ಮುಂಬರುವ ಸಾರ್ವಜನಿಕ ಗಣೇಶೋತ್ಸವದಲ್ಲಿ ನಾಗರಿಕರು ಶಾಂತಿ ಸೌಹಾರ್ದತೆ ಕಾಪಾಡಬೇಕು ಎಂದು ಅಬಕಾರಿ ಸಚಿವ ಹಾಗೂ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ ತಿಳಿಸಿದರು.
ಮುಧೋಳ ಪಟ್ಟಣದಲ್ಲಿ ಶಿವಸೇನೆ ಗಜಾನನ ಉತ್ಸವ ಸಮಿತಿ ಆಯೋಜಿಸಿದ್ದ ಪೂಜಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಾರ್ವಜನಿಕರಲ್ಲಿ ಮನವಿ ಮಾಡಿದರು. ನಂತರ ವಿವಿಧ ಸಾರ್ವಜನಿಕ ಗಣೇಶೋತ್ಸವ ಮಂಡಳಿ ಪ್ರತಿಷ್ಠಾನಗಳಿಗೆ ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿ, ನಾಗರಿಕರೊಂದಿಗೆ ಸಂವಾದ ನಡೆಸಿ, ಅಧಿಕಾರಿಗಳೊಂದಿಗೆ ಸಹಕರಿಸಲು ಮತ್ತು ನಿಗದಿತ ದಿನದಂದು ಶಾಂತಿಯುತವಾಗಿ ಆಚರಿಸಲು ತಿಳಿಸಿದರು.
ಸುಗಮ ಆಚರಣೆಗೆ ಪೊಲೀಸ್ ಇಲಾಖೆ ಅಗತ್ಯ ಜನಸಂದಣಿ ನಿರ್ವಹಣೆ ಮತ್ತು ಭದ್ರತಾ ವ್ಯವಸ್ಥೆ ಮಾಡಿದೆ. ವಿವಿಧ ಸಮುದಾಯಗಳ ನಡುವೆ ಶಾಂತಿ ಮತ್ತು ನೆಮ್ಮದಿಯನ್ನು ಕಾಪಾಡುವ ಮಹತ್ವವನ್ನು ಒತ್ತಿ ಹೇಳಿದ ಅವರು, ಎಲ್ಲರಿಗೂ ಸ್ಮರಣೀಯ ಮತ್ತು ಆನಂದದಾಯಕವಾಗಿ ಹಬ್ಬವನ್ನು ಆಚರಿಸಲು ಕರೆಕೊಟ್ಟರು.
ಈ ಸಂದರ್ಭದಲ್ಲಿ ಸಂಜಯ ತಳೇವಾಡ, ಬಸವಂತ ಕಾಟೆ, ರಘು ಮೊಕಾಶಿ, ಸಂತೋಷ ನಿಂಬಾಳ್ಕರ, ಕಲ್ಮೇಶ ಹನಗುಜಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.