ ಬಗೆಹರಿಸಲು ಸಾಧ್ಯವಾಗದೆ ಇರುವಂತಹದ್ದು. ಅದು ಕಾಲೇಜಿನ ಪ್ರವೇಶಾತಿಗೆ ಸಂಬಂಧಪಟ್ಟಿದ್ದು.

ಏಕೆಂದರೆ ಕಾಲೇಜಿನ ಪ್ರವೇಶ ಅದು ಸರ್ಕಾರದ ಅಥವಾ ವಿಶ್ವವಿದ್ಯಾಲಯ ನಿರ್ದಿಷ್ಟಪಡಿಸಿದ ನಿರ್ದಿಷ್ಟ ಸಂಖ್ಯೆಯ ಸೀಟುಗಳ ಆಧಾರದ ಮೇಲೆ ನಡೆಯುತ್ತದೆ. ನಿರ್ದಿಷ್ಟ ಸಂಖ್ಯೆಯ ವಿದ್ಯಾರ್ಥಿಗಳು ಮಾತ್ರ ಇದಕ್ಕೆ ಪ್ರವೇಶ ಪಡೆಯಬಹುದಾಗಿರುತ್ತದೆ. ಈ ನಿಟ್ಟಿನಲ್ಲಿ ಇದು ಕಾಲೇಜು ಶಿಕ್ಷಣ ಪಡೆಯಲು ಬಯಸುವ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಶೈಕ್ಷಣಿಕ ಹಾದಿಗೆ ದೊಡ್ಡ ತಡೆಗೋಡೆಯನ್ನು ಸೃಷ್ಟಿಸುತ್ತದೆ. ಮೇಲ್ನೋಟಕ್ಕೆ ಇದು ಸಾಮಾನ್ಯ ಸಮಸ್ಯೆ ಎಂದು ಅನಿಸಬಹುದು. ಆದರೆ ಇತರೆ ಜಾತಿಯ ವಿದ್ಯಾರ್ಥಿಗಳಿಗೆ ಹೋಲಿಸಿದರೆ ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ಖಂಡಿತ ಇದು ದೊಡ್ಡ ಮಟ್ಟದ ಹೊಡೆತ ನೀಡುತ್ತದೆ. ಇದು ಏಕೆಂದರೆ ಕಾಲೇಜು ಶಿಕ್ಷಣ ಅದು ಬಹುತೇಕ ಖಾಸಗಿಯವರಿಂದ ನಡೆಸಲ್ಪಡುತ್ತಿವೆ ಮತ್ತು ಅಂತಹ ಬಹುತೇಕ ಕಾಲೇಜುಗಳು ತಮ್ಮ ಸಂಘಟನಾತ್ಮಕ ಮತ್ತು ತಮ್ಮ ಆಡಳಿತಾತ್ಮಕ ಸಿಬ್ಬಂದಿ ರೂಪದಲ್ಲಿ ಜಾತಿವಾದಿಗಳಾಗಿವೆ. ಈ ನಿಟ್ಟಿನಲ್ಲಿ ಅಂತಹ ಕಾಲೇಜುಗಳ ಸಂಪೂರ್ಣ ನೋಟ ಬಹುತೇಕ ಜಾತಿವಾದಿ ರೂಪದ್ದೇ ಆಗಿರುತ್ತದೆ. ಪರಿಣಾಮವೆಂದರೆ ಕೆಲ ವಿಶೇಷ ಸಮುದಾಯಗಳು ಮತ್ತು ಮೇಲ್ವರ್ಗದ ಸಮುದಾಯಗಳಿಗೆ ಸೇರಿದ ವಿದ್ಯಾರ್ಥಿಗಳು ಪ್ರವೇಶಾತಿ ಸಂದರ್ಭದಲ್ಲಿ ಪ್ರಮುಖವಾಗಿ ಆದ್ಯತೆ ಪಡೆಯುತ್ತಾರೆ. ಪರಿಶಿಷ್ಟ ಜಾತಿಗೆ ಸೇರಿದ ವಿದ್ಯಾರ್ಥಿಗಳಿಗೆ ಸೀಟು ಭರ್ತಿಯಾಗಿದೆ ಎಂಬ ಕಾರಣವೊಡ್ಡಿ ಪ್ರವೇಶ ನಿರಾಕರಿಸಲಾಗುತ್ತದೆ ಅಥವಾ ಕೆಲವೇ ಸ್ಥಾನಗಳು ಉಳಿದಿದ್ದಾಗ ಮಾತ್ರ ಅವರ ಪ್ರವೇಶ ಪರಿಗಣಿಸಲಾಗುತ್ತದೆ!….”.

