ಯಾದಗಿರಿ ನಗರದಲ್ಲಿ ನಿರ್ಮಾಣವಾಗಿರುವ ನೂತನ ಪೊಲೀಸ್ ಠಾಣೆ ಕಚೇರಿಯನ್ನು ಒಂದುವಾರದೊಳಗೆ ಉದ್ಘಾಟಿಸದಿದ್ದರೆ ಜಾಲಿಮುಳ್ಳು ಬೇಲಿ ಬಡಿಯಬೇಕಾಗುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ಉಮೇಶ್ ಮುದ್ನಾಳ್ ಪೊಲೀಸ್ ಆಡಳಿತಕ್ಕೆ ಎಚ್ಚರಿಕೆ ನೀಡಿದ್ದಾರೆ.
“ಯಾದಗಿರಿ ನಗರದ ಹೃದಯಭಾಗದಲ್ಲಿರುವ ಪ್ರಮುಖ ಗಾಂಧಿಚೌಕದಲ್ಲಿ ಸುಮಾರು ₹1.65 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಪೊಲೀಸ್ ಠಾಣೆ ಕಟ್ಟಡಕ್ಕೆ ಉದ್ಘಾಟನೆ ಭಾಗ್ಯ ಕಂಡಿಲ್ಲ. ಕಚೇರಿ ಕಟ್ಟಡ ಕಾಮಗಾರಿ ಮುಗಿದು ಒಂದು ವರ್ಷ ಗತಿಸಿದರೂ ಪೊಲೀಸ್ ಠಾಣೆ ಉದ್ಘಾಟಿಸಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
“ಎಂಟು ತಿಂಗಳ ಹಿಂದೆಯೇ ಪೊಲೀಸ್ ಹೌಸಿಂಗ್ ಕಾರ್ಪೊರೇಷನ್ ಪೊಲೀಸ್ ವರಿಷ್ಠಾಧಿಕಾರಿಗೆ ಹಸ್ತಾಂತರ ಮಾಡಿದೆ. ಆದರೆ ಪೊಲೀಸ್ ವರಿಷ್ಠಾಧಿಕಾರಿಗಳು ಈವರೆಗೆ ನೂತನ ಕಟ್ಟಡವನ್ನು ಉದ್ಘಾಟನೆ ಮಾಡುವ ಗೋಜಿಗೆ ಹೋಗಿಲ್ಲ. ಯಾದಗಿರಿ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಜಿ. ಸಂಗೀತಾ ಅವರು ಅಧಿಕಾರ ಸ್ವೀಕರಿಸಿ ಒಂದು ವರ್ಷ ಪೂರೈಸಿದೆ. ಆದರೆ ಈವರೆಗೂ ಸರ್ಕಾರ ಹಾಗೂ ಜಿಲ್ಲಾಡಳಿತದ ಗಮನಕ್ಕೆ ತಂದು ಚರ್ಚೆ ನಡೆಸುವ ಉಸಾಬರಿಗೂ ಹೋಗಿಲ್ಲ. ಹೀಗಾಗಿ ಕೋಟ್ಯಂತರ ವೆಚ್ಚದಲ್ಲಿ ನಿರ್ಮಾಣಗೊಂಡ ಸುಸಜ್ಜಿತ ಕಟ್ಟಡ ಪುಂಡ ಪೋಕರಿಗಳ ಅಡ್ಡವಾಗಿ ಮಾರ್ಪಟ್ಟಿದೆ. ಸರ್ಕಾರ ಕುಂಟುನೆಪ ಹೇಳದೆ ಕೂಡಲೇ ಪೊಲೀಸ್ ಠಾಣೆ ಕಚೇರಿ ಉದ್ಘಾಟನೆ ಮಾಡಬೇಕು” ಎಂದು ಆಗ್ರಹಿಸಿದ್ದಾರೆ.
“ಯಾದಗಿರಿ ಜಿಲ್ಲಾ ಕೇಂದ್ರವಾಗಿ 14 ವರ್ಷ ಕಳೆದ ಬಳಿಕ ನಿಜಾಮರ ಕಾಲದಲ್ಲಿ ನಿರ್ಮಿಸಿದ ಪೊಲೀಸ್ ಠಾಣೆ ಕಟ್ಟಡ ಕೆಡವಿ ಸುಸಜ್ಜಿತ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ಉದ್ಘಾಟನೆ ಮಾಡದಿರೋದು ದುರ್ದೈವದ ಸಂಗತಿಯಾಗಿದೆ. ಯಾದಗಿರಿ ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸ್ತಿರುವ ಪೊಲೀಸರ ಸ್ಥಿತಿಯೇ ಕೈದಿಗಳ ಸ್ಥಿತಿಯಾಗಿದೆ. ಪೊಲೀಸ್ ವಸತಿನಿಲಯದಲ್ಲಿ ಜಾಗವಿಲ್ಲದಂತಾಗಿದೆ. ಹಾಗಾಗಿ ಕೂಡಲೇ ನೂತನ ಕಟ್ಟಡ ಉದ್ಘಾಟಿಸಿ ಕಚೇರಿ ಮಾಡಿಕೊಳ್ಳಿ. ಇಲ್ಲವಾದಲ್ಲಿ ಪೊಲೀಸ್ ವಸತಿನಿಲಯವನ್ನು ಬಾಡಿಗೆಗೆ ಕೊಟ್ಟರೆ ಬಾಡಿಗೆ ಹಣವಾದರೂ ಬಂದು ಸರ್ಕಾರದ ಬೊಕ್ಕಸಕ್ಕೆ ಹೋಗುತ್ತದೆ. ಪೊಲೀಸ್ ಠಾಣೆ ಕಟ್ಟಡ ಉದ್ಘಾಟನೆಗೆ ಗೃಹ ಸಚಿವರೇ ಬರಬೇಕಾಗಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಾದರೂ ಉದ್ಘಾಟಿಸಬಹುದು” ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾದದ್ದು : ತಡೋಳಾ ಶ್ರೀ
ನೂತನ ಕಟ್ಟಡ ಉದ್ಘಾಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ಯಾದಗಿರಿ ಎಸ್‌ಪಿಯನ್ನು ಸಂಪರ್ಕಿಸಿದಾಗ ಮಾತನಾಡಿ, “ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಗೃಹ ಸಚಿವರು ಈ ಕುರಿತು ಚರ್ಚಿಸುತ್ತಿದ್ದಾರೆ. ಗೃಹ ಸಚಿವರು ಬರುವ ದಿನಾಂಕವನ್ನು ತಿಳಿಸಿದ ಕೂಡಲೇ ಉದ್ಘಾಟನೆಗೆ ಹಣಿಮಾಡಿಕೊಳ್ಳುತ್ತೇವೆ” ಎಂದು ಪ್ರತಿಕ್ರಿಯಿಸಿದರು.
ಈ ಸಂದರ್ಭದಲ್ಲಿ ಬಸವರಾಜ್ ಇಟಗಿ, ಬಾಬಾಖಾನ್, ಸಾಬಯ್ಯ, ವಿಶ್ವನಾಥ, ಭೀಮಶೆಪ್ಪ, ರಾಜು ಸೇರಿದಂತೆ ಹಲವರು ಇದ್ದರು.