ಬಸವ ಧರ್ಮ ಪೀಠದ ಸ್ವಾಭಿಮಾನಿ ಶರಣರ ಬಳಗದ ವತಿಯಿಂದ ಅಕ್ಟೋಬರ್ 19 ಮತ್ತು 20 ರಂದು ಶರಣ ಭೂಮಿ ಬಸವಕಲ್ಯಾಣದಲ್ಲಿ ಸ್ವಾಭಿಮಾನಿ ಕಲ್ಯಾಣ ಪರ್ವ ಆಯೋಜಿಸಲಾಗಿದೆ ಎಂದು ಬೆಂಗಳೂರಿನ ಬಸವ ಗಂಗೋತ್ರಿಯ ಚನ್ನಬಸವೇಶ್ವರ ಜ್ಞಾನಪೀಠದ ಪೀಠಾಧ್ಯಕ್ಷ ಡಾ.ಚನ್ನಬಸವಾನಂದ ಸ್ವಾಮೀಜಿ ತಿಳಿಸಿದರು.
ಬೀದರ್ ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ʼ ಕಲ್ಯಾಣ ಪರ್ವದಲ್ಲಿ ತೆಲಂಗಾಣ, ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಬಸವ ಭಕ್ತರು ಪಾಲ್ಗೊಳ್ಳುತ್ತಿದ್ದಾರೆʼ ಎಂದರು.
ʼಅ.19 ರಂದು ಬೆಳಿಗ್ಗೆ 5 ಗಂಟೆಗೆ ಸಾಮೂಹಿಕ ಇಷ್ಟಲಿಂಗ ಪೂಜೆ, ನಂತರ 11 ಕ್ಕೆ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಬಸವ ಚಿಂತನ ಪ್ರಭೆಯ ಮೂಲಕ ವೇದಿಕೆಯ ದೈವೀಕರಣ ನಡೆಯಲಿದೆ. ಸಂಜೆ 5 ಕ್ಕೆ ಧರ್ಮಚಿಂತನ ಗೋಷ್ಠಿ-1 ಜರುಗಲಿದೆ. ಅ.20 ರಂದು ಬೆಳಿಗ್ಗೆ 8ಕ್ಕೆ ಸಾಮೂಹಿಕ ಪ್ರಾರ್ಥನೆ, ಇಷ್ಟಲಿಂಗ ಪೂಜೆ ಹಾಗೂ ಬೆ.10:30 ಕ್ಕೆ ಶರಣ ವಂದನೆ 770 ಶರಣರಿಗೆ ಶರಣಾರ್ಥಿ ಹೃದಯಸ್ಪರ್ಶಿ ಕಾರ್ಯಕ್ರಮ ನಡೆಯಲಿದೆʼ ಎಂದರು ವಿವರಿಸಿದರು.
ʼಅ.20ರಂದು ಮಧ್ಯಾಹ್ನ 12 ರಿಂದ 2 ರವರೆಗೆ ಮಹಿಳಾಗೋಷ್ಠಿ 3 ರಿಂದ 5 ರವರೆಗೆ ಯುವಗೋಷ್ಠಿ ನಡೆಯಲಿದ್ದು, ಅಂದು ಸಾಯಂಕಾಲ ಸಮಾರೋಪ ಸಮಾರಂಭವಾಗಲಿದೆ. ಕಾರ್ಯಕ್ರಮಕ್ಕೆ ಆಗಮಿಸುವ ಬಸವ ಭಕ್ತರಿಗೆ ಪ್ರಸಾದ, ವಸತಿ ವ್ಯವಸ್ಥೆ ಇರಲಿದೆ. ಆದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕುʼ ಎಂದು ಶ್ರೀಗಳು ಮನವಿ ಮಾಡಿದರು.
ಬೀದರ ಬಸವ ಮಂಟಪದ ಸಂಚಾಲಕರು ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾ ಗಣದ ರಾಷ್ಟ್ರೀಯ ಅಧ್ಯಕ್ಷೆ ಪೂಜ್ಯ ಸತ್ಯಾದೇವಿ ಮಾತಾಜಿ ಮಾತನಾಡಿ, ʼಸ್ವಾಭಿಮಾನಿ ಕಲ್ಯಾಣ ಪರ್ವ ಎಂದರೆ ಕಲ್ಯಾಣದ ಹಬ್ಬ. ಪ್ರತಿಯೊಬ್ಬರೂ ಭಾಗವಹಿಸುವುದು ತಮ್ಮ ಆದ್ಯ ಕರ್ತವ್ಯ. ಮಹಿಳಾ ಗೋಷ್ಠಿಯಲ್ಲಿ ಮಹಿಳೆಯರ ಜ್ವಲಂತ ಸಮಸ್ಯೆಗಳು ಹಾಗೂ ಇತರೆ ವಿಷಯಗಳ ಚರ್ಚೆ ನಡೆಯಲಿದೆ. ಹೀಗಾಗಿ ಶರಣ ಬಂಧುಗಳು ತನು, ಮನ, ಧನ, ಸಮಯ, ಅಭಿಮಾನ ದಾಸೋಹಗೈದು ಕಾರ್ಯಕ್ರಮ ಯಶಸ್ವಿಗೊಳಿಸಬೇಕುʼ ಎಂದು ಕೋರಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ತಲೆ ಮೇಲೆ ಶಾಲಾ ವಾಹನ ಹರಿದು 3 ವರ್ಷದ ಬಾಲಕಿ ಸಾವು
ಲಿಂಗಾಯತ ಧರ್ಮ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜ ಪಾಟೀಲ ಅತಿವಾಳ, ರಾಷ್ಟ್ರೀಯ ಬಸವ ದಳದ ಜಿಲ್ಲಾ ಉಪಾಧ್ಯಕ್ಷ ಶಿವಶರಣಪ್ಪ ಪಾಟೀಲ ಹಾರೂರಗೇರಿ, ಲಿಂಗಾಯತ ಧರ್ಮ ಮಹಾಸಭಾದ ಔರಾದ ತಾಲೂಕಾಧ್ಯಕ್ಷ ಕಲ್ಲಪ್ಪ ದೇಶಮುಖ, ಪ್ರಮುಖರಾದ ಬಸವಂತರಾವ ಬಿರಾದಾರ, ರವಿಕಾಂತ ಬಿರಾದಾರ, ನಿರ್ಮಲಾ ನಿಲಂಗೆ, ಮಲ್ಲಿಕಾರ್ಜುನ ಬಿರಾದಾರ ಸಂಗಮ, ಮಲ್ಲಿಕಾರ್ಜುನ ಶಹಾಪುರ, ಓಂಪ್ರಕಾಶ ರೊಟ್ಟೆ, ಸೇರಿದಂತೆ ಇನ್ನಿತರರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.