ಹೀಗೆ ಹೇಳುತ್ತಾ ಬಾಬಾಸಾಹೇಬ್ ಅಂಬೇಡ್ಕರ್‌ರವರು ಇದರ ಪರಿಹಾರಕ್ಕಾಗಿ ಪರಿಶಿಷ್ಟರ ಶಿಕ್ಷಣವನ್ನೇ ಪ್ರಧಾನ ಗುರಿಯಾಗಿಸಿಕೊಂಡು ನಿರ್ದಿಷ್ಟಪಡಿಸಿದ ಕೇಂದ್ರಗಳಲ್ಲಿ ಕಾಲೇಜುಗಳನ್ನು ಸ್ಥಾಪಿಸಬೇಕಾದ ಅಗತ್ಯವನ್ನು ಒತ್ತಿ ಹೇಳುತ್ತಾರೆ. ಈ ಕಾರಣಕ್ಕಾಗಿ ಅಂದಿನ ಬ್ರಿಟಿಷ್ ಸರ್ಕಾರದಿಂದ 6 ಲಕ್ಷ ರೂ.ಗಳ ಸಹಾಯಧನ ಕೇಳುವ ಅವರು ಅದರ ಮೂಲಕ “ಪೀಪಲ್ಸ್ ಎಜುಕೇಶನ್ ಸೊಸೈಟಿ” ಎಂಬ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸುತ್ತಾರೆ ಮತ್ತು ಆ ಸಂಸ್ಥೆಯ ಮೂಲಕ ಮಹಾರಾಷ್ಟ್ರದಾದ್ಯಂತ ಸುಮಾರು 50ಕ್ಕೂ ಹೆಚ್ಚು ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ತೆರೆಯುತ್ತಾರೆ.

ದುರಂತವೆಂದರೆ ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಂದು ಹೇಳಿದ ಪರಿಶಿಷ್ಟ ಜಾತಿಗಳ ಕಾಲೇಜು ಶಿಕ್ಷಣದ ಆಶಯ ಇಂದು ಕೂಡ ಪರಿಹಾರ ಕಂಡಿಲ್ಲದಿರುವುದು! ಈಗಲೂ ಉನ್ನತ ಶಿಕ್ಷಣದ ಪದವಿಗಳ /ಸ್ನಾತಕೋತ್ತರ ಪದವಿಗಳ ಕಾಲೇಜು ಶಿಕ್ಷಣ ದಲಿತರಿಗೆ ಗಗನ ಕುಸುಮವಾಗುತ್ತಿದೆ. ಶಿಕ್ಷಣ ಖಾಸಗೀಕರಣಗೊಂಡು, ತಾಂತ್ರಿಕ ಮತ್ತು ಮೆಡಿಕಲ್ ಕಾಲೇಜುಗಳ ಶೈಕ್ಷಣಿಕ ಶುಲ್ಕ ದುಬಾರಿಗೊಂಡು ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳ ಪ್ರವೇಶ ಬಾಬಾಸಾಹೇಬ್ ಅಂಬೇಡ್ಕರ್ ಅವರು ಅಂದು ಹೇಳಿದಂತಹ ಮಾದರಿಯಲ್ಲಿ ಈಗ ಮತ್ತಷ್ಟು ಕ್ಲಿಷ್ಟಕರವಾಗುತ್ತಿದೆ. ವಿಶ್ವವಿದ್ಯಾಲಯಗಳ ಪದವಿ ಕಾಲೇಜುಗಳ ಪ್ರವೇಶಕ್ಕೂ ಪರಿಶಿಷ್ಟಜಾತಿಗಳ ವಿದ್ಯಾರ್ಥಿಗಳು ಕಷ್ಟಪಡುವಂತಹ ವಾತಾವರಣ ಇಂದು ನಿರ್ಮಾಣವಾಗಿದೆ.

ಇದನ್ನೂ ಓದಿ ಒಕ್ಕೂಟ ವ್ಯವಸ್ಥೆ ಉಳಿಯಲು ಸಾಮುದಾಯಿಕವಾಗಿ ಸೆಣಸುವ ಅಗತ್ಯವಿದೆ: ಡಾ ಜಿ ರಾಮಕೃಷ್ಣ

ಆದ್ದರಿಂದ ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗೆ ಕಾಲೇಜು ಮತ್ತು ಉನ್ನತ ಶಿಕ್ಷಣದ ಎಲ್ಲಾ ಪ್ರವೇಶಗಳು ಉಚಿತ ಅಥವಾ ಶುಲ್ಕ ಕಡಿಮೆ ಇರುವ ರೀತಿಯದ್ದಾಗಿರಬೇಕು. ಆ ಮೂಲಕ ಉನ್ನತ ಶಿಕ್ಷಣ ಪರಿಶಿಷ್ಟ ಜಾತಿಗಳ ವಿದ್ಯಾರ್ಥಿಗಳಿಗೆ ಸುಲಭವಾಗಿ ತಲುಪುವ, ಪ್ರವೇಶ ಸರಳವಾಗುವಂತಹ ವಾತಾವರಣ ನಿರ್ಮಾಣಗೊಳ್ಳಬೇಕು. ಆಗಷ್ಟೇ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪರಿಶಿಷ್ಟರ ಕಾಲೇಜು ಶಿಕ್ಷಣದ ಈ ಚಿಂತನೆಗಳ ಆಶಯ ಸಾಕಾರಗೊಳ್ಳಲು ಸಾಧ್ಯ.

ರಘೋತ್ತಮ ಹೊ ಬ
ರಘೋತ್ತಮ ಹೊ.ಬ
+ posts

ಲೇಖಕ

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಒಳಮೀಸಲಾತಿ | ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಸಾಹಿತಿ ದೇವನೂರ ಮಹಾದೇವ ಬಹಿರಂಗ ಪತ್ರ

ಜಸ್ಟಿಸ್‌ ದಾಸ್ ಆಯೋಗವು ಒಳಮೀಸಲಾತಿ ಕುರಿತ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಆ...

ಮತದಾರ ಪಟ್ಟಿ ಅಳಿಸಿ ತಪ್ಪಿಸಿಕೊಳ್ಳುತ್ತಿರುವ ಆಯೋಗ: ದೇಶದ ಪ್ರತಿಯೊಬ್ಬರೂ ಕೂಡ ಪ್ರಶ್ನೆಗೆ ಅರ್ಹರು

ದೇಶದ ಜನತೆ ಜಾಗೃತರಾಗಿ, ಈ ಅಸಮರ್ಪಕತೆಗಳ ವಿರುದ್ಧ ಧ್ವನಿ ಎತ್ತಿದರೆ ಮಾತ್ರ...

ಪೆಟ್ರೋಲ್‌ಗೆ ಇಥೆನಾಲ್ ಮಿಶ್ರಣ: ಪರಿಸರಕ್ಕೆ ಚೂರು ಲಾಭ, ವಾಹನಗಳಿಗೆ ಹೆಚ್ಚು ಅಪಾಯಕಾರಿ

ಇ20 ಮಿಶ್ರಣವು ಪರಿಸರಕ್ಕೆ ಒಂಚೂರು ಲಾಭದಾಯಕವಾದರೂ, ವಾಹನಗಳಿಗೆ ಅದರಲ್ಲೂ ಹಳೆಯ ಮಾದರಿ...

ಹೊಸ ಆದಾಯ ತೆರಿಗೆ ಮಸೂದೆ 2025: ಬದಲಾವಣೆಗಳು – ಅನಾನುಕೂಲಗಳು ಏನೇನು?

ನೂತನ ಮಸೂದೆಯು ಹಳೆಯ ಕಾಯ್ದೆಯನ್ನು ಸಂಪೂರ್ಣವಾಗಿ ಬದಲಿಸುವ ಗುರಿ ಹೊಂದಿದ್ದು, ತೆರಿಗೆ...

Download Eedina App Android / iOS

